ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ; ಸಚಿವ ಈಶ್ವರ್ ಖಂಡ್ರೆ ಸಮರ್ಥನೆ ಹೀಗಿದೆ
ಕೇರಳದಲ್ಲಿ ಆನೆ ದಾಳಿಗೆ ವ್ಯಕ್ತಿ ಮೃತಪಟ್ಟಿದ್ದು ಕರ್ನಾಟಕ ಸರ್ಕಾರ ಪರಿಹಾರ ನೀಡಿದೆ. ಆನೆ ಕರ್ನಾಟಕದ್ದು ಎಂಬ ಕಾರಣಕ್ಕೆ ನಮ್ಮ ತೆರಿಗೆ ಹಣವನ್ನು ರಾಹುಲ್ ಗಾಂಧಿ ಕ್ಷೇತ್ರದ ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ಭಾರೀ ಚರ್ಚೆಗಳಾಗುತ್ತಿವೆ. ಬಿಜೆಪಿ ನಾನಾ ರೀತಿಯಲ್ಲಿ ಕಾಂಗ್ರೆಸ್ನನ್ನು ಪ್ರಶ್ನಿಸಿದೆ. ಸದ್ಯ ಈ ಬಗ್ಗೆ ಈಗ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, ಫೆ.21: ಕೇರಳದಲ್ಲಿ (Kerala) ಆನೆ ದಾಳಿಯಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಕ್ಕೆ ಕರ್ನಾಟಕ ಸರ್ಕಾರ (Karnataka Government) ಪರಿಹಾರ ನೀಡಿರುವ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೂಚನೆ ನೀಡಿದಕ್ಕೆ ಅವರು ಪ್ರತಿನಿಧಿಸುವ ವಯನಾಡು ಲೋಕಸಭಾ ಕ್ಷೇತ್ರದ ವ್ಯಕ್ತಿಗೆ ಪರಿಹಾರ ನೀಡುವುದು ಸರಿಯೇ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಕರ್ನಾಟಕ ಸರ್ಕಾರ, ರಾಜ್ಯದ ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಅವಮಾನಕರ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ಇದೆಲ್ಲದರ ನಡುವೆ ಈಗ Tv9ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಪ್ರತಿಕ್ರಿಯೆ ನೀಡಿದ್ದು ನಮ್ಮ ಸರ್ಕಾರ ಪರಿಹಾರ ನೀಡಲು ಕಾರಣವೇನು ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ತೆರಿಗೆ ನಮ್ಮ ಹಕ್ಕಿಗೂ, ಘೋಷಿಸಿರುವ ಪರಿಹಾರಕ್ಕೂ ಯಾವುದೇ ಸಂಬಧವಿಲ್ಲ. ದಯೆ ಮತ್ತು ಮಾನವೀಯತೆಯ ಆಧಾರದ ಮೇಲೆ ಪರಿಹಾರ ಘೋಷಣೆ ಮಾಡಿದ್ದೇವೆ. ದಯವೇ ಧರ್ಮದ ಮೂಲವಯ್ಯ ಅಂತ ವಿಶ್ವಗುರು ಬಸವಣ್ಣ ಹೇಳಿದ್ದಾರೆ. ಮೃತಪಟ್ಟ ವ್ಯಕ್ತಿಗೆ ಮಾನವೀಯತೆಯ ಆಧಾರವಾಗಿ ಪರಿಹಾರ ಘೋಷಣೆ ಮಾಡಿದ್ರೆ, ಅದಕ್ಕೆ ಬಿಜೆಪಿಯವರು ತಕರಾರು ಮಾಡ್ತಾರೆ ಅಂದರೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಅದು ನಮ್ಮ ಆನೆ, ನ.30ರಂದು ಹಾಸನದ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಈ ಆನೆಯನ್ನ ಸೆರೆ ಹಿಡಿಯಲಾಯ್ತು. ಆ ಆನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಈ ಆನೆಗೆ ಸ್ಥಳೀಯರು ಬೇಡ ಅಂದಿದ್ದಕ್ಕೆ ಬಂಡಿಪುರ ಅರಣ್ಯ ಪ್ರದೇಶಕ್ಕೆ ಬಿಡಲಾಯ್ತು. ಬಂಡಿಪುರದಿಂದ ಈ ಆನೆ ಕ್ರಾಸ್ ಆಗಿ ಕೇರಳ ಕಡೆಗೆ ಹೋಗಿದೆ. ಆಗ ಕೇರಳದಲ್ಲಿ ಆನೆ ತುಳಿತಕ್ಕೆ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಆ ವ್ಯಕ್ತಿಯ ಪರಿವಾರದ ಪರಿಸ್ಥಿತಿ ಏನಿದೆ ನೋಡಿದ್ದೀರಾ? ವಿಧವೆ ಮಹಿಳೆ, ಆತನ ಮಕ್ಕಳ ಬಗ್ಗೆ ಮಾನವೀಯತೆ ಇರಬಾರದಾ? ದಯೆ ಇರಬಾರದಾ? ಬಿಜೆಪಿಯವರು ಇಷ್ಟು ಅಮಾನವೀಯವಾಗಿ ವರ್ತನೆ ಮಾಡ್ಬೇಕಾ? ಪ್ರತಿಯೊಂದಕ್ಕೂ ರಾಜಕೀಯ ಮಾಡ್ಬೇಕಾ?ಸಾವಿನಲ್ಲೂ ರಾಜಕೀಯನಾ? ಜನರ ಹೆಣದ ರಾಶಿಯ ಮೇಲೆ ರಾಜಕೀಯ ಮಾಡುವಂತವರು ಈ ರೀತಿ ವಿಚಾರ ಮಾಡ್ತಾರೆ. ಇದು ಸರಿಯಾದ ಭಾವನೆ ಅಲ್ಲ ಎಂದು ಈಶ್ವರ್ ಖಂಡ್ರೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿಗೆ ಮಾನವೀಯತೆ ಇಲ್ಲದೇ ಇರುವುದು ದುರದೃಷ್ಟಕರ
ರಾಹುಲ್ ಗಾಂಧಿ ಕೇರಳದ ಸಂಸದರು. ಒಬ್ಬ ಸಂಸದರು ಕರ್ನಾಟಕಕ್ಕೆ ಮನವಿ ಮಾಡ್ತಾರೆ. ದಾಳಿ ಮಾಡಿದ ಆನೆ ಕರ್ನಾಟಕದ್ದು ಅಂತ ಮೃತನ ಪರಿವಾರದವರು ರಾಹುಲ್ ಬಳಿ ಹೇಳಿದ್ದಾರೆ. ನೀವು ಹೇಳಿದ್ರೆ ಪರಿಹಾರ ಸಿಗಬಹುದು ಅಂತ ಮೃತನ ಪರಿವಾರದವರು ರಾಹುಲ್ ಅವರ ಬಳಿ ಕಣ್ಣೀರಿಟ್ಟಿದ್ದಾರೆ. ರಾಹುಲ್ ಗಾಂಧಿಯವರು ಒತ್ತಡ ಹಾಕಿಲ್ಲ. ಬೇರೆ ಬೇರೆ ರಾಷ್ಟ್ರಗಳಲ್ಲಿ ಸುನಾಮಿ, ಭೂಕಂಪ, ಪ್ರಕೃತಿ ವಿಕೋಪ ಆಗಿದ್ದಾಗ ಪರಿಹಾರಕ್ಕೆ ಬೇರೆ ಬೇರೆ ರಾಷ್ಟ್ರಗಳನ್ನ ಕೇಳ್ತಾರೆ. ನಾವು ಬೇರೆ ರಾಷ್ಟ್ರದಿಂದ, ಬೇರೆ ರಾಷ್ಟ್ರ ನಮ್ಮಿಂದ ಯಾವತ್ತೂ ಸಹಕಾರ ಪಡೆದುಕೊಂಡಿಲ್ವಾ? ಪರಿಹಾರ ತೆಗೆದುಕೊಂಡಿಲ್ವಾ? ಇದಕ್ಕೆ ವಿರೋಧ ಮಾಡುವವರು ಉತ್ತರ ಕೊಡ್ಲಿ. ಪರಿಹಾರ ಕೊಟ್ಟಿದ್ದೇ ದೊಡ್ಡದಾಯ್ತು ಅಂತ ಕಿರುಚಾಡುತ್ತಿದ್ದಾರೆ. ರಾಜಕೀಯ ಮಾಡ್ತಿದ್ದಾರೆ, ಇವರು ಏನು ಮಾಡ್ತಿದ್ದಾರೆ ಅಂತ ಜನ ಗಮನಿಸುತ್ತಿದ್ದಾರೆ. ಮಾನವೀಯತೆ ಇಲ್ಲದೇ ಇರುವುದು ದುರದೃಷ್ಟಕರ ಎಂದರು.
ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು
ಇಲ್ಲಿ ಆನೆ ದಾಳಿಗೆ ಒಳಗಾದವರಿಗೆ 5 ಲಕ್ಷ ರೂ. ಪರಿಹಾರ ಎಂಬ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಈಶ್ವರ್ ಖಂಡ್ರೆ ತಿರುಗೇಟು ನೀಡಿದರು. ಕುಮಾರಸ್ವಾಮಿಗೆ ಯಾರು ಸಲಹೆಗಳನ್ನ ಕೊಡ್ತಿದ್ದಾರೊ ಗೊತ್ತಿಲ್ಲ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಯಾಕೆ ಈ ರೀತಿ ಸುಳ್ಳು ಹೇಳಿಕೆ ನೀಡ್ತಿದ್ದಾರೆ. ಜವಬ್ದಾರಿಯುತವಾದ ಸ್ಥಾನದಲ್ಲಿ ಕುಮಾರಸ್ವಾಮಿ ಇದ್ದಾರೆ. ಕರ್ನಾಟಕದಿಂದ 15 ಲಕ್ಷ ರೂ. ಪರಿಹಾರ ಕೊಡ್ತಾ ಇದ್ದೀವಿ. ನಾನು ಸಚಿವನಾದ್ಮೇಲೆ ವಿಳಂಬ ಮಾಡದೇ ರಾಜ್ಯದಲ್ಲೂ ಪರಿಹಾರ ನೀಡ್ತಿದ್ದೇನೆ. ಕನಕಪುರ, ಹಾಸದಲ್ಲಿ ಆದ ಘಟನೆಗಳಿಗೆ 15 ಲಕ್ಷ ರೂ. ಪರಿಹಾರ ನೀಡಿದ್ದೇವೆ. ರಾಜ್ಯದಲ್ಲಿ ಈವರೆಗೆ ಮೃತಪಟ್ಟ ಯಾವುದೇ ವ್ಯಕ್ತಿಯ ಪರಿಹಾರ ಬಾಕಿ ಇಲ್ಲ. ಎಲ್ಲ ಪರಿಹಾರಗಳನ್ನು ನಾವು ಸರ್ಕಾರದ ವತಿಯಿಂದ ಕೊಟ್ಟಿದ್ದೇವೆ. ವಾಸ್ತವ ಅರಿಯದೆ ಈ ರೀತಿ ಹೇಳಿಕೆ ಕೊಡೋದು ಸರಿನಾ? ಆಲೋಚನೆ ಮಾಡಲಿ ಎಂದು ತಿರುಗೇಟು ನೀಡಿದರು.
ಇನ್ನು ಇದೇ ವೇಳೆ ಪ್ರತಿ ಹೆಕ್ಟರ್ ಗೆ ರೈತರಿಗೆ 2 ಸಾವಿರ ರೂ. ಭಿಕ್ಷೆ ಕೊಟ್ಟಿದ್ದಾರೆ ಎಂಬ ಬಿ.ವೈ. ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಸರ್ಕಾರ 52 ಸಾವಿರ ಕೋಟಿ ರೂ. 1 ಕೋಟಿ ಪರಿವಾರದವರಿಗೆ ಕೊಡ್ತಾ ಇದ್ದೀವಿ. ಸುಮಾರು 4 ಕೋಟಿ ಜನರು ಇದರ ಲಾಭ ಪಡೆಯುತ್ತಿದ್ದಾರೆ. ರೈತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನ ನಾವು ಕೊಟ್ಟಿದ್ದೇವೆ. ಇವರಿಗೆ ಜವಾಬ್ದಾರಿ ಇತ್ತು, ಕೇಂದ್ರಕ್ಕೆ ಹೋಗಬೇಕಿತ್ತು. ಕೇಂದ್ರ ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಒಂದು ನಯಾ ಪೈಸೆ ಹಣ ಬಿಡುಗಡೆ ಮಾಡಿಲ್ಲ. 4 ಲಕ್ಷ 30 ಸಾವಿರ ಕೋಟಿ ರೂ. ಕೇಂದ್ರಕ್ಕೆ ರಾಜ್ಯದಿಂದ ತೆರಿಗೆ ಹೋಗ್ತಾ ಇದೆ. ನಾವು ಇವತ್ತು 10 ಸಾವಿರ ಕೋಟಿ ರೂ. ಪರಿಹಾರ ಕೇಳಿದ್ರೆ, 5 ತಿಂಗಳುಗಳಿಂದ ಒಂದು ನಯಾ ಪೈಸೆ ಹಣವನ್ನೂ ಬಿಡುಗಡೆ ಮಾಡಿಲ್ಲ. ಯಾವ ನೈತಿಕತೆ ಇದೆ? ಏನು ಮಾತನಾಡ್ತಿದ್ದೀರಿ? ಜನ ನೀವು ಹೇಳಿದ್ದೆಲ್ಲ ಸತ್ಯ ಅಂತ ಅಂದುಕೊಳ್ತಾರಾ? ಈ ಬಗ್ಗೆ ಆಲೋಚನೆ ಮಾಡಿ ಎಂದು ಆಕ್ರೋಶ ಹೊರ ಹಾಕಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:12 pm, Wed, 21 February 24