ಬೆಂಗಳೂರು, ಜೂನ್ 19: ಬೆಂಗಳೂರಿನಲ್ಲಿ ಜನಸಂಖ್ಯೆಗಿಂತ ವಾಹನ ಸಂಖ್ಯೆಯೇ ಹೆಚ್ಚಾಗಿರುವುದು ಒಂದು ರೀತಿಯ ದುರಂತ. ಹೀಗಾಗಿಯೇ ನಗರ ಟ್ರಾಫಿಕ್ ಜಾಮ್ (Bengaluru Traffic Jam) ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ಜೊತೆಜೊತೆಗೆ ಪಾರ್ಕಿಂಗ್ ಸಮಸ್ಯೆ (Parking Problem) ಕೂಡ ವಾಹನ ಸವಾರರನ್ನು ನಿತ್ಯ ಕಾಡುತ್ತಿದೆ. ಸದ್ಯ ಈ ಸಮಸ್ಯೆ ರಾಜ್ಯದ ಶಕ್ತಿ ಸೌಧ ಎಂದೇ ಕರೆಸಿಕೊಳ್ಳುವ ವಿಧಾನಸೌಧ, ವಿಕಾಸಸೌಧ ಸುತ್ತಮುತ್ತಲೇ ತೀವ್ರಗೊಂಡಿದೆ. ಇದಕ್ಕೆ ಪರಿಹಾರ ನೀಡದ ಸರ್ಕಾರದ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ಕಚೇರಿ ಕೆಲಸಗಳ ನಿಮಿತ್ತ ನಿತ್ಯ ಸಾವಿರಾರು ಮಂದಿ ಸಾರ್ವಜನಿಕರ ಓಡಾಟಕ್ಕೆ ಸಾಕ್ಷಿಯಾಗುವ ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್, ಲೋಕಾಯುಕ್ತ, ಮಾಹಿತಿ ಆಯೋಗ, ಕೆಪಿಎಸ್ಸಿ, ಕಬ್ಬನ್ ಪಾರ್ಕ್, ಕರ್ನಾಟಕ ಲೋಕೋಪಯೋಗಿ ಇಲಾಖೆ ಭಾಗಗಳಲ್ಲಿ ಪಾರ್ಕಿಂಗ್ ಮಾಡಲು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
ವಾಹನ ನಿಲುಗಡೆಗೆ ಸರಿಯಾದ ಜಾಗ ಇಲ್ಲೇ ಇರುವ ಕಾರಣ ‘ನೋ ಪಾರ್ಕಿಂಗ್’ ಜಾಗಗಳಲ್ಲಿ ಪಾರ್ಕ್ ಮಾಡುತ್ತಾ ಅಥವಾ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವುದು ಸಾಮಾನ್ಯವಾಗಿದೆ. ಇದು ವಾಹನ ದಟ್ಟಣೆ ಹೆಚ್ಚಾಗಲು ಮತ್ತು ಸಂಚಾರ ದಟ್ಟಣೆಗೆ ಕಾರಣವಾಗಿದೆ.
ಇದನ್ನೂ ಓದಿ: ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ಸ್ಥಾಪನೆಗೆ ಮುಂದಾದ ಬಿಎಂಆರ್ಸಿಎಲ್: ಸಾರ್ವಜನಿಕರಿಂದ ಆಕ್ಷೇಪ
ಒಟ್ಟಾರೆಯಾಗಿ, ಮಹಾನಗರ ಬೆಂಗಳೂರಿನಾದ್ಯಂತ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಮಾಡಿಕೊಡುತ್ತೇವೆ ಎಂದು ಹೇಳಿಕೊಳ್ಳುವ ಸರ್ಕಾರಕ್ಕೆ ತನ್ನ ಶಕ್ತಿ ಕೇಂದ್ರ, ಇಲಾಖೆಯ ಪ್ರಧಾನ ಕಚೇರಿಗಳು ಇರುವ ಕಡೆಯಲ್ಲೇ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಕೊಡುವುದಕ್ಕೆ ಸಾಧ್ಯವಾಗಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸದೆ ಇದ್ದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರ ಆಗಲಿದೆ.
ವರದಿ: ಲಕ್ಷ್ಮಿ ನರಸಿಂಹ, ‘ಟಿವಿ9’ ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ