ತಪ್ಪಿಸಿಕೊಳ್ಳಲು ಯತ್ನಿಸಿದ ಸುಲಿಗೆ ಆರೋಪಿಯ ಕಾಲಿಗೆ ಬೆಂಗಳೂರು ಪೊಲೀಸರ ಗುಂಡು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 03, 2022 | 4:05 PM

ಆತ್ಮರಕ್ಷಣೆಗಾಗಿ ಸಿದ್ದಾಪುರ ಠಾಣೆ ಇನ್​ಸ್ಪೆಕ್ಟರ್ ಆಂತೋಣಿರಾಜ್ ಗುಂಡು ಹಾರಿಸಿದರು.

ತಪ್ಪಿಸಿಕೊಳ್ಳಲು ಯತ್ನಿಸಿದ ಸುಲಿಗೆ ಆರೋಪಿಯ ಕಾಲಿಗೆ ಬೆಂಗಳೂರು ಪೊಲೀಸರ ಗುಂಡು
ಪೊಲೀಸ್ ಫೈರಿಂಗ್​ನಿಂದ ಗಾಯಗೊಂಡಿರುವ ಆರೋಪಿ ಪರ್ವೇಜ್
Follow us on

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಬೆಂಗಳೂರು ಪೊಲೀಸರು ಗುಂಡು ಹಾರಿಸಿದ ಘಟನೆ ಸೋಮವಾರ ನಡೆದಿದೆ. ತಲಘಟ್ಟಪುರದ 2ನೇ ಹಂತದಲ್ಲಿ ಆರೋಪಿ ಪರ್ವೇಜ್ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಸಿದ್ದಾಪುರ ಠಾಣೆ ಇನ್​ಸ್ಪೆಕ್ಟರ್ ಆಂತೋಣಿರಾಜ್ ಗುಂಡು ಹಾರಿಸಿದರು. ಗಾಯಾಳು ಪರ್ವೇಜ್​ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಪಂಚನಾಮೆ ನಡೆಸಲು ತೆರಳಿದ್ದ ವೇಳೆ ಹಲ್ಲೆ ಮಾಡಿದ್ದ ಆರೋಪಿಯು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಡಿಸೆಂಬರ್ 30ರಂದು ಲಾಲ್​ಬಾಗ್ ಬಳಿ ಬೈಕ್​ನಲ್ಲಿ ತನ್ನ ಸಹಚರನ ಜೊತೆ ಬಂದು ಮೊಬೈಲ್ ಕಿತ್ತುಕೊಂಡಿದ್ದ. ಈ ಸಂಬಂಧ ಸುಲಿಗೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್ ಸಂಬಂಧ ನಿನ್ನೆ (ಜನವರಿ 2) ಆರೋಪಿ ಪರ್ವೇಜ್​ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಕೃತ್ಯಕ್ಕೆ ಬಳಸಿದ ಡ್ರಾಗರ್ ಎಸೆದ ಸ್ಥಳದ ಪಂಚನಾಮೆ ನಡೆಸಲು ಮುಂದಾಗಿದ್ದರು. ಈ ವೇಳೆ ಕಾನ್​ಸ್ಟೆಬಲ್ ಪರಮೇಶ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಪರ್ವೇಜ್ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತ್ಮರಕ್ಷಣೆಗಾಗಿ ಪರ್ವೇಜ್​ನ ಎಡಗಾಲಿಗೆ ಇನ್​ಸ್ಪೆಕ್ಟರ್ ಆಂತೋಣಿರಾಜ್​ ಗುಂಡು ಹಾರಿಸಿದರು. ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಕಾನ್​ಸ್ಟೆಬಲ್ ಹಾಗೂ ಆರೋಪಿ ಪರ್ವೇಜ್​ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮ್ಮನಿಂದಲೇ ಅಣ್ಣನ ಕೊಲೆಗೆ ಯತ್ನ
ಕೊಪ್ಪಳ:
ಆಸ್ತಿ ವಿಚಾರಕ್ಕೆ ತಮ್ಮನೇ ಅಣ್ಣನ ಕೊಲೆಗೆ ಯತ್ನಿಸಿದ ಘಟನೆ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ನೆಲಜೇರಿಯಲ್ಲಿ ನಡೆದಿದೆ. ಅನಿಲ್‌ಕುಮಾರ್ ಮನೆಗೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಲಾಗಿದೆ ಎಂದು ತಂದೆ ಚೆನ್ನಪ್ಪಗೌಡ ಮತ್ತು ತಮ್ಮ ವೆಂಕಟೇಶ್‌ ವಿರುದ್ಧ ಆರೋಪ ಮಾಡಲಾಗಿದೆ. ಬೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಅಪಘಾತ: ಬೈಕ್ ಸವಾರ ಸಾವು
ರಾಯಚೂರು: ಗೂಡ್ಸ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಾನ್ವಿ ಬಳಿ ನಡೆದಿದೆ. ಮೃತನನ್ನು ಬೈಕ್ ಸವಾರ ನುರುಸ್ ರಂಗ್ರೇಜ್ (40) ಮೃತ ದುರ್ದೈವಿ. ಇವರ ಪತ್ನಿ ಜ್ಯೋತಿಬಾಯಿ (35) ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: Crime News: ಹಿಟಾಚಿ ಹರಿದು ಮಗು ಮೃತ್ಯು, ಮನೆಗೆಲಸದ ಯುವತಿ ಅನುಮಾನಾಸ್ಪದ ಸಾವು, ಮೂವರು ದರೋಡೆಕೋರರ ಬಂಧನ
ಇದನ್ನೂ ಓದಿ: Crime News: ಮತಾಂತರ ಮಾಡುತ್ತಿದ್ದಾರೆಂದು ಆರೋಪಿಸಿ ಹಲ್ಲೆ, ಸಾಲಬಾಧೆ ತಾಳಲಾರದೆ ವಿಷಸೇವಿಸಿ ರೈತ ಆತ್ಮಹತ್ಯೆ

Published On - 4:02 pm, Mon, 3 January 22