ಪ್ರವೀಣ್ ಹತ್ಯೆ ಪ್ರಕರಣ: ಪ್ರತಿಯೊಬ್ಬರಿಗೂ ರಕ್ಷಣೆ ನೀಡಲು ಸಾಧ್ಯವಾ..? ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ
ಪ್ರತಿ ಜಿಲ್ಲೆಯಿಂದ ಯುವ ಮೋರ್ಚಾ ಕಾರ್ಯಕರ್ತರು ಮಂಗಳೂರಿನ ಪ್ರವೀಣ್ ಮನೆಗೆ ತೆರಳಿ ಆರ್ಥಿಕ ಸಹಾಯ ಮಾಡಲಿದ್ದೇವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ನವದೆಹಲಿ: ಹಿಂದೂ ಕಾರ್ಯಕರ್ತ ಪ್ರವೀಣ್ (Praveen Nettaru) ನನ್ನ ಮಂಗಳವಾರ (26-07-22) ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಸಂಬಂಧ ಟಿವಿ9 ಜೊತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದು, ಸಾಮಾನ್ಯ ಜನರಿಗೂ ಭದ್ರತೆ ನೀಡಲು ಸಾಧ್ಯವಾ ಎಂದು ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ. ಪ್ರತಿಯೊಬ್ಬರಿಗೂ ರಕ್ಷಣೆಯನ್ನು ನೀಡುವುದಕ್ಕೆ ಆಗುತ್ತಾ ಎಂದು ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಯಾರೋ ಒಬ್ಬ ಮತಾಂಧ ದಾರಿಯಲ್ಲಿ ಹೋಗುವವರಿಗೆ ಚಾಕು ಚುಚ್ಚಿದರೆ ಸೆಕ್ಯೂರಿಟಿ ನೀಡೋಕಾಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ಯುವ ಮೋರ್ಚಾ ಕಾರ್ಯಕರ್ತರಿಂದ ಪ್ರವೀಣ್ ಕುಟುಂಬಕ್ಕೆ ಸಹಾಯ
ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆಯನ್ನು ಖಂಡಿಸಿ, ಅವರ ಆತ್ಮಕ್ಕೆ ಸದ್ಗತಿ ಕೋರಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಸದಸ್ಯರ ಜೊತೆ ಈಗಷ್ಟೇ ಮಾತನಾಡಿ ಸಾಂತ್ವನ ಹೇಳಿದ್ದೇನೆ. ದೇಶದ ಸಮಸ್ತ ಬಿಜೆಪಿ ಕಾರ್ಯಕರ್ತರ ಕುಟುಂಬ, ಪ್ರವೀಣ್ ಅವರ ಕುಟುಂಬದ ಜೊತೆ ನಿಲ್ಲುತೆ. ಹರ್ಷ ಮತ್ತು ಪ್ರವೀಣ್ ನೆಟ್ಟಾರು ಅವರ ಪ್ರಕರಣವನ್ನು ಯೂ.ಎ.ಪಿ.ಎ ಕಾಯ್ದೆಯ ವ್ಯಾಪ್ತಿಯಡಿಯಲ್ಲಿ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿಯವರಲ್ಲಿ ಕೋರುತ್ತೇನೆ ಎಂದು ಹೇಳಿದರು. ಪ್ರತಿ ಜಿಲ್ಲೆಯಿಂದ ಯುವ ಮೋರ್ಚಾ ಕಾರ್ಯಕರ್ತರು ಮಂಗಳೂರಿನ ಪ್ರವೀಣ್ ಮನೆಗೆ ತೆರಳಿ ಆರ್ಥಿಕ ಸಹಾಯ ಮಾಡಲಿದ್ದೇವೆ. ಜೊತೆಗೆ ಹಿರಿಯ ನಾಯಕರ ಜೊತೆಗೆ ಮಾತನಾಡಿದ್ದೇವೆ. ಈ ಸರಣಿ ಹತ್ಯೆ ಹಿಂದಿರುವ ಗುಂಪು ಪತ್ತೆ ಹಚ್ಚಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿ ನೀಡಿದ್ದು, ಯಾರ ಮೇಲೆ ಹಿಂದೆ ಹತ್ಯೆಯ ಕೇಸಿತ್ತೋ ಅವರ ಮೇಲಿನ ಎಫ್‍ಐಆರ್ ರದ್ದು ಮಾಡಲಾಗಿತ್ತು. ರಾಜಸ್ಥಾನದಲ್ಲೂ ಕನ್ಹಯ್ಯ ಲಾಲ್ ಹತ್ಯೆ ಮಾಡಲಾಯಿತು. ಈ ರೀತಿ ಆಗುತ್ತಾ ಹೋದರೆ ಸಾಮಾನ್ಯ ಜನರಿಗೂ ಭದ್ರತೆ ನೀಡಲು ಸಾಧ್ಯವಾ. ಇದು ಮತಾಂಧತೆ ಮತ್ತು ಸಿದ್ಧಾಂತದ ಸಮಸ್ಯೆ ಎಂದು ಕಿಡಿಕಾರಿದರು.
ಪ್ರವೀಣ್ ಮರ್ಡರ್ಗೂ ಮೊದಲು ಭಯಾನಕ ಸಂಚು!
ಸದ್ಯ ಪ್ರವೀಣ್ ಹತ್ಯೆಗೆ ಟ್ವಿಸ್ಟ್ ಸಿಕ್ಕಿದ್ದು, 40 ನಿಮಿಷ ಕಾದು ರಕ್ತದೋಕುಳಿ ಹರಿಸಿದ್ರಾ ಕಿಲ್ಲರ್ಸ್ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಕೊಲೆಗೂ ಮೊದಲು ಅದೊಂದು ಜಾಗದಲ್ಲೇ ಹಂತಕರು ಟೆಂಟ್ ಹಾಕಿದ್ದು, ಸಿಸಿಟಿವಿಯಲ್ಲಿ ಹಂತಕರ ಹೆಜ್ಜೆಗುರುತು ಸೆರೆಯಾಗಿದೆ. ಈ ಕುರಿತಾಗಿ ಟಿವಿ9 ಬಳಿ ಹಂತಕರ ಎಕ್ಸ್ಕ್ಲೂಸಿವ್ ವಿಡಿಯೋ ಲಭ್ಯವಾಗಿದೆ. ಪ್ರವೀಣ್ ಮರ್ಡರ್ಗೂ ಮೊದಲು ಹಂತಕರು ಭಯಾನಕ ಸಂಚು ರೂಪಿಸಿದ್ದು, ಪ್ರವೀಣ್ ಚಿಕನ್ ಅಂಗಡಿಯಿಂದ 50 ಮೀ. ದೂರದಲ್ಲಿ 40 ನಿಮಿಷದವರೆಗೂ ಒಂದೇ ಜಾಗದಲ್ಲಿ ಬೈಕ್ ನಿಲ್ಲಿಸಿದ್ದರು. ರಾತ್ರಿ 8 ಗಂಟೆ 1 ನಿಮಿಷ 51 ಸೆಕೆಂಡ್ಗೆ ಎಂಟ್ರಿ ಕೊಟ್ಟಿದ್ದು, 8 ಗಂಟೆ 1 ನಿಮಿಷ 57 ಸೆಕೆಂಡ್ಗೆ 50 ಮೀ. ದೂರ ಸ್ಟಾಪ್ ಮಾಡಿದ್ದಾರೆ. 8 ಗಂಟೆ 33 ನಿಮಿಷಕ್ಕೆ ಅಂಗಡಿ ಮುಂದೆ ಹೋಗಿದ್ದು, ಚಿಕನ್ ಅಂಗಡಿ ಮುಂದೆ ಹೋಗಿ ಮತ್ತೆ ಜಾಗದಲ್ಲಿ ಸ್ಟಾಪ್ ಆಗಿದ್ದಾರೆ.
8 ಗಂಟೆ 38 ನಿಮಿಷಕ್ಕೆ ಮತ್ತೆ ಅಂಗಡಿ ದಿಕ್ಕಿನತ್ತ ಹಂತಕರು ಸಾಗಿದ್ದು, 8.38 ರಿಂದ 8.40 ರ ಸಮಯದಲ್ಲಿ ಹತ್ಯೆ ನಡೆದಿರುವ ಸಾಧ್ಯತೆಯಿದ್ದು, 8 ಗಂಟೆ 40 ನಿಮಿಷಕ್ಕೆ ಅಂಗಡಿಯತ್ತ ಜನ ಓಡೋಡಿ ಬಂದಿದ್ದಾರೆ. ಸದ್ಯ 40 ನಿಮಿಷ ನಿಂತಿದ್ದ ಬೈಕ್ ಪತ್ತೆಗಾಗಿ ಬೆಳ್ಳಾರೆ ಠಾಣೆ ಪೊಲೀಸರು ಬೆನ್ನುಬಿದಿದ್ದು, ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದಾರೆ. ಅನುಮಾನಾಸ್ಪದ ಬೈಕ್, ಮೂವರಿಗಾಗಿ ಖಾಕಿ ತಲಾಶ್ ನಡೆಸಿದ್ದಾರೆ.