ಬೆಂಗಳೂರು, ಫೆಬ್ರವರಿ 21: ವಿಮಾನ ಹೊರಡುವುದಕ್ಕೂ ಕೆಲವೇ ಕ್ಷಣಗಳ ಮುನ್ನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ ವಿಚಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಇತ್ತೀಚೆಗೆ ನಡೆದಿತ್ತು. ಇದರ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಅಂಥದ್ದೇ ಘಟನೆ ನಡೆದಿದೆ. ಪ್ರಯಾಣಿಕನೋರ್ವ, ತಾನು ಉಗ್ರಗಾಮಿ (Terrorist) ಎಂದು ಏರ್ ಇಂಡಿಯಾ (Air India) ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ.
ಸದ್ಯ ಆರೋಪಿ ಕೆಂಪೇಗೌಡ ಏರ್ಪೋರ್ಟ್ ಠಾಣೆ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ. ಕೆಂಪೇಗೌಡ ಏರ್ಪೋರ್ಟ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆರೋಪಿ ಆದರ್ಶ್ ಕುಮಾರ್ ಸಿಂಗ್ ಎಂಬಾತ ಫೆಬ್ರವರಿ 17ರಂದು ಬೆಂಗಳೂರಿನಿಂದ ಲಖನೌಗೆ ಹೊರಟಿದ್ದ. ವಿಮಾನ ಏರಲು ತೆರಳಿದ್ದ ಆತ ಕೊನೇ ಕ್ಷಣದಲ್ಲಿ ಹಿಂತಿರುಗಿ ವಾಪಸ್ ತೆರಳಲು ಮುಂದಾಗಿದ್ದ. ಈ ಬಗ್ಗೆ ಏರ್ ಇಂಡಿಯಾ ಸಿಬ್ಬಂದಿ ಭದ್ರತಾ ಪಡೆಗೆ ಮಾಹಿತಿ ನೀಡಿದ್ದರು. ಇದೇ ವೇಳೆ, ವಿಮಾನ ಹತ್ತದೆ ಯಾಕೆ ವಾಪಸ್ ತೆರಳುತ್ತಿದ್ದೀರಿ ಎಂದು ಏರ್ಪೋರ್ಟ್ ಭದ್ರತಾ ಪಡೆ ಸಿಬ್ಬಂದಿ ಪ್ರಶ್ನಿಸಿದ್ದಾರೆ.
ಭದ್ರತಾ ಸಿಬ್ಬಂದಿಯ ಪ್ರಶ್ನೆಗೆ ಆದರ್ಶ್ ಕುಮಾರ್ ಸಿಂಗ್, ‘ನಾನು ಭಯೋತ್ಪಾದಕರ ಗುಂಪಿಗೆ ಸೇರಿದವನು. ನಾನು ಲಖನೌಗೆ ತೆರಳಲ್ಲ’ ಎಂದು ಬೆದರಿಕೆ ಹಾಕಿದ್ದ. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಬೆಂಗಳೂರಿನಿಂದ ಕೊಚ್ಚಿಗೆ ತೆರಳುವ ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರು ಬ್ಯಾಗ್ನಲ್ಲಿ ಬಾಂಬ್ ಇದೆ ಎಂಬರ್ಥದಲ್ಲಿ ನೀಡಿದ್ದ ಹೇಳಿಕೆ ಕಳೆದ ತಿಂಗಳು ಸಮಸ್ಯೆಗೆ ಕಾರಣವಾಗಿತ್ತು. ಬಳಿಕ ಆರೋಪಿಯನ್ನು ಕೆಂಪೇಗೌಡ ಏರ್ಪೋರ್ಟ್ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪಿ ಸಜು ಕೆ ಕುಮಾರನ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 505 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ವಿಮಾನ ಹೊರಡುವುದಕ್ಕೂ ಕೆಲವೇ ಕ್ಷಣ ಮುನ್ನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದ ವ್ಯಕ್ತಿ!
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಥ ಕೆಲವು ಘಟನೆಗಳು ಇತ್ತೀಚೆಗೆ ಪದೇಪದೆ ವರದಿಯಾಗುತ್ತಿರುವುದು ಭದ್ರತಾ ಪಡೆಗಳ ತಲೆನೋವಿಗೆ ಕಾರಣವಾಗಿದೆ. ಹುಸಿ ಬಾಂಬ್ ದಾಳಿ ಕರೆಗಳು, ದಾಳಿ ಬೆದರಿಕೆಗಳು ಹಾಗೂ ಹುಸಿ ಬೆದರಿಕೆಗಳು ಭದ್ರತಾ ಪಡೆಗಳ ನಿದ್ದೆಗೆಡಿಸಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:17 am, Wed, 21 February 24