ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ವೇಳೆ 23 ಕೋಟಿ ರೂ. ಖರ್ಚು ಮಾಡಿ ನಿರ್ಮಾಣ ಮಾಡಿದ್ದ ರಸ್ತೆ ಕಳಪೆ ಕಾಮಗಾರಿ ಹಿನ್ನೆಲೆ, ಸ್ಥಳೀಯ ಇಇ, ಎಇಇ, ಎಇ ಮೂವರು ಬಿಬಿಎಂಪಿ (BBMP) ಅಧಿಕಾರಿಗಳಿಗೆ ಮುಖ್ಯ ಅಭಿಯಂತರ ಪ್ರಹ್ಲಾದ್ ಶೋಕಾಸ್ ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿರುವುದು ಕಾಣುತ್ತಿದೆ. ಈ ಕುರಿತಾಗಿ ವರದಿ ನೀಡುವಂತೆ ಮೂವರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಟಿವಿ9 ಸುದ್ದಿ ಆಧರಿಸಿ ಮೂವರು ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಿದ್ದು, ಶೋಕಾಸ್ ನೋಟೀಸ್ನಲ್ಲಿ ಟಿವಿ9 ಹೆಸರು ಉಲ್ಲೇಖ ಮಾಡಲಾಗಿದೆ. ನೂತನವಾಗಿ ನಿರ್ಮಿಸಿದ್ದ ರಸ್ತೆ ಕೈಯಿಂದಲೇ ಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಹಿನ್ನೆಲೆ ವರದಿ ನೀಡುವಂತೆ ಮೂವರು ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಜೂನ್ 20ರಂದು ಬೆಂಗಳೂರಿಗೆ ಬಂದಾಗ, ಅವರು ಸಂಚರಿಸುವ ರಸ್ತೆಗಳು ಲಕಲಕ ಅಂತ ಹೊಳೆಯುತ್ತಿದ್ದವು. ಆದರೆ ಮೋದಿ ವಾಪಸ್ ಹೋದ್ಮೇಲೆ ತರಾತುರಿಯಲ್ಲಿ ಮಾಡಿದ್ದ ರಸ್ತೆಗಳು ಅದ್ವಾನ ಎದ್ದುಹೋಗಿವೆ. 23 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ರಸ್ತೆಯ ಸ್ಥಿತಿ ನೋಡುವಂತಿಲ್ಲ. ಸದ್ಯ ಬಿಬಿಎಂಪಿ(BBMP) ಡಾಂಬರ್ ರಸ್ತೆ ಕಳಪೆ ಕಾಮಗಾರಿ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ, ಪ್ರಧಾನಿ ಕಾರ್ಯಾಲಯ ವರದಿ ಕೇಳಿದ್ದು ಬಿಬಿಎಂಪಿ ಆಯುಕ್ತರಿಗೆ ವರದಿ ನೀಡುವಂತೆ ಸಿಎಂ ಕಚೇರಿ ಸೂಚನೆ ನೀಡಿದೆ.
ಮೂರೇ ದಿನಕ್ಕೆ ಬಯಲಾಯ್ತು ಬಿಬಿಎಂಪಿ ‘ಕಳಪೆ’ ಮುಖ
ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ಕೊಟ್ಟು ಕೇವಲ ಮೂರು ದಿನ ಮಾತ್ರ ಕಳೆದಿದೆ. ತರಾತುರಿಯಲ್ಲಿ ಬಿಬಿಎಂಪಿ ನಿರ್ಮಿಸಿದ ರಸ್ತೆಯ ಕಳಪೆ ಮುಖ ಬಯಲಾಗಿದೆ. ಸ್ವತಃ ಪ್ರಧಾನಿಯವ್ರೇ ಶಾಕ್ ಆಗುವಂತೆ ಬಿಬಿಎಂಪಿ ಕೆಲವೇ ದಿನಗಳಲ್ಲಿ ಕಾಮಗಾರಿ ಮುಗಿಸಿತ್ತು. ಬೆಂಗಳೂರು ವಿವಿ, ಕೊಮ್ಮಘಟ್ಟ ಸೇರಿದಂತೆ ಮೋದಿ ಸಂಚರಿಸೋ ಮಾರ್ಗದಲ್ಲಿ ಲಕಲಕ ಹೊಳೆಯುವಂತೆ ರಸ್ತೆ ಮಾಡಲಾಗಿತ್ತು. ಇದಕ್ಕೆ ಬರೋಬ್ಬರಿ 23 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಆದ್ರೀಗ ಬಿಬಿಎಂಪಿಯ ನಿರ್ಮಿಸಿದ್ದ ರಸ್ತೆಯ ಅಸಲಿಯತ್ತು ಬಯಲಾಗಿದೆ.
ಬೆಂಗಳೂರಿನ ವಿವಿಯಿಂದ ಮರಿಯಪ್ಪನಪಾಳ್ಯದ ಕಡೆ ಹೋಗುವ ರಸ್ತೆಯಲ್ಲಿ ಮೋದಿ ಬರ್ತಾರೆ ಅನ್ನೋ ಕಾರಣಕ್ಕೆ ಡಾಂಬರೀಕರಣ ಮಾಡಿದ್ರು. ಆದ್ರೆ, ಮೂರೇ ದಿನಕ್ಕೆ ಡಾಂಬರ್ ಕಿತ್ಕೊಂಡು ಬರ್ತಿದೆ. ಪ್ರಧಾನಿ ಭೇಟಿ ಕೊಟ್ಟ ಅಂಬೇಡ್ಕರ್ ಎಕನಾಮಿಕ್ ಕಾಲೇಜಿನ ರಸ್ತೆಯಲ್ಲೂ ಬೃಹತ್ ಗುಂಡಿ ಬಿದ್ದಿದೆ. ಅಂಬೇಡ್ಕರ್ ಕಾಲೇಜಿಗೆ ಮೋದಿ ಭೇಟಿ ಕೊಡ್ತಾರೆ ಅಂತಾ ಗುಂಡಿಗಳನ್ನ ಮುಚ್ಚಲಾಗಿತ್ತು. ಆದ್ರೀಗ ಮುಚ್ಚಿದ ಗುಂಡಿ ಕೂಡಾ ಬಾಯಿತೆರೆದಿದೆ.
ಇದನ್ನೂ ಓದಿ: Viral Video: ಮದುವೆಯಲ್ಲಿ ಗೆಳೆಯನನ್ನೇ ಶೂಟ್ ಮಾಡಿದ ಮದುಮಗ; ಹಸೆಮಣೆ ಏರಬೇಕಾದ ವರ ಜೈಲು ಸೇರಿದ