ಬೆಂಗಳೂರು: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್ಪಿಸಿ (Criminal Procedure Code – CrPC) ಸೆಕ್ಷನ್ 164ರ ಅನ್ವಯ ಸಂತ್ರಸ್ತ ಬಾಲಕಿಯರು ನೇರವಾಗಿ ನ್ಯಾಯಾಧೀಶರ ಎದುರೇ ತಮ್ಮ ಹೇಳಿಕೆ ದಾಖಲು ಮಾಡಲಿದ್ದಾರೆ. ಜಿಲ್ಲಾ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲಿಸಿಕೊಂಡ ನಂತರ ಮುರುಘಾಶ್ರೀಗಳನ್ನು ಬಂಧಿಸಿ, ಕಾನೂನು ಪ್ರಕ್ರಿಯೆಗೆ ಒಳಪಡಿಸುವ ಸಾಧ್ಯತೆಯಿದೆ. ಈ ನಡುವೆ ಮುರುಘಾ ಶರಣರ ಚಲನವಲನದ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಮಠದ ನಾಲ್ಕೂ ಗೇಟ್ಗಳಿಗೆ ಪೊಲೀಸರನ್ನು ಕಾವಲಿಗೆ ನಿಯೋಜಿಸಲಾಗಿದೆ. ಮುರುಘಾಶ್ರೀಗಳ ವಿರುದ್ಧದ ಆರೋಪ, ಮುಂದಿನ ಕಾನೂನು ಪ್ರಕ್ರಿಯೆ, ತನಿಖೆಯ ದಿಕ್ಕು, ವಿಚಾರಣೆ, ಶಿಕ್ಷೆಯ ಸಾಧ್ಯತೆ ಸೇರಿದಂತೆ ಪ್ರಕರಣವು ಮುಂದಿನ ದಿನಗಳಲ್ಲಿ ಪಡೆದುಕೊಳ್ಳಬಹುದಾದ ಬಹುತೇಕ ತಿರುವುಗಳನ್ನು ಇಂದು ಸಂತ್ರಸ್ತ ಬಾಲಕಿಯರು ಸಿಆರ್ಪಿಸಿ ಸೆಕ್ಷನ್ 164ರ ಅನ್ವಯ ನೀಡುವ ಹೇಳಿಕೆ ನಿರ್ಧರಿಸುತ್ತದೆ. ಹೀಗಾಗಿಯೇ ಪ್ರಕ್ರಿಯೆಯನ್ನು ಇಡೀ ದೇಶ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಸಿಆರ್ಸಿಪಿ ಸೆಕ್ಷನ್ 164ರ ಹೇಳಿಕೆಯ ವೈಶಿಷ್ಟ್ಯವೇನು?
ಕ್ರಿಮಿನಲ್ ಪ್ರಕರಣಗಳಲ್ಲಿ ಮೊದಲು ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುವುದು ವಾಡಿಕೆ. ಪೊಲೀಸ್ ವಿಚಾರಣೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡರೂ ಅದನ್ನು ನ್ಯಾಯಾಲಯಗಳು ಅನುಮಾನಿಸುವುದೇ ಹೆಚ್ಚು. ಆರೋಪಿಗಳ ಹೇಳಿಕೆಗಳಿಗೆ ಪೊಲೀಸರೇ ಸಾಕ್ಷಿ ಒದಗಿಸಬೇಕಾಗುತ್ತದೆ. ದೂರು ಕೊಟ್ಟವರ ವಿಚಾರದಲ್ಲಿಯೂ ಅಷ್ಟೇ. ಪೊಲೀಸರು ದೂರು ಆಧರಿಸಿ ಎಫ್ಐಆರ್ ದಾಖಲಿಸಿರುತ್ತಾರೆ. ಆದರೆ ನಂತರ ಅದಕ್ಕೆ ಪೂರಕ ಸಾಕ್ಷ್ಯಗಳನ್ನು ತನಿಖೆಯ ಮೂಲಕ ಒದಗಿಸಬೇಕಾಗುತ್ತದೆ. ಪೊಲೀಸ್ ವಿಚಾರಣೆ, ತನಿಖೆ, ನ್ಯಾಯಾಲಯದ ಕಲಾಪಗಳ ವೇಳೆ ದೂರು ಕೊಟ್ಟವರು ಅಥವಾ ತಪ್ಪೊಪ್ಪಿಕೊಂಡವರು ಉಲ್ಟಾ ಹೇಳಿಕೆಗಳನ್ನು ಕೊಡಬಹುದು. ಆಗ ಪ್ರಕರಣವೇ ಹಳ್ಳ ಹಿಡಿಯುತ್ತದೆ. ಆದರೆ ಸಿಆರ್ಪಿಸಿ ಸೆಕ್ಷನ್ 164ರ ಅಡಿ ಹೇಳಿಕೆ ದಾಖಲಾದರೆ ಅದನ್ನು ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸುತ್ತವೆ. ಈ ಹೇಳಿಕೆಗಳನ್ನು ಬದಲಿಸುವುದಾಗಲೀ, ಹಿಂಪಡೆಯುವುದಾಗಲೀ ಅಷ್ಟು ಸುಲಭವಲ್ಲ. ಹೀಗಾಗಿಯೇ ಈ ಪ್ರಕ್ರಿಯೆಗೆ ಅಷ್ಟು ಪ್ರಾಮುಖ್ಯತೆ ಎನ್ನುತ್ತಾರೆ ತುಮಕೂರಿನಲ್ಲಿ ವಕೀಲರಾಗಿರುವ ಸಿ.ಕೆ.ಮಹೇಂದ್ರ.
ಏಕಿಷ್ಟು ಪ್ರಾಮುಖ್ಯತೆ?
ಸಿಆರ್ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ಪಡೆಯುವ ಹೇಳಿಕೆಗಳನ್ನು ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸುತ್ತಾರೆ. ಈ ಸೆಕ್ಷನ್ ಅಡಿ ಹೇಳಿಕೆ ನೀಡಲು ಇಚ್ಛಿಸುವವರನ್ನು ಪೊಲೀಸರು ಮೊದಲು ನ್ಯಾಯಾಧೀಶರ ಎದುರು ಹಾಜರುಪಡಿಸಬೇಕು. ಅವರು ಸ್ವಯಿಚ್ಛೆಯಿಂದ ಹೇಳಿಕೆ ಕೊಡುತ್ತಿದ್ದಾರೆ ಎನ್ನುವುದು ನ್ಯಾಯಾಧೀಶರಿಗೆ ಮನವರಿಕೆಯಾದ ನಂತರವೇ ಮುಂದಿನ ಪ್ರಕ್ರಿಯೆಗಳು ಆರಂಭವಾಗುತ್ತವೆ. ಹೇಳಿಕೆ ನೀಡುವವರನ್ನು ಬೇರೊಂದು ದಿನ ಕೋರ್ಟ್ಗೆ ಬರುವಂತೆ ಸೂಚಿಸುತ್ತಾರೆ. ಅಂದು ಅವರ ಜೊತೆಗೆ ಪೊಲೀಸರು ಇರುವಂತಿಲ್ಲ. ಯಾವುದೇ ಒತ್ತಡ, ಬೆದರಿಕೆ, ಪ್ರಚೋದನೆ, ಪ್ರಲೋಭನೆಯಿಲ್ಲದೆ ತಾನು ಮುಕ್ತವಾಗಿ ಸಾಕ್ಷ್ಯ ನೀಡುತ್ತಿದ್ದೇನೆಂದು ಹೇಳಿಕೆ ನೀಡುವವರು ಪ್ರಮಾಣ ಮಾಡಬೇಕಾಗುತ್ತದೆ. ಹೇಳಿಕೆ ದಾಖಲಿಸುವಾಗ ನ್ಯಾಯಾಧೀಶರು ಮತ್ತು ಸ್ಟೆನೊಗ್ರಾಫರ್ ಬಿಟ್ಟು ಬೇರೆ ಯಾರೂ ಇರುವಂತಿಲ್ಲ.
ಬದಲಿಸಲು ಆಗುವುದಿಲ್ಲವೇ?
ಇದು ಸಂತ್ರಸ್ತರು ಅಥವಾ ಸಾಕ್ಷಿಗಳು ಸ್ವಂತ ಇಚ್ಛೆಯಿಂದ ನೀಡುವ ಹೇಳಿಕೆ. ಸೆಕ್ಷನ್ 164 ಸಿಆರ್ಪಿಸಿ ಪ್ರಕಾರ ಹೇಳಿಕೆ ದಾಖಲಿಸುವ ನ್ಯಾಯಾಧೀಶರು ವಿಚಾರಣಾ ನ್ಯಾಯಾಧೀಶರೂ ಅಲ್ಲ. ಹೇಳಿಕೆ ನೀಡುವವರು ಮತ್ತು ಹೇಳಿಕೆ ದಾಖಲಿಸುವವರು ಯಾವುದೇ ಒತ್ತಡವಿಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಸೆಷನ್ಸ್ ನ್ಯಾಯಾಧೀಶರು ಹೇಳಿಕೆ ಪಡೆಯಲು ಅವಕಾಶ ಮಾಡಿಕೊಟ್ಟ ನಂತರವೂ ಹೇಳಿಕೆ ನ್ಯಾಯಾಧೀಶರು ಒತ್ತಡ ಮತ್ತು ಪ್ರಲೋಭನೆ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ನಂತರವೇ ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ಪಡೆಯುವ ಪ್ರಕ್ರಿಯೆ ಆರಂಭವಾಗುತ್ತೆ. ಬಹುತೇಕ ಸಂದರ್ಭದಲ್ಲಿ ‘ಇನ್ ಕ್ಯಾಮೆರಾ ಪ್ರೊಸೀಡಿಂಗ್ಸ್’ ಆಗಿರುತ್ತದೆ. ದೂರುದಾರರು ಏನು ಹೇಳಿಕೆ ಕೊಟ್ಟಿದ್ದಾರೆ ಎನ್ನುವುದನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಆದರೆ ಒಮ್ಮೆ ಈ ಸೆಕ್ಷನ್ ಅಡಿಯಲ್ಲಿ ಹೇಳಿಕೆ ಕೊಟ್ಟ ನಂತರ ಬದಲಿಸುವುದು ಅಥವಾ ದೂರು ಹಿಂಪಡೆಯುವುದು ಕಷ್ಟ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ.
ತಡವಾದರೆ ಅಪಾಯವೇನು?
ಸಿಆರ್ಪಿಸಿ ಸೆಕ್ಷನ್ 164ರ ಹೇಳಿಕೆಗೆ ತನ್ನದೇ ಆದ ಪ್ರಾಮುಖ್ಯತೆ ಇರುವುದು ನಿಜವಾದರೂ ಹೇಳಿಕೆ ದಾಖಲಿಸುವುದು ತಡವಾದರೆ ಆರೋಪಿಗಳಿಗೆ ಅದು ವರದಾನವಾಗುತ್ತದೆ. ಹೀಗಾಗಿಯೇ ಮುರುಘಾ ಶ್ರೀಗಳ ವಿರುದ್ಧ ಸಂತ್ರಸ್ತರು ಮಾಡಿರುವ ಆರೋಪದ ಬಗ್ಗೆ ಆದಷ್ಟು ಬೇಗನೇ ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ಪಡೆಯಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿತ್ತು. ಹೇಳಿಕೆ ಪಡೆಯುವುದು ವಿಳಂಬವಾದರೆ ಅದು ತನಿಖೆ ನಡೆಸುತ್ತಿರುವ ಪೊಲೀಸರ ವೈಫಲ್ಯ ಎಂದು ಬಿಂಬಿತವಾಗಿ ಆರೋಪಿಗೆ ಜಾಮೀನು ನೀಡಲು ನ್ಯಾಯಾಲಯವು ಪರಿಶೀಲಿಸಬಹುದು. ಚಿತ್ರದುರ್ಗದಲ್ಲಿಯೇ ನಡೆದ ಪೊಕ್ಸೊ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಲು ವಿಳಂಬ ವಿಚಾರಣೆಗೆ ಸಂಬಂಧಿಸಿದ ಲೋಪಗಳನ್ನು ಪ್ರಸ್ತಾಪಿಸಿದ್ದನ್ನು ‘ದಿ ಫೈಲ್’ ಜಾಲತಾಣ ವರದಿ ಮಾಡಿತ್ತು.
Published On - 1:32 pm, Tue, 30 August 22