ಬೆಂಗಳೂರು, ಅಕ್ಟೋಬರ್ 04: ಬೆಂಗಳೂರು ಮಹಾನಗರ ಸಾರಿಗೆ (BMTC) ಬಸ್ ನಿರ್ವಾಹಕನಿಗೆ ಚಾಕು ಇರಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹಲ್ಲೆ ಮತ್ತು ಬೆದರಿಕೆ ಘಟನೆ ನಡೆದಿದೆ. ಪ್ರಯಾಣಿಕ ಬಿಎಂಟಿಸಿ ಬಸ್ ನಿರ್ವಾಹಕ ಮತ್ತು ಚಾಲಕನಿಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿದ್ದಾನೆ.
ಗುರುವಾರ ಸಂಜೆ 4:15ರ ಸುಮಾರಿಗೆ ಬಿಎಂಟಿಸಿ ವೋಲ್ವೋ ಬಸ್ ಅತ್ತಿಬೆಲೆಯಿಂದ ಮೆಜಸ್ಟಿಕ್ಗೆ ಹೋಗುತ್ತಿತ್ತು. ಬೆದರಿಕೆ ಹಾಕಿದ ಪ್ರಯಾಣಿಕ ಕೊನಪ್ಪನ ಅಗ್ರಹಾರದಲ್ಲಿ ಬಸ್ ಹತ್ತಿದ್ದಾನೆ. ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ನೀಡುವ ಸಂಬಂಧ ಬಸ್ ಅನ್ನು ಅದೇ ನಿಲ್ದಾಣದಲ್ಲಿ ಕೆಲ ಹೊತ್ತು ನಿಲ್ಲಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕ ಹೊಸ ರೋಡ್ ಬಸ್ ನಿಲ್ದಾಣದಲ್ಲಿ ಬಸ್ನಿಂದ ಇಳಿದು, ಬ್ಯಾಗ್ನಲ್ಲಿದ್ದ ಸ್ಕ್ರೂಡ್ರೈವರ್ ತೆಗೆದು, ಚಾಲಕ ಮತ್ತು ನಿರ್ವಾಹಕನಿಗೆ ತೋರಿಸಿ, ಚುಚ್ಚಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: ಕಂಡಕ್ಟರ್, ಡ್ರೈವರ್ಗಳ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಬಿಎಂಟಿಸಿ ಎಂಡಿಗೆ ಪತ್ರ
ನಿರ್ವಾಹಕನಿಗೆ ಚಾಕು ಇರಿತ
ಅಕ್ಟೋಬರ್ 1 ರಂದು ಬೆಂಗಳೂರಿನ ವೈಟ್ಫೀಲ್ಡ್ ಬಳಿಯ ITPL ಬಸ್ ಸ್ಟಾಪ್ ಬಳಿ ಪ್ರಯಾಣಿಕನೋರ್ವ ಬಿಎಂಟಿಸಿ ಬಸ್ ನಿವಾರ್ವಾಹಕನಿಗೆ ಚಾಕುವಿನಿಂದ ಇರಿದಿದ್ದನು. ಅಂದು ಸಂಜೆ ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್ ನಲ್ಲಿ KA- 57-F0015 ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್ಗೆ ಅಪರಿಚಿತ ವ್ಯಕ್ತಿ ಎರಡ್ಮೂರು ಬಾರಿ ಚಾಕುವಿನಿಂದ ಇರಿದಿದ್ದನು. ಪ್ರಯಾಣಿಕರು ತುಂಬಿದ್ದ ಬಸ್ ನಲ್ಲಿ ಈ ದುಷ್ಕೃತ್ಯ ನಡೆದಿತ್ತು.
ಕಂಡಕ್ಟರ್ ಯೋಗೇಶ್ಗೆ ಎರಡ್ಮೂರು ಬಾರಿ ಚಾಕುವಿನಿಂದ ಇರಿದ ಬಳಿಕ ಬಸ್ನ ಗಾಜುಗಳಿಗೆ ಸುತ್ತಿಗೆ ತೆಗೆದುಕೊಂಡು ಗಾಜು ಪುಡಿಗಟ್ಟಿ ಹುಚ್ಚನಂತೆ ವರ್ತಿಸಿದ್ದನು. ಇದನ್ನು ನೋಡಿ ಸಹ ಪ್ರಯಾಣಿಕರು ಕಿರುಚಾಡಿಕೊಂಡು ಬಸ್ನಿಂದ ಕೆಳಗೆ ಇಳಿದು ಓಡಿ ಹೋಗಿದ್ದರು. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವೈಟ್ಫೀಲ್ಡ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಇನ್ನು, ಚಾಕು ಇರಿತಕ್ಕೆ ಒಳಗಾಗಿರುವ ಕಂಡಕ್ಟರ್ ಯೋಗೇಶ್ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Fri, 4 October 24