ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು (School) ಆರಂಭವಾಗಲಿವೆ. ಕೊರೊನಾ ಕಾರಣಕ್ಕೆ ಎರಡು ವರ್ಷ ಶಾಲೆಗಳು ಸರಿಯಾಗಿ ನಡೆದಿಲ್ಲದ ಹಿನ್ನಲೆ ಈ ವರ್ಷ ಮೇ ತಿಂಗಳ ಎರಡನೇ ವಾರದಲ್ಲಿಯೇ ಶಾಲೆಗಳು ಆರಂಭವಾಗಲಿವೆ. ಎರಡು ವಾರಗಳ ಬೇಸಿಗೆ ರಜೆಗೆ ಬ್ರೇಕ್ ಹಾಕಿ ಶಾಲೆಗಳ ಆರಂಭಗೊಳ್ಳಲಿದ್ದು, ಮೊದಲ ದಿನದಿಂದಲೇ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ. ಇಂದಿನಿಂದ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುತ್ತಿದೆ. ಕೊರೊನಾದಿಂದ ಕಲಿಕಾ ಹಿನ್ನಡೆ ಸರಿದೂಗಿಸಲು ಮಕ್ಕಳಿಗೆ ವರ್ಷ ಪೂರ್ತಿ ಕಲಿಕಾ ಚೇತರಿಕೆ ನಡೆಯಲಿದೆ. ಮಕ್ಕಳನ್ನು ಬಹಳ ಸಂತೋಷದಿಂದ ಬರಮಾಡಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಶಾಲೆಗಳಲ್ಲಿ ಸಿಹಿ ಖಾದ್ಯವನ್ನು ನೀಡಿ ಮಕ್ಕಳ ಸ್ವಾಗತಕ್ಕೆ ತಯಾರಿ ಮಾಡಲಾಗುತ್ತಿದೆ. ಕೋವಿಡ್‌ನಿಂದಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಶಾಲೆಗಳಲ್ಲಿ ಸರಿಯಾಗಿ ಭೌತಿಕ ತರಗತಿಗಳು ನಡೆದಿಲ್ಲ. ವಿದ್ಯಾರ್ಥಿಗಳು ಸಹ ಶೈಕ್ಷಣಿಕವಾಗಿ ಬಹಳ ಹಿಂದೆ ಉಳಿದಿದ್ದಾರೆ. ಇದರಿಂದಾಗಿ 2022-23 ನೇ ಶೈಕ್ಷಣಿಕ ವರ್ಷವನ್ನು ಮೇ 16ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಇಂದಿನಿಂದ 1 ರಿಂದ 10 ನೇ ತರಗತಿವರೆಗೂ ಶಾಲಾರಂಭವಾಗಲಿದ್ದು, ಕೊರೊನಾ ಬಳಿಕ ಶೈಕ್ಷಣಿಕ ಅವಧಿಗೂ ಎರಡು ವಾರ ಮುಂಚಿತವಾಗಿ ಶಾಲೆ ಆರಂಭವಾಗುತ್ತಿವೆ. ಮೊದಲ ದಿನವೇ ಮಕ್ಕಳಿಗಾಗಿ ಕ್ಷೀರಾಭಾಗ್ಯ, ಮಧ್ಯಾಹ್ನದ ಬಿಸಿಊಟ, ಮತ್ತು ಕಲಿಕಾ ಚೇತರಿಕೆ ಪ್ರಾರಂಭಗೊಳ್ಳಲಿದ್ದು, 15 ದಿನಗಳ ಕಾಲ ಕಲಿಕಾ ಚೇತರಿಕೆ ನಡೆಯಲಿದೆ. ಈ ಬ್ರಿಡ್ಜ್ ಕೋರ್ಸ್ನಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾದ ರೀತಿಯಲ್ಲಿ ಟ್ರೈನ್ ಮಾಡಲಗುವುದಾಗಿದೆ.
ಸೇತುಬಂಧ ಕಾರ್ಯಕ್ರಮ ನಡೆಸಲು ಶಾಲೆಗಳಿಗೆ ಸೂಚನೆ:
ಮೇ 16ರಿಂದ ಜೂನ್ 15ರವರೆಗೆ, ಒಂದು ತಿಂಗಳ ಅವಧಿಗೆ ಸೇತುಬಂಧ ಕಾರ್ಯಕ್ರಮ ನಡೆಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಮೇ 16ರಿಂದಲೇ ಮಕ್ಕಳ ದಾಖಲಾತಿ ಆರಂಭಿಸಿ, ಜುಲೈ 31ರೊಳಗೆ ಮುಗಿಸಬೇಕು. ಮೇ 14ರಿಂದ ತರಗತಿ ಆರಂಭಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಮೇ 16ರಿಂದ 20ರವರೆಗೆ ದಾಖಲಾತಿ ಆಂದೋಲನ ನಡೆಸಬೇಕು. ಜೂನ್ 1ರಿಂದ ಕಲಿಕಾ ಚೇತನ ಕಾರ್ಯಕ್ರಮದಡಿ ಪಠ್ಯ ಬೋಧನೆ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಈಗಾಗಲೇ ಹೇಳಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.