ಬೆಂಗಳೂರು, ಆಗಸ್ಟ್ 26: ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ. ಹೀಗಾಗಿ ಸಾಧನೆ ಮಾಡಿದ ವಿಜ್ಞಾನಿಗಳ ಅಭಿನಂದಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಆ.26) ಬೆಂಗಳೂರಿಗೆ ಆಗಮಿಸಲಿದ್ದಾರೆ. ಪೀಣ್ಯದಲ್ಲಿರುವ ಇಸ್ರೋ (ISRO) ಸೆಂಟರ್‌ಗೆ ಭೇಟಿ ನೀಡಿ, ವಿಜ್ಞಾನಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಮೋದಿ ಬರುವ ಮಾರ್ಗದಲ್ಲಿ ಸಂಚಾರ ಬಂದ್ ಆಗಿರಲಿದೆ. ದಕ್ಷಿಣ ಆಫ್ರಿಕಾ, ಗ್ರೀಕ್ ಪ್ರವಾಸ ಮುಗಿಸಿರುವ ಪ್ರಧಾನಿ ಮೋದಿ, ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ ಬೆಂಗಳೂರಿಗೆ ಹೆಚ್‌ಎಎಲ್ ಏರ್‌ಪೋರ್ಟ್ ಆಗಮಿಸಲಿರುವ ಮೋದಿ, ಅಲ್ಲಿಂದ ನೇರವಾಗಿ ಇಸ್ರೋ ಸೆಂಟರ್‌ಗೆ ಆಗಮಿಸಲಿದ್ದಾರೆ.
ನಾಳೆ ಬೆಳಗ್ಗೆ 6 ಗಂಟೆಗೆ HAL ಏರ್‌ಪೋರ್ಟ್‌ಗೆ ಮೋದಿ ಆಗಮಿಸಲಿದ್ದು, 6.30ಕ್ಕೆ ಏರ್‌ಪೋರ್ಟ್‌ನಿಂದ ನಿರ್ಗಮಿಸಲಿದ್ದಾರೆ. HAL ಏರ್‌ಪೋರ್ಟ್‌ನಿಂದ ಓಲ್ಡ್ ಮದ್ರಾಸ್ ರೋಡ್ ಮಾರ್ಗವಾಗಿ ಟ್ರಿನಿಟಿ ಸರ್ಕಲ್ ತಲುಪಲಿದ್ದಾರೆ. ಅಲ್ಲಿಂದ ಎಂ.ಜಿ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್, ಬಳ್ಳಾರಿ ರಸ್ತೆ, ಕಾವೇರಿ ಜಂಕ್ಷನ್, ಸ್ಯಾಂಕಿ ಟ್ಯಾಂಕ್ ರಸ್ತೆಯ ಮಾರ್ಗವಾಗಿ ಯಶವಂತಪುರ ತಲುಪಲಿದ್ದಾರೆ. ಅಲ್ಲಿಂದ ತುಮಕೂರು ರಸ್ತೆಯ ಮಾರ್ಗವಾಗಿ ಗೊರಗೊಂಟೆ ಪಾಳ್ಯ, ಜಾಲಹಳ್ಳಿ ಕ್ರಾಸ್ ಮಾರ್ಗವಾಗಿ ಪೀಣ್ಯ ಇಸ್ರೋಗೆ ತಲುಪಲಿದ್ದಾರೆ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ: ಆ.26ರಂದು ಬೆಂಗಳೂರಿಗೆ ನರೇಂದ್ರ ಮೋದಿ, ರಸ್ತೆ ಸಂಚಾರದಲ್ಲಿ ಭಾರೀ ಬದಲಾವಣೆ, ಎಲ್ಲೆಲ್ಲಿ ನೋಡಿ..
8 ಗಂಟೆಯವರೆಗೆ ಇಸ್ರೋ ಕಚೇರಿಯಲ್ಲಿ ಮೋದಿ ಸಭೆ ನಡೆಸಲಿದ್ದಾರೆ. ಇದೇ ವೇಳೆ ಇಸ್ರೋ ವಿಜ್ಞಾನಿಗಳನ್ನ ಅಭಿನಂದಿಸಲಿದ್ದಾರೆ. ಬಳಿಕ ಬೆಳಗ್ಗೆ 8.35ಕ್ಕೆ ಬೆಂಗಳೂರಿನಿಂದ ದೆಹಲಿಗೆ ಮೋದಿ ನಿರ್ಗಮಿಸಲಿದ್ದಾರೆ. ರಸ್ತೆ ಮಾರ್ಗದಲ್ಲಿ ಪ್ರಧಾನಿ ಮೋದಿ ತೆರಳಲಿದ್ದಾರೆ. ಹೀಗಾಗಿ ಮೋದಿ ಸಾಗುವ ಮಾರ್ಗದಲ್ಲಿ ಸಂಚಾರ
ನಿರ್ಬಂಧ ಇರಲಿದ್ದು, ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದಾಕ್ಷಣ ರಾಜ್ಯ ಬಿಜೆಪಿ ನಾಯಕರೆಲ್ಲ ಅಲರ್ಟ್ ಆಗಿದ್ದು, ನಿನ್ನೆಯೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅದ್ದೂರಿ ಸ್ವಾಗತ ಕೋರುವ ಪ್ಲ್ಯಾನ್ ಮಾಡಿದ್ದರು. 1 ಕಿಲೋ ಮೀಟರ್ ರೋಡ್ ಶೋ ನಡೆಸಲಾಗುತ್ತೆ ಅಂತ ಹೇಳಲಾಗಿತ್ತು. ಆದರೆ ಅಧಿಕೃತವಾಗಿ ಯಾವುದೇ ರೋಡ್ ಶೋ ಪ್ಲ್ಯಾನ್ ಇಲ್ಲ ಅಂತಾ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.
ಕೆಲ ಸ್ಥಳಗಳಲ್ಲಿ ಜನರು ಜಮಾಯಿಸುವ ಸಾಧ್ಯತೆ ಬಗ್ಗೆ ಮಾಹಿತಿ ಇದೆ. ಆದರೆ ಇಂದು ಅಧಿಕೃತವಾಗಿ ಪ್ರಧಾನಮಂತ್ರಿ ಮೋದಿ ರೋಡ್ ಶೋ ಇರಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸ್ಪಷ್ಟನೆ ನೀಡಿದ್ದಾರೆ. ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಾರೆ. ಹೆಚ್‌ಎಎಲ್‌ನಿಂದ ಪೀಣ್ಯದ ಇಸ್ರೋ ಕೇಂದ್ರದವರೆಗೂ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:07 pm, Fri, 25 August 23