ಬೆಂಗಳೂರು: ಕಾಂಗ್ರೆಸ್ ವೆಬ್‌ಸೈಟ್ ಹ್ಯಾಕ್ ಮಾಡಿದ್ದ ಆರೋಪಿಗಳ ಬಂಧನ
ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್ನ ವೆಬ್‌ಸೈಟ್ ಹ್ಯಾಕ್ ಮಾಡಿ, ನಕಲಿ ವೆಬ್‌ಸೈಟ್ ಸೃಷ್ಟಿಸಿ ಅನಧಿಕೃತ ಪೋಸ್ಟ್ ಹಾಕಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ಆರೋಪಿಗಳು ಹಾಸನ ಮೂಲದ ಕಂಪನಿಯೊಂದರ ಸಂಪರ್ಕದಲ್ಲಿದ್ದಾರೆ ಎಂಬ ಅಂಶ ತಿಳಿದುಬಂದಿದೆ.
ಬೆಂಗಳೂರು (ಆ.14): ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್ನ (KPCC) ವೆಬ್‌ಸೈಟ್ (Website) ಹ್ಯಾಕ್ ಮಾಡಿ, ನಕಲಿ ವೆಬ್‌ಸೈಟ್ ಸೃಷ್ಟಿಸಿ ಅನಧಿಕೃತ ಪೋಸ್ಟ್ ಹಾಕಿದ್ದ ನಾಲ್ವರನ್ನು ಪೊಲೀಸರು (Police) ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ತಲೆಮರಿಸಿಕೊಂಡಿದ್ದಾನೆ. ಆರೋಪಿಗಳನ್ನು ಧರ್ಮೇಶ್ ಜೂನ್, ಅರುಣ್, ಸಿದ್ದಾರ್ಥ ಮತ್ತು ವೆಂಕಟೇಶ್ ಎಂದು ಗುರುತಿಸಲಾಗಿದೆ. ಈ ನಾಲ್ವರು ಆರೋಪಿಗಳು ಹಾಸನ ಮೂಲದ ಕಂಪನಿಯೊಂದರ ಸಂಪರ್ಕದಲ್ಲಿದ್ದಾರೆ ಎಂಬ ಅಂಶ ತಿಳಿದುಬಂದಿದೆ. ಇನ್ನೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದು, ಈತ ಬಿಜೆಪಿಯೊಂದಿಗೆ ಕೆಲಸ ಮಾಡುವ ರಾಜಕೀಯ ತಂತ್ರ ಸಂಸ್ಥೆಯಾದ ವರಾಹೆ ಅನಾಲಿಟಿಕ್ಸ್ ಜೊತೆ ಸಂಪರ್ಕ ಹೊಂದಿದ್ದನು ಎಂದು ಹೇಳಲಾಗುತ್ತಿದೆ.
ರಾಜ್ಯ ಕಾಂಗ್ರೆಸ್ ನಾಯಕರು ಪ್ರಚಾರ ಭರಾಟೆಯಲ್ಲಿ ಬ್ಯೂಸಿಯಾಗಿದ್ದಾಗ ಈ ವೆಬ್‌ಸೈಟ್ ಹ್ಯಾಕ್ ಮಾಡಲಾಗಿತ್ತು. ಈ ಸಂಬಂಧ ಕಾಂಗ್ರೆಸ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ಹಿನ್ನೆಲೆ ಪೊಲೀಸರು ಶೋಧಕಾರ್ಯ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ನಕಲಿ ವೆಬ್ಸೈಟ್ನ ಹೋಸ್ಟಿಂಗ್ ವಿವರ, ನೋಂದಣಿ, ಲಾಗ್ಇನ್ ಪಾಸ್ವರ್ಡ್ ಪಡೆದು ಪರಿಶೀಲಿಸಿದಾಗ ಬೆಂಗಳೂರಿನ M/S ವೆಟ್ ಫ್ಯಾಬ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಕಲಿ ವೆಬ್‌ಸೈಟ್ ಸೃಷ್ಟಿ ಮಾಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ vs ಇತರರು, ಕಾಂಗ್ರೆಸ್ನಲ್ಲಿ ಸತೀಶ್ ಜಾರಕಿಹೊಳಿ vs ಇತರ ನಾಯಕರು
ಈ ಸಂಸ್ಥೆ ಹಾಸನ ಮತ್ತು ಬೆಂಗಳೂರಿನಲ್ಲಿ ಕಚೇರಿಗಳನ್ನು ಹೊಂದಿದ್ದು, ಗುರುವಾರ ಪೊಲೀಸರು ಕಚೇರಿ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ವೆಂಕಟೇಶ್ ಹಾಸನದಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದು, ಉಳಿದ ಮೂವರು ಅದರ ನಿರ್ದೇಶಕರಾಗಿದ್ದಾರೆ. ವರಾಹೆ ಅನಾಲಿಟಿಕ್ಸ್‌ನಲ್ಲಿ ಉದ್ಯೋಗಿಯಾಗಿರುವ ಶಶಾಂಕ್ ಭಾರದ್ವಾಜ್ ನಕಲಿ ವೆಬ್‌ಸೈಟ್ ರಚಿಸಲು ಈ ಕಂಪನಿಯನ್ನು ಸಂಪರ್ಕಿಸಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಫೆಬ್ರವರಿ ತಿಂಗಳಲ್ಲಿ ವೆಬ್‌ಸೈಟ್ ಹ್ಯಾಕ್ ಮಾಡಿದ್ದರು. ನಂತರ ಕೆಪಿಸಿಸಿ. ಇನ್ ಅನ್ನೋ ನಕಲಿ ವೆಬ್‌ಸೈಟ್‌ನಲ್ಲಿ ಇದು ಭ್ರಷ್ಟರ ಪಕ್ಷ. ಭ್ರಷ್ಟ ರಾಜ್ಯವನ್ನಾಗಿಸಲು ಕಾಂಗ್ರೆಸ್ ಬೆಂಬಲಿಸಿ ಎಂದು ಇಡೀ ಕಾಂಗ್ರೆಸ್ ಮೇಲಿನ ಆರೋಪಗಳ ಪಟ್ಟಿಯನ್ನೇ ಈ ವೆಬ್‌ಸೈಟ್‌ನಲ್ಲಿ ಹಾಕಲಾಗಿದ್ದರು.
ಮುಖಪುಟದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಕೆಜೆ ಜಾರ್ಜ್ ಫೋಟೋ ಬಳಸಲಾಗಿದೆ. ಈ ಫೋಟೋಗಳ ಮೇಲೆ ಕಮ್ಯೂನಲ್ , ಕ್ರಿಮಿನಲ್ ಹಾಗೂ ಕರಪ್ಟ್ ಎಂದು ಉಲ್ಲೇಖಿಸಿದ್ದರು. ಇನ್ನು ಇತರ ಪುಟಗಳಲ್ಲಿ ಕಾಂಗ್ರೆಸ್ ಮೇಲಿನ ಆರೋಪಗಳು, ಕಾಂಗ್ರೆಸ್ ಆಡಳಿತದಲ್ಲಿ ನಡೆದ ಭ್ರಷ್ಟಾಚಾರ, ಕೋಮುಗಲಭೆ ಸೇರಿದಂತೆ ಹಲವುವಿವಾದಾತ್ಮಕ ಮಾಹಿತಿಗಳನ್ನು ಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:34 am, Mon, 14 August 23