ಪರಿಸರ ಸಂರಕ್ಷಣೆ ಮತ್ತು ಕನ್ನಡ ಸಂಸ್ಕೃತಿ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಸುರೇಶ ಕುಮಾರರನ್ನು ಮನ್ ಕೀ ಬಾತ್ ನಲ್ಲಿ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ಅವರ ನಿರ್ಧಾರ ಅನೇಕ ಸವಾಲುಗಳಿಂದ ಕೂಡಿತ್ತು. ಆದರೆ, 20 ವರ್ಷಗಳ ಹಿಂದೆ ಅವರು ನೆಟ್ಟ ಸಸಿಗಳು ಈಗ 40-ಅಡಿ ಎತ್ತರದ ಮರಗಳಾಗಿ ಬೆಳೆದಿವೆ. ಅವರು ಬೆಳೆಸಿದ ಕಾಡಿನ ಸೊಬಗನ್ನು ನೋಡಿ ಜನ ಸಂತೋಷಪಡುತ್ತಿದ್ದಾರೆ ಮತ್ತು ಪ್ರೇರೇಪಣೆ ಪಡೆದುಕೊಳ್ಳುತ್ತಿದ್ದಾರೆ.

ಪರಿಸರ ಸಂರಕ್ಷಣೆ ಮತ್ತು ಕನ್ನಡ ಸಂಸ್ಕೃತಿ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಸುರೇಶ ಕುಮಾರರನ್ನು ಮನ್ ಕೀ ಬಾತ್ ನಲ್ಲಿ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ
ಕನ್ನಡಿಗನನ್ನು ಶ್ಲಾಘಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Oct 31, 2022 | 11:47 AM

ಬೆಂಗಳೂರು: ಕನ್ನಡಿಗರು ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಕೆಲವು ನಿವಾಸಿಗಳು ಪರಿಸರ ಸಂರಕ್ಷಣೆಗಾಗಿ ಮಾಡುತ್ತಿರುವ ಪ್ರಯತ್ನಗಳು ನಮಗೆ ಗೊತ್ತಿಲ್ಲದಿಲ್ಲ. ಪರಿಸರದ ಉಳಿವಿಗಾಗಿ, ಸಮಾಜದ ಒಳಿತಿಗಾಗಿ ಶ್ರಮಿಸುವ ಜನರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಬಹುಬೇಗ ಗುರುತಿಸಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ನಲ್ಲಿ (Mann Ki Baat) ಉಲ್ಲೇಖಿಸುತ್ತಾ ಅವರು ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸುತ್ತಾರೆ. ನಿನ್ನೆಯ ಬಾನುಲಿ ಪ್ರಸಾರದಲ್ಲಿ ಅವರು ಬೆಂಗಳೂರು ನಿವಾಸಿ ಸುರೇಶ ಕುಮಾರ (Suresh Kumar) ಅವರು ಪರಿಸರ ಮತ್ತು ಪ್ರಕೃತಿ ಸಂರಕ್ಷಣೆಗಾಗಿ ನಡೆಸುತ್ತಿರುವ ಕೆಲಸಗಳನ್ನು ಕೊಂಡಾಡಿದರು. ಸುರೇಶ ಅವರಿಂದ ಭಾರತೀಯರು ಸಾಕಷ್ಟು ಕಲಿಯಬೇಕಿದೆಯೆಂದು ಪ್ರಧಾನಿಗಳು ಹೇಳಿದರು.

ದೇಶದ ಟೆಕ್ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಿನ ಸಹಕಾರ ನಗರ ನಿವಾಸಿಯಾಗಿರುವ ಸುರೇಶ ಅವರು ನಗರದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ‘ಸುಮಾರು 20 ವರ್ಷಗಳ ಹಿಂದೆ ಕರ್ನಾಟಕದ ಬೆಂಗಳೂರು ನಿವಾಸಿಯಾಗಿರುವ ಸುರೇಶ ತಮ್ಮ ಮನೆಯ ಸುತ್ತಮುತ್ತಲಿನ ಕಾಡು ಪ್ರದೇಶಕ್ಕೆ ಜೀವಕಳೆ ತರುವ, ತುಂಬುವ ನಿರ್ಧಾರ ತೆಗೆದುಕೊಂಡರು,’ ಎಂದು ಪ್ರಧಾನಿ ಹೇಳಿದರು.

ಅವರ ನಿರ್ಧಾರ ಅನೇಕ ಸವಾಲುಗಳಿಂದ ಕೂಡಿತ್ತು. ಆದರೆ, 20 ವರ್ಷಗಳ ಹಿಂದೆ ಅವರು ನೆಟ್ಟ ಸಸಿಗಳು ಈಗ 40-ಅಡಿ ಎತ್ತರದ ಮರಗಳಾಗಿ ಬೆಳೆದಿವೆ. ಅವರು ಬೆಳೆಸಿದ ಕಾಡಿನ ಸೊಬಗನ್ನು ನೋಡಿ ಜನ ಸಂತೋಷಪಡುತ್ತಿದ್ದಾರೆ ಮತ್ತು ಪ್ರೇರೇಪಣೆ ಪಡೆದುಕೊಳ್ಳುತ್ತಿದ್ದಾರೆ.

ಅದು ಮಾತ್ರವಲ್ಲ ಸುರೇಶ ವಾಸವಾಗಿರುವ ಪ್ರದೇಶದಲ್ಲಿ ಒಂದು ಬಸ್ ನಿಲ್ದಾಣವನ್ನು ನಿರ್ಮಿಸಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಬಸ್ ನಿಲ್ದಾಣ ವೈಶಿಷ್ಟ್ಯತೆಯೇನು ಗೊತ್ತಾ? ಕನ್ನಡ ಭಾಷೆ, ನೆಲ-ಜಲವನ್ನು ಪ್ರಮೋಟ್ ಮಾಡುವ ಪ್ರಯತ್ನವನ್ನು ಅವರು ಅದರಲ್ಲಿ ಮಾಡಿದ್ದಾರೆ. ‘ಪರಿಸರದ ಸಂರಕ್ಷಣೆಯ ಜೊತೆಗೆ ಸುರೇಶ ಕುಮಾರ ಅವರ ಬಸ್ ನಿಲ್ದಾಣವನ್ನು ನಿರ್ಮಿಸಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರಮೋಟ್ ಮಾಡಲು ಕನ್ನಡದಲ್ಲಿ ಬರೆದಿರುವ ತಾಮ್ರದ ಫಲಕಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ.

‘ಏಕಕಾಲಕ್ಕೆ ಪರಿಸರ ಸಂರಕ್ಷಣೆ ಮತ್ತು ನಾಡಿನ ಸಂಸ್ಕೃತಿಯ ಏಳಿಗೆಗಾಗಿ ತೊಡಗಿಸಿಕೊಳ್ಳುವುದು ಎಷ್ಟು ಮಹತ್ವದ ಕೆಲಸ ಮತ್ತು ಉದಾತ್ತ ಮನೋಭಾವ ಅನ್ನೋದನ್ನು ಕಲ್ಪಸಿಕೊಳ್ಳಿ. ಅವರು ಇಡೀ ದೇಶಕ್ಕೆ ಒಂದು ಸಂದೇಶವನ್ನು ನೀಡಿದ್ದಾರೆ ಮತ್ತು ನಮ್ಮ ದೇಶದ ಯುವಪೀಳಿಗೆ ಅವರನ್ನು ಆದರ್ಶವಾಗಿಟ್ಟುಕೊಳ್ಳಬೇಕು’ ಎಂದು ಪ್ರಧಾನಿ ಹೇಳಿದರು.

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುರೇಶ ಕುಮಾರ ಅವರನ್ನು ಅಭಿನಂದಿಸಿ, ‘ನಿಸ್ವಾರ್ಥ ಮನೋಭಾವದ ವ್ಯಕ್ತಿ’ ಅಂತ ಕರೆದಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಅವರು, ‘ಬೆಂಗಳೂರಿನ ಸಹಕಾರ ನಗರದ ನಿವಾಸಿಯಾಗಿರುವ ಸುರೇಶ ಕುಮಾರ ಅವರ ನಿಸ್ವಾರ್ಥ ಸೇವೆ ಮತ್ತು ಪರಿಸರ ಹಾಗೂ ಸಮಾಜದೆಡೆಗಿನ ಕಳಕಳಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮುಕ್ತವಾಗಿ ಕೊಂಡಾಡಿದ್ದಾರೆ. ಸುರೇಶ ಕುಮಾರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸೇವೆ ಅನೇಕರಿಗೆ ಪ್ರೇರಣೆಯಾಗಿದೆ,’ ಎಂದು ಬರೆದಿದ್ದಾರೆ.

ವಿಷಾದಕರ ಸಂಗತಿಯೆಂದರೆ ಪ್ರಧಾನಿಗಳು ಸುರೇಶ ಕುಮಾರ ಅವರ ಸೇವೆಯನ್ನು ಗುರುತಿಸಿ ಹೊಗಳಿದ ಬಳಿಕ ಕರ್ನಾಟಕ ಸರ್ಕಾರಕ್ಕೆ ಅವರು ಪಟ್ಟಿರುವ ಶ್ರಮದ ಬಗ್ಗೆ ಗೊತ್ತಾಗಿದೆ.

Published On - 11:47 am, Mon, 31 October 22