ಪರಪ್ಪನ ಅಗ್ರಹಾರದಲ್ಲಿ ನಿಲ್ಲದ ಕಳ್ಳಾಟ: ನಿಷೇಧಿತ ವಸ್ತು ಜೈಲಿನೊಳಗೆ ತರುವಾಗ ಸಿಬ್ಬಂದಿ ಲಾಕ್​​

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ರಾಜಾತಿಥ್ಯಕ್ಕೆ ಐಪಿಎಸ್ ಅಧಿಕಾರಿ ನೇತೃತ್ವದ ತಂಡ ಬ್ರೇಕ್ ಹಾಕಲು ಮುಂದಾಗಿದ್ರೆ, ಇತ್ತ ಕೆಲ ಜೈಲು ಸಿಬ್ಬಂದಿ ಮಾತ್ರ ಕೈದಿಗಳ ತಾಳಕ್ಕೆ ತಕ್ಕಂತೆ ಕುಣಿಯೋದನ್ನ ಮುಂದುವರಿಸಿದ್ದಾರೆ. ಹಣದಾಸಗೆ ಮಾಡಬಾರದನ್ನು ಮಾಡಲು ಹೋಗಿ ಜೈಲು ಸಿಬ್ಬಂದಿಯೋರ್ವ ಈಗ ಲಾಕ್​​ ಆಗಿದ್ದಾನೆ. ಜೈಲಿನ ಹಲವು ವಿಡಿಯೋಗಳು ವೈರಲ್​​ ಆದ ಬಳಿಕವೂ ಇದರಿಂದ ಕೆಲ ಸಿಬ್ಬಂದಿಗಳು ಪಾಠ ಕಲಿತಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.

ಪರಪ್ಪನ ಅಗ್ರಹಾರದಲ್ಲಿ ನಿಲ್ಲದ ಕಳ್ಳಾಟ: ನಿಷೇಧಿತ ವಸ್ತು ಜೈಲಿನೊಳಗೆ ತರುವಾಗ ಸಿಬ್ಬಂದಿ ಲಾಕ್​​
ಪರಪ್ಪನ ಅಗ್ರಹಾರ
Edited By:

Updated on: Dec 07, 2025 | 7:25 AM

ಆನೇಕಲ್​​, ಡಿಸೆಂಬರ್​​ 07: ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅಕ್ರಮ-ಅನಾಚಾರಗಳು ಒಂದೆರಡಲ್ಲ. ಜೈಲಿನಲ್ಲಿ ಕೈದಿಗಳು ರಾಜಾತಿಥ್ಯ ಪಡೆಯುತ್ತಿರುವ ವಿಡಿಯೋಗಳು ವೈರಲ್ ಆಗಿ ಕೆಲ ಅಧಿಕಾರಿಗಳು ಅಮಾನತು, ಎತ್ತಂಗಡಿಯಾದರೂ ಜೈಲಿನ ಸಿಬ್ಬಂದಿ ಮಾತ್ರ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ರೀತಿ, ಕೈದಿಗಳನ್ನ ಶಿಕ್ಷಿಸಬೇಕಿದ್ದ ಪೊಲೀಸರೇ ಅವರು ನೀಡುವ ಹಣದಾಸೆಗೆ ಬಿದ್ದು ಮಾಡಬಾರದನ್ನು ಮಾಡುವ ಕೆಲಸಗಳು ಮುಂದುವರಿದಿದೆ. ನಿಷೇಧಿತ ವಸ್ತುಗಳನ್ನ ಜೈಲಿನೊಳಗೆ ಸಾಗಿಸಲು ಹೋಗಿ ಸಿಬ್ಬಂದಿಯೇ ಲಾಕ್​ ಆಗಿರುವ ಘಟನೆ ನಡೆದಿದೆ.

ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡದ ಒಂದೊಂದೇ ವಿಡಿಯೋಗಳು ಹೊರ ಬಂದ ಪರಿಣಾಮ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗಿತ್ತು. ಅದರಲ್ಲೂ ಘಟನೆ ಬೆನ್ನಲ್ಲೇ ಗರಂ ಆಗಿದ್ದ ಗೃಹ ಸಚಿವರು ಕೆಲ ಅಧಿಕಾರಿಗಳನ್ನು ಈ ಸಂಬಂಧ ಅಮಾನತು, ಇನ್ನು ಕೆಲವರನ್ನು ಎತ್ತಂಗಡಿ ಮಾಡಿದ್ದರು. ಅಲ್ಲದೆ, ಗೃಹ ಇಲಾಖೆ ಜೈಲಿನ ಮುಖ್ಯಸ್ಥರನ್ನಾಗಿ ಐಪಿಎಸ್ ಅಧಿಕಾರಿ ನೇಮಕ ಮಾಡುವ ಮೂಲಕ ಜೈಲಿನ ಅಕ್ರಮಗಳ ಕಡಿವಾಣಕ್ಕೆ ಕಸರತ್ತು ಮಾಡ್ತಿದೆ. ಹೀಗಿದ್ರೂ ಜೈಲಿನ ಸಿಬ್ಬಂದಿ ಮಾತ್ರ ತಮ್ಮ ಕಳ್ಳಾಟ ಬಿಡುತ್ತಿಲ್ಲ. ಕೈದಿಗಳು ನೀಡುವ ಹಣದಾಸೆಗೆ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಸಾಗಿಸಲು ಹೋಗಿ ರಾಹುಲ್ ಪಾಟೀಲ್ ಎಂಬ ಸಿಬ್ಬಂದಿ ತಗಲಾಕಿಕೊಂಡಿದ್ದಾನೆ. ಸಿಗರೇಟ್ ಮತ್ತು ನಿಷೇಧಿತ ಮಾದಕ ವಸ್ತುವನ್ನ ಜೈಲಿನೊಳಗೆ ಕೊಂಡೊಯ್ಯುವಾಗ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಜೈಲಿನ ಮುಖ್ಯದ್ವಾರದ ಬಳಿ ತಪಾಸಣೆ ನಡೆಸಿದಾಗ ದೇಹದ ಖಾಸಗಿ ಭಾಗದಲ್ಲಿ 2 ಸಿಗರೇಟ್ ಪ್ಯಾಕ್, 60 ಗ್ರಾಂ ನಿಷೇಧಿತ ವಸ್ತುಗಳು ಪತ್ತೆಯಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; FIR ದಾಖಲು, ಎನ್​​ಐಎ ಎಂಟ್ರಿ

ಇನ್ನು, ಪರಪ್ಪನ ಅಗ್ರಹಾರ ಜೈಲಿನ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಅಂಶುಕುಮಾರ್ ಅವರ ನೇಮಕದ ಬೆನ್ನಲ್ಲೇ, ಕೈದಿಗಳ ಸೆಲ್​​ಗಳ ಮೇಲೆ ದಾಳಿ ಮಾಡಿ ಮೊಬೈಲ್, ಸಿಗರೇಟ್, ಚಾಕು, ಚಾರ್ಜರ್ ಸೇರಿದಂತೆ ಇತ್ಯಾದಿ ನಿಷೇಧಿತ ವಸ್ತುಗಳನ್ನ ವಶಕ್ಕೆ ಪಡೆಯಲಾಗಿತ್ತು. ಇವೆಲ್ಲ ಕೈದಿಗಳ ಕೈಗೆ ಬಂದಿದ್ದೇಗೆ ಎಂದು ಪರಿಶೀಲನೆ ನಡೆಸಿದಾಗ, ಕೆಲ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಇದರಲ್ಲಿ ಶಾಮೀಲಾಗಿರೋದು ಗೊತ್ತಾಗಿತ್ತು. ಹೀಗಿದ್ರೂ ಕೆಲ ಸಿಬ್ಬಂದಿಗೆ ಮಾತ್ರ ಇನ್ನೂ ಬುದ್ಧಿ ಬಂದಿಲ್ಲ. ಒಂದು ಕಡೆ ಐಪಿಎಸ್ ಅಧಿಕಾರಿ ನೇತೃತ್ವದ ತಂಡ ಕೈದಿಗಳ ರಾಜಾತಿಥ್ಯಕ್ಕೆ ಬ್ರೇಕ್ ಹಾಕಲು ಮುಂದಾಗಿದ್ರೆ, ಇತ್ತ ಕೆಲ ಜೈಲು ಸಿಬ್ಬಂದಿ ಮಾತ್ರ ಕೈದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರೋದು ನಿಜಕ್ಕೂ ದುರ್ದೈವ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.