Namma Metro: ಕೆಆರ್​ ಪುರಂ-ವೈಟ್ ಫೀಲ್ಡ್ ನಮ್ಮ ಮೆಟ್ರೋ ಸೇವೆ ಮಾ.25 ರಿಂದ ಆರಂಭ, ಪ್ರಧಾನಿ ಮೋದಿ ಉದ್ಘಾಟನೆ

|

Updated on: Mar 20, 2023 | 10:58 AM

KR Puram-Whitefield Metro: ರಾಜಧಾನಿ ಜನರ ಬಹುದಿನಗಳ ನಿರೀಕ್ಷೆ ಮತ್ತು ಹೆಚ್ಚುತ್ತಿರುವ ಟ್ರಾಫಿಕ್​ ಕಿರಿಕಿರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಆರ್​ ಪುರಂದಿಂದ ವೈಟ್ ಫೀಲ್ಡ್​​ಗೆ ಮೆಟ್ರೋ ಮಾರ್ಗ ಪ್ರಾರಂಭವಾಗಲಿದ್ದು, ಮಾರ್ಚ್​. 25 ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ.

Namma Metro: ಕೆಆರ್​ ಪುರಂ-ವೈಟ್ ಫೀಲ್ಡ್ ನಮ್ಮ ಮೆಟ್ರೋ ಸೇವೆ ಮಾ.25 ರಿಂದ ಆರಂಭ, ಪ್ರಧಾನಿ ಮೋದಿ ಉದ್ಘಾಟನೆ
ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣ
Follow us on

ಬೆಂಗಳೂರು: ರಾಜಧಾನಿ (Bengaluru) ಜನರ ಬಹುದಿನಗಳ ನಿರೀಕ್ಷೆ ಮತ್ತು ಹೆಚ್ಚುತ್ತಿರುವ ಟ್ರಾಫಿಕ್​ ಕಿರಿಕಿರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಆರ್​ ಪುರಂದಿಂದ ವೈಟ್ ಫೀಲ್ಡ್​​ಗೆ ಮೆಟ್ರೋ (KR Puram-Whitefield Metro) ಮಾರ್ಗ ಪ್ರಾರಂಭವಾಗಲಿದ್ದು, ಮಾರ್ಚ್​. 25 ರಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಉದ್ಘಾಟಿಸಲಿದ್ದಾರೆ. ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ 13.71 ಕಿಮೀ ಉದ್ದದ ಆರ್‌-1 ವಿಸ್ತರಣಾ ಮಾರ್ಗದ ಅಂತಿಮ ಹಂತದ ಟ್ರಯಲ್ ರನ್​ ಅನ್ನು ರೈಲ್ವೆ ಸೇಫ್ಟಿ ಕಮಿಷನ್ ಈಗಾಗಲೆ ನಡೆಸಿದೆ. ಕೆಆರ್​ ಪುರಂ-ವೈಟ್ ಫೀಲ್ಡ್ ನೇರಳೆ ಮಾರ್ಗ ಐಟಿ ಉದ್ಯೋಗಿಗಳಿಗೆ ಸಹಾಯಕವಾಗಲಿದೆ. ಈ ಮಾರ್ಗದಲ್ಲಿ ಗಂಟೆಗೆ 80 ಕಿ. ಮೀ. ವೇಗದಲ್ಲಿ ನಮ್ಮ ಮೆಟ್ರೋ (Namma Metro) ರೈಲುಗಳನ್ನು ಓಡಿಸಿ ಪರೀಕ್ಷೆ ನಡೆಸಲಾಗಿದೆ. 13 ಕಿ. ಮೀ. ಮಾರ್ಗವನ್ನು 12 ನಿಮಿಷಗಳಲ್ಲಿ ರೈಲು ಕ್ರಮಿಸಿದೆ (ಯಾವುದೇ ನಿಲ್ದಾಣವಿಲ್ಲದೆ).

ಇದನ್ನೂ ಓದಿ: 2032ರ ಒಳಗೆ ಇನ್ನೂ ನಾಲ್ಕು ಹೊಸ ಮೆಟ್ರೋ ಮಾರ್ಗಗಳು, ಬೆಂಗಳೂರು ಟ್ರಾಫಿಕ್​ಗೆ ಬೀಳುತ್ತಾ ಬ್ರೇಕ್​​?

ಕೆಆರ್​ ಪುರಂ-ವೈಟ್ ಫೀಲ್ಡ್ ನೇರಳೆ ಮಾರ್ಗ ಸೌಲಭ್ಯಗಳು

1. ನಿಲ್ದಾಣಗಳಲ್ಲಿ ಸೀಮಿತ ದ್ವಿಚಕ್ರ ವಾಹನ ನಿಲುಗಡೆ ಮತ್ತು ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್‌ ನಿಲ್ದಾಣಗಳಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿ ಪಾರ್ಕಿಂಗ್ ಸೌಲಭ್ಯ.

2. ನಿಲ್ದಾಣಗಳ ಸುತ್ತಲೂ ಇರುವ ಸೇವಾ ರಸ್ತೆಗಳ ಎರಡೂ ಬದಿಯಲ್ಲಿ, ಪ್ರವೇಶ ಮತ್ತು ನಿರ್ಗಮನ ದ್ವಾರದೊಂದಿಗೆ ಬಿಎಂಟಿಸಿ ಬಸ್ ನಿಲ್ದಾಣಗಳು ಮಲ್ಟಿಮೋಡಲ್ ಏಕೀಕರಣ ಕೇಂದ್ರ ಇರಲಿದೆ.

3. ರಸ್ತೆಗಳನ್ನು ದಾಟಲು ಎಲ್ಲ ನಿಲ್ದಾಣಗಳನ್ನು ಪಾದಚಾರಿಗಳ ಮೇಲ್ಸೇತುವೆಯಾಗಿ ಉಪಯೋಗಿಸಬಹುದು.

4. ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್‌ನಲ್ಲಿ, ಮೆಟ್ರೋ ನಿಲ್ದಾಣಗಳಿಂದ ನೇರವಾಗಿ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕಿಸಲು ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.

5. ಪಟ್ಟಂದೂರು ಅಗ್ರಹಾರ ನಿಲ್ದಾಣದಲ್ಲಿ ಐಟಿಪಿಬಿಗೆ ನೇರವಾಗಿ ಮೇಲ್ಸೇತುವೆ ಸಂಪರ್ಕ ಕಲ್ಪಿಸಲಾಗಿದೆ.

6. ವಿಕಲಚೇತರು ಎಲ್ಲಾ ನಿಲ್ದಾಣಗಳನ್ನು ಉಪಯೋಗಿಸುವ ಸೌಲಭ್ಯ.

7. ಪ್ರಯಾಣಿಕರ ಅನುಕೂಲಕ್ಕಾಗಿ, ಪ್ರತಿ ನಿಲ್ದಾಣದಲ್ಲಿ 8 ಎಸ್ಕಲೇಟರ್‌ಗಳು, 4 ಎಲಿವೇಟರ್‌ಗಳು ಮತ್ತು 8 ಮೆಟ್ಟಿಲುಗಳ ಅಳವಡಿಸಲಾಗಿದೆ.

ನಿಲ್ದಾಣಗಳು

ಈ 13.71 ಕಿಲೋಮೀಟರ್ ಮೆಟ್ರೋ ಮಾರ್ಗದಲ್ಲಿ 12 ನಿಲ್ದಾಣಗಳಿವೆ. ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯ ಸಾಯಿ ಆಸ್ಪತ್ರೆ, ನಲ್ಲೂರು ಹಳ್ಳಿ, ಕುಂದನಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರಪಾಳ್ಯ, ಮಹದೇವಪುರ ಮತ್ತು ಕೆಆರ್ ಪುರಂ. ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳಿವೆ. ಈ ಮಾರ್ಗದ ರೈಲುಗಳು 12 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.

ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಪಿಎಸ್‌ಯು ಅಡಿಯಲ್ಲಿ ಒಟ್ಟು 7 ರೈಲುಗಳನ್ನು ಬಿಇಎಂಎಲ್‌ ತಯಾರಿಸಿದೆ. ಈ ರೈಲುಗಳು ಕೆಆರ್ ​ಪುರಂ-ವೈಟ್‌ಫೀಲ್ಡ್ ಮಾರ್ಗವಾಗಿ ಕಾರ್ಯನಿರ್ವಹಿಸಲಿವೆ. ಬಿಇಎಂ​ಎಲ್ ಒಟ್ಟು 400 ಕೋಟಿ ರೂ. ವೆಚ್ಚದಲ್ಲಿ 42 ಮೆಟ್ರೋ ಬೋಗಿಗಳನ್ನು ತಯಾರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:19 am, Mon, 20 March 23