
ಬೆಂಗಳೂರು, ಅಕ್ಟೋಬರ್ 31: ವಕೀಲರಾದವರಿಗೆ ಹಣ ಗಳಿಸುವುದು ಆರಂಭದ ಗುರಿಯಾಗಬಾರದು, ಸತ್ಯನಿಷ್ಠೆಯಿಂದ ಸಮಾಜ ಸೇವೆ ಮಾಡುವುದೇ ಮುಖ್ಯವಾಗಬೇಕು ಎಂದು ಹಿರಿಯ ವಕೀಲ ಉದಯ ಹೊಳ್ಳ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲಾ ವತಿಯಿಂದ ಆಯೋಜಿಸಲಾಗಿದ್ದ ಪ್ರೆಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್‌ಫೇಸ್ ಸಮಿಟ್ 2025ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ವಕೀಲ ವೃತ್ತಿಯು ಒಂದು ಪವಿತ್ರ ಮತ್ತು ಸೇವಾಭಾವದ ವೃತ್ತಿಯಾಗಿದೆ. ನ್ಯಾಯ, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ನಿರಂತರ ಜ್ಞಾನಾಸಕ್ತಿ ಪ್ರತಿಯೊಬ್ಬ ವಕೀಲನಲ್ಲೂ ಇರಬೇಕಾದ ಗುಣಗಳು ಎಂದರು.
ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದ ಕೆಪಿಎಂಜಿ (KPMG) ಇಂಡಿಯಾದ ಎಜುಕೇಶನ್ ಮತ್ತು ಸ್ಕಿಲ್ ಡೆವಲಪ್ಮೆಂಟ್ ವಿಭಾಗದ ರಾಷ್ಟ್ರೀಯ ನಾಯಕ ನರಾಯಣನ್ ರಾಮಸ್ವಾಮಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಉದ್ಯಮಕ್ಕೆ ತಕ್ಕಂತೆ ತಾವು ಸಿದ್ಧರಾಗಬೇಕು ಎಂದರು.
ಇದನ್ನೂ ಓದಿ: ಸೈನಿಕ್ ಶಾಲಾ ಪ್ರವೇಶ ಪರೀಕ್ಷಾ ನೋಂದಣಿ ಶೀಘ್ರದಲ್ಲೇ ಮುಕ್ತಾಯ; ಕೂಡಲೇ ಅರ್ಜಿ ಸಲ್ಲಿಸಿ
ಉದಯ ಹೊಳ್ಳಾ ಅವರನ್ನು ಸನ್ಮಾನಿಸಲಾಯಿತು.
ಉದಯ ಹೊಳ್ಳಾ, ರಾಮಸ್ವಾಮಿ ಮತ್ತು ಡಾ. ಸರೋಜ್ ಶರ್ಮಾ (ಡೀನ್, ಕಾನೂನು ಶಾಲೆ) ಅವರನ್ನು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಚಾನ್ಸಲರ್ ಡಾ. ನಿಸ್ಸಾರ್ ಅಹಮದ್ ಸನ್ಮಾನಿಸಿದರು. ಒಂದು ದಿನದ ಈ ಸಮಿಟ್‌ನಲ್ಲಿ ಪ್ರಮುಖ ಸಂಸ್ಥೆಗಳ ಗಣ್ಯರನ್ನ ಒಳಗೊಂಡ ನಾಲ್ಕು ವಿಶಿಷ್ಟ ಪ್ಯಾನೆಲ್ ಚರ್ಚೆಗಳು ನಡೆದವು. ಅಕಾಡೆಮಿಕ್ ವಲಯ ಮತ್ತು ಕಾನೂನು ಕ್ಷೇತ್ರದ ನಡುವಿನ ಸಹಯೋಗವನ್ನು ಬಲಪಡಿಸುವ ಜೊತೆಗೆ ಜ್ಞಾನ ವಿನಿಮಯಕ್ಕಾಗಿ ವೇದಿಕೆ ಒದಗಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:05 pm, Fri, 31 October 25