ಪ್ರವೀಣ್ ಹತ್ಯೆ: ಆರೋಪಿಗಳ ಬಂಧಿಸುವರೆಗೂ ವಿಶ್ರಮಿಸುವುದಿಲ್ಲ, ಅಗತ್ಯಬಿದ್ರೆ ಎನ್‌ಐಎ ತನಿಖೆಗೆ ವಹಿಸ್ತೇವೆ : ಸಿಎಂ ಬೊಮ್ಮಾಯಿ

| Updated By: ವಿವೇಕ ಬಿರಾದಾರ

Updated on: Jul 27, 2022 | 7:14 PM

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಅಗತ್ಯಬಿದ್ದರೇ ಎನ್‌ಐಎ ತನಿಖೆಗೆ ವಹಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪ್ರವೀಣ್ ಹತ್ಯೆ: ಆರೋಪಿಗಳ ಬಂಧಿಸುವರೆಗೂ ವಿಶ್ರಮಿಸುವುದಿಲ್ಲ, ಅಗತ್ಯಬಿದ್ರೆ ಎನ್‌ಐಎ ತನಿಖೆಗೆ ವಹಿಸ್ತೇವೆ : ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಅಗತ್ಯಬಿದ್ದರೇ ಎನ್‌ಐಎ ತನಿಖೆಗೆ ವಹಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದಷ್ಟು ಬೇಗ ಕೊಲೆ ಆರೋಪಿಗಳನ್ನು ಬಂಧಿಸುತ್ತೇವೆ. ಉಗ್ರ ಶಿಕ್ಷೆ ಕೊಡಿಸುತ್ತೇವೆ, ಯಾವುದೇ ಅನುಮಾನಬೇಡ. ದುಷ್ಕರ್ಮಿಗಳನ್ನು ದಮನ ಮಾಡುವವರೆಗೂ ವಿಶ್ರಮಿಸಲ್ಲ ಎಂದರು.

ಜಿಲ್ಲಾ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಡಿಜಿಪಿ ಅವರು ತಂಡ ರಚಿಸಿ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪ್ರಾರ್ಥಮಿಕ ಮಾಹಿತಿ ಪಡೆಯಬೇಕಾಗುತ್ತೆ. ಅದಕ್ಕೆಯಾದ ಕೆಲವೊಂದು ನಿಯಮಗಳು ಇರುತ್ತೆ. ಅವೆಲ್ಲವನ್ನೂ ಗಮನಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಪ್ರವೀಣ್ ಹತ್ಯೆ ಬಗ್ಗೆ ಕ್ರಮ ಕೈಗೊಳ್ಲೋಕೆ ಆದೇಶಿಸಿದ್ದು, ಕಾರ್ಯಾಚರಣೆ ನಡೀತಿದೆ. ಡಿಜಿ‌ ಅವರ‌ ಬಳಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಶೀಘ್ರವೇ ಕೊಲೆ‌ ಮಾಡಿದವರನ್ನ ಬಂಧಿಸಿ‌ ಉಗ್ರ ಶಿಕ್ಷೆಗೆ ಒಳಪಡಿಸುತ್ತೇವೆ. ಘಟನೆ ಹಿಂದೆ ಯಾರೇ‌ ಇದ್ದರೂ ಬಂಧಿಸುತ್ತೇವೆ. ಆವೇಶಕ್ಕೆ ಯಾರೂ ಒಳಗಾಗಬಾರದು. ಶಾಂತಿ ಕಾಪಾಡಬೇಕೆಂದು ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಕಾರ್ಯಕರ್ತನ ಹತ್ಯೆ ಖಂಡಿಸಲು ನಿನ್ನೆ ನನ್ನ ಬಳಿ ಶಬ್ದಗಳಿರಲಿಲ್ಲ: ಹತ್ಯೆ ಪ್ರಕರಣ ಸಂಬಂಧ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮಾತನಾಡಿ ಕಾರ್ಯಕರ್ತನ ಹತ್ಯೆ ಖಂಡಿಸಲು ನಿನ್ನೆ ನನ್ನ ಬಳಿ ಶಬ್ದಗಳಿರಲಿಲ್ಲ. ತನಿಖೆ ತೀವ್ರಗೊಳಿಸಲು ಸಿಎಂ, ಗೃಹಮಂತ್ರಿಗೆ ಮನವಿ ಮಾಡಿದ್ದೇನೆ. ಮನೆ ಮಗನನ್ನ ಕಳೆದುಕೊಂಡಿದ್ದೇವೆ ಎಂದು ಸಂತಾಪ ಸೂಚಿಸಿದರು.

ಆದರೆ ಒಂದಂತೋ ಹೇಳಲು ಬಯಸುವೆ, ಇದರ ಹಿಂದಿರುವ ಶಕ್ತಿಗಳನ್ನ ಮಟ್ಟ ಹಾಕಲು ನಾವು ಸನ್ನದ್ದರಾಗಿದ್ದೇವೆ. ನಾವು ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಸರ್ಕಾರ ತಕ್ಕ ಉತ್ತರವನ್ನ ಕಾನೂನಿನ ಚೌಕಟ್ಟಿನಲ್ಲಿ ನೀಡಲಿದೆ. ಮತಾಂಧ ಶಕ್ತಿಗಳನ್ನ ಹತ್ತಿಕ್ಕುವ ಕೆಲಸ ಮಾಡೇ ಮಾಡುತ್ತೇವೆ. ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಶಾಂತಿ ಕದಡುವ ಕೆಲಸ ಆಗಿರಲಿಲ್ಲ ಎಂದರು.

ಕೇರಳದಿಂದ ಬಂದು ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಜನಾಕ್ರೋಶವನ್ನ ಸರ್ಕಾರ ಗಮನದಲ್ಲಿಟ್ಟುಕೊಂಡಿದೆ. ಹಂತಕರಿಗೆ ಯಾವ ಶಿಕ್ಷೆ ಕೊಡಬೇಕೋ ಆ ಶಿಕ್ಷೆ ಕೊಡಲಿದೆ. ಪೋಲಿಸ್ ಇಲಾಖೆಗೆ ಮುಕ್ತವಾದ ಅವಕಾಶ ನೀಡುತ್ತೇವೆ. ಮುಂದಿನ ಎರಡು ಮೂರು ದಿನಗಳ ಕಾಲ ಸಿಎಂ ಹಾಗೂ ಗೃಹ ಸಚಿವರ ಜೊತೆ ಸಂಪರ್ಕದಲ್ಲಿದ್ದುಕೊಂಡ ಮತೀಯ ಶಕ್ತಿಯನ್ನು ಮಟ್ಟ ಹಾಕುತ್ತೇವೆ ಎಂದು ತಿಳಿಸಿದರು.

Published On - 5:12 pm, Wed, 27 July 22