ಬೆಂಗಳೂರು: ಬಾಡಿಗೆ ಮನೆ ನೀಡಿದ್ದ ಮಾಲೀಕನ ಮನೆಯಲ್ಲೇ ಚಿನ್ನಾಭರಣ, ನಗದು ಎಗರಿಸಿದ್ದ ಚಾಲಾಕಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಯ್ಯ ತಾಜ್, ನಾಜೀಮಾ ತಾಜ್ ಹಾಗೂ ನಾಜೀಮಾ ಪತಿ ಅಕ್ಬರ್ ಬಂಧಿತರು. ಬಂಧಿತರಿಂದ ₹ 4 ಲಕ್ಷ ನಗದು, ₹ 2.79 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಸಿದ್ದಾಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಬಿ ಹಾಗೂ ಹಾಜಿರಾ ದಂಪತಿಗೆ 13 ವರ್ಷದ ಮಗ ಹಾಗೂ ಮಗಳೊಬ್ಬಳಿದ್ದಾಳೆ. ಮೊದಲ ಮಹಡಿಯಲ್ಲಿರುವ ಮನೆಯಲ್ಲಿ ಮಾಲೀಕರು ವಾಸವಿದ್ದಾರೆ. ಎರಡನೇ ಮಹಡಿಗೆ ಇತ್ತೀಚೆಗೆ ನಾಜಿಮಾ ತಾಜ್ ಬಾಡಿಗೆಗೆ ಬಂದಿದ್ದರು. ಇದೇ ಮನೆ ಮುಂಭಾಗ ಇರುವ ಮತ್ತೊಂದು ಮನೆಯಲ್ಲಿ ಸುಮಯ್ಯಾ ತಾಜ್ ಬಾಡಿಗೆಗೆ ಇದ್ದರು. ಮಗ ಟೆರೆಸ್ಗೆ ಬಂದು ಆಟ ಆಡುವಾಗಲೆಲ್ಲಾ ಮನೆಯಲ್ಲಿ ಹಣ ಇರುವ ವಿಚಾರ ಹೇಳಿಕೊಳ್ಳುತ್ತಿದ್ದರು. ಲಾರಿ ಮಾರಿ ಮಗಳ ಮದುವೆಗೆ ದಂಪತಿ ಹಣ ಮತ್ತು ಒಡವೆ ತಂದಿಟ್ಟಿದ್ದರು.
ಈ ವಿಷಯ ತಿಳಿದ ದಂಪತಿ ಹಣ ಲಪಟಾಯಿಸಲು ಸ್ಕೆಚ್ ಹಾಕಿದ್ದರು. 19ನೇ ತಾರೀಖು ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗಿದ್ದ ಜಬಿ ಮಗಳು ಕಾಲೇಜಿಗೆ ಹೋಗಿದ್ದಳು. 13ನೇ ವರ್ಷದ ಮಗ ಟೆರೆಸ್ ಮೇಲೆ ಆಟವಾಡುತ್ತಿದ್ದ. 1 ಗಂಟೆ ಸುಮಾರಿಗೆ ಸಂಬಂಧಿಯೊಬ್ಬರನ್ನು ನೋಡಲು ಹಾಜಿರಾ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಮುಖ್ಯರಸ್ತೆವರೆಗೂ ಮಾತಾಡಿಸಿಕೊಂಡು ಬಂದಿದ್ದ ನಾಜೀಮಾ ವಾಪಸ್ ಬರಲು ಎಷ್ಟು ಹೊತ್ತಾಗುತ್ತೆ ಎಂತೆಲ್ಲ ಮಾಹಿತಿ ಪಡೆದುಕೊಂಡಿದ್ದರು.
ನಾನು ಹೊರಗೆ ಹೋಗ್ತಿದ್ದಿನಿ ಎಂದು ಮುಖ್ಯರಸ್ತೆಯವರೆಗೂ ನಾಜೀಮಾ ಬಂದಿದ್ದರು. ಹಾಜಿರಾ ಆಟೋ ಹತ್ತುತ್ತಿದ್ದಂತೆ ನಾಜಿಮಾ ಮನೆಗೆ ವಾಪಸ್ ಬಂದಿದ್ದರು. ಬಂದವಳೇ ಕೆಳ ಮಹಡಿಯ ಮೆಟ್ಟಿಲಿಗೆ ಅಡ್ಡಲಾಗಿ ಕುಳಿತಿದ್ದಳು. ಮೇಲೆ ಯಾರಿಗೂ ಹೋಗಲು ಬಿಡದೇ ಮಾತನಾಡಿಸುತ್ತಿದ್ದಳು. ಅಷ್ಟೊತ್ತಿಗಾಗಲೇ ನಕಲಿ ಕೀ ಬಳಸಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದ ತಂಗಿ ಸುಮಯ್ಯಾ ತಾಜ್ ಹಾಗೂ ಅಕ್ಬರ್ ರಾಡ್ನಿಂದ ಬೀರು ಮೀಟಿ ಹಣ, ಒಡವೆ ಕಳ್ಳತನ ಮಾಡಿದ್ದರು. ನಂತರ ತಂದೆಯ ಮನೆ ತುಮಕೂರಿಗೆ ಎಸ್ಕೇಪ್ ಆಗಿದ್ದರು.
ಸಂಜೆ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಟವರ್ ಡಂಪ್ ಹಾಗೂ ಸಿಸಿಟಿವಿ ದೃಶ್ಯ ಆಧಾರದ ಮೇಲೆ ಇಬ್ಬರ ಮೇಲೆ ಅನುಮಾನ ಮೂಡಿತ್ತು. ಕದ್ದ ದುಡ್ಡಲ್ಲಿ ಶೋಕಿ ಮಾಡಲು ಇವರಿಬ್ಬರೂ ಮುಂದಾಗಿದ್ದರು. 14 ಚೂಡಿದಾರ್ ಸೇರಿದಂತೆ ಹಲವು ಬಟ್ಟೆ ಖರೀದಿಸಿದ್ದರು. ಸದ್ಯ ಬಂಧಿತರಿಂದ ₹ 4 ಲಕ್ಷ ನಗದು, ₹ 2.79 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆಯಲಾಗಿದೆ. ಉಳಿದ ಹಣ ಮೋಜು ಮಸ್ತಿಗೆಂದು ಖರ್ಚು ಮಾಡಿದ್ದರು.
ಇದನ್ನೂ ಓದಿ: Crime News: ಕಾರಿನ ಗಾಜು ಒಡೆದು ಹಣ, ದುಬಾರಿ ವಾಚ್ ಕಳವು; 6 ತಿಂಗಳ ಬಳಿಕ ಚಂದ್ರಾ ಲೇಔಟ್ ಪೊಲೀಸರಿಂದ ಆರೋಪಿ ಅರೆಸ್ಟ್