ನಾಳೆ ಸಂಪೂರ್ಣ ಸ್ತಬ್ಧವಾಗುತ್ತಾ ಬೆಂಗಳೂರು? ಏನಿರುತ್ತೆ? ಏನಿರಲ್ಲ?

| Updated By: Rakesh Nayak Manchi

Updated on: Sep 10, 2023 | 4:39 PM

ಶಕ್ತಿ ಯೋಜನೆ ಜಾರಿ ನಂತರ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿರುವ ಖಾಸಗಿ ಸಾರಿಗೆ ಮಾಲೀಕರಿಗೆ ಭಾರೀ ಆರ್ಥಿಕ ಹೊಡೆತ ಬಿದ್ದಿದೆ. ಹೀಗಾಗಿ ಯೋಜನೆ ಸ್ಥಗಿತಕ್ಕೆ ಖಾಸಗಿ ಸಾರಿಗೆ ಒಕ್ಕೂಟಗಳು ಸರ್ಕಾರವನ್ನು ಒತ್ತಾಯಿಸುತ್ತಲೇ ಇವೆ. ಇದಕ್ಕೆ ಕ್ಯಾರೇ ಎನ್ನದ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬೆಂಗಳೂರಿನ ಖಾಸಗಿ ಟ್ಯಾಕ್ಸಿ ಮತ್ತು ಬಸ್ ಸಂಘಗಳು ಸೆಪ್ಟೆಂಬರ್ 11 ರಂದು (ಸೋಮವಾರ) ಮುಷ್ಕರ ನಡೆಸಲಿವೆ.

ನಾಳೆ ಸಂಪೂರ್ಣ ಸ್ತಬ್ಧವಾಗುತ್ತಾ ಬೆಂಗಳೂರು? ಏನಿರುತ್ತೆ? ಏನಿರಲ್ಲ?
ಸೆ.11 ರಂದು ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟಗಳಿಂದ ಮುಷ್ಕರ
Image Credit source: PTI
Follow us on

ಬೆಂಗಳೂರು, ಸೆ.10: ಶಕ್ತಿ ಯೋಜನೆ ಜಾರಿ ನಂತರ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿರುವ (Bengaluru) ಖಾಸಗಿ ಸಾರಿಗೆ ಮಾಲೀಕರಿಗೆ ಭಾರೀ ಆರ್ಥಿಕ ಹೊಡೆತ ಬಿದ್ದಿದೆ. ಹೀಗಾಗಿ ಯೋಜನೆ ಸ್ಥಗಿತಕ್ಕೆ ಖಾಸಗಿ ಸಾರಿಗೆ ಒಕ್ಕೂಟಗಳು ಸರ್ಕಾರವನ್ನು ಒತ್ತಾಯಿಸುತ್ತಲೇ ಇವೆ. ಇದಕ್ಕೆ ಕ್ಯಾರೇ ಎನ್ನದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬೆಂಗಳೂರಿನ ಖಾಸಗಿ ಟ್ಯಾಕ್ಸಿ ಮತ್ತು ಬಸ್ ಸಂಘಗಳು ಸೆಪ್ಟೆಂಬರ್ 11 ರಂದು (ಸೋಮವಾರ) ಮುಷ್ಕರ ನಡೆಸಲಿವೆ.

ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಸಂಚಾರ ಬಂದ್ ಆಗಲಿದೆ. ಒಂದಲ್ಲ ಎರಡಲ್ಲ, ಬರೋಬ್ಬರಿ 7 ಲಕ್ಷ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಶಕ್ತಿ ಯೋಜನೆ ವಿರೋಧಿಸಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟ ಸರ್ಕಾರದ ವಿರುದ್ಧ ಸಮರ ಸಾರಿದೆ. ನಾಳೆ ಖಾಸಗಿ ಬಸ್, ಓಲಾ ಆಟೋ, ಕ್ಯಾಬ್, ಉಬರ್ ಆಟೋ ಕ್ಯಾಬ್, ಏರ್‌ಪೋರ್ಟ್ ಟ್ಯಾಕ್ಸಿ, ಗೂಡ್ಸ್ ವಾಹನಗಳು, ಶಾಲಾ ವಾಹನಗಳು, ಸಿಟಿ ಟ್ಯಾಕ್ಸಿ ಕಾರ್ಪೋರೇಟ್ ಕಂಪನಿಯ ಬಸ್‌ಗಳು ಬಂದ್ ಆಗಿರಲಿವೆ.

ಇದನ್ನೂ ಓದಿ: ಸೋಮವಾರ ಬೆಂಗಳೂರು ಬಂದ್, ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಿಎಂಟಿಸಿಯಿಂದ ಹೆಚ್ಚುವರಿ ಟ್ರಿಪ್

ಸಂಚಾರ ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೆ ಖಾಸಗಿ ಸಾರಿಗೆ ಸಿಬ್ಬಂದಿ ಮುಂದಾಗಿದ್ದಾರೆ. 32ಕ್ಕೂ ಹೆಚ್ಚು ಸಂಘಟನೆಗಳು ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಲಿವೆ.

ಇಂದು ಮಧ್ಯರಾತ್ರಿಯಿಂದಲೇ ಖಾಸಗಿ ಸಾರಿಗೆ ಬಂದ್ ಶುರುವಾಗಲಿದ್ದು, ನಾಳೆ ಮಧ್ಯರಾತ್ರಿ 12ಗಂಟೆವರೆಗೆ ಖಾಸಗಿ ಸಾರಿಗೆ ಬಂದ್ ಆಗಿರಲಿವೆ. ಏರ್ ಪೋರ್ಟ್ ಟ್ಯಾಕ್ಸಿ ಕೂಡ ಸಂಪೂರ್ಣ ಸ್ಥಗಿತ ಸಾಧ್ಯತೆಯಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಱಲಿ ನಡೆಯಲಿದ್ದು, ಫ್ರೀಡಂಪಾರ್ಕ್ ವರೆಗೆ ವಿವಿಧ ಸಂಘಟನೆಗಳು ಱಲಿ ನಡೆಸಲಿವೆ. ಮೆರವಣಿಗೆ ಬಳಿಕ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬೇರೆ ಜಿಲ್ಲೆಗಳ ಚಾಲಕರಿಗೂ ಮನವಿ ಮಾಡಲಾಗಿದೆ.

ಖಾಸಗಿ ಸಾರಿಗೆ ಸಂಘಟನೆಗಳೆಲ್ಲ ನಾಳೆ ಬೆಂಗಳೂರು ಬಂದ್​ಗೆ ಕರೆ ನೀಡರಿವುದರ ಹಿಂದೆ ಕಾರಣವಿದೆ. ಹಲವು ದಿನಗಳಿಂದ ಈಡೇರದ ಸಾಲು ಸಾಲು ಬೇಡಿಕೆಗಳನ್ನಿಟ್ಟುಕೊಂಡು ಖಾಸಗಿ ಸಾರಿಗೆ ಸಿಬ್ಬಂದಿ ಸಮರ ಸಾರಿದ್ದಾರೆ. ಇದರ ಜೊತೆ ನಾಳೆಯ ಬಂದ್​ನಿಂದ ಸಂಚಾರ ಸೇವೆಯಲ್ಲಿ ಭಾರಿ ಅಸ್ತವ್ಯಸ್ತವಾಗಲಿದೆ. ನಾಳೆ ಬೆಂಗಳೂರಲ್ಲಿ ಏನಿರುತ್ತೆ ಏನಿರಲ್ಲ ಅನ್ನೋ ಗೊಂದಲವೂ ಇದೆ. ಹಾಗಾದರೆ, ನಾಳೆ ನಗರದಲ್ಲಿ ಏನಿರುತ್ತೆ? ಏನಿರಲ್ಲ?

ನಾಳೆ ಬೆಂಗಳೂರಿನಲ್ಲಿ ಏನಿರಲ್ಲ?

  • ಖಾಸಗಿ ಬಸ್ ಸೇವೆ
  • ಓಲಾ ಆಟೋ, ಟ್ಯಾಕ್ಸಿ
  • ಉಬರ್ ಆಟೋ, ಟ್ಯಾಕ್ಸಿ
  • ಏರ್ ಪೋರ್ಟ್ ಟ್ಯಾಕ್ಸಿ
  • ಗೂಡ್ಸ್ ವಾಹನಗಳು
  • ಶಾಲಾ ವಾಹನಗಳು
  • ಸಿಟಿ ಟ್ಯಾಕ್ಸಿ
  • ಕಾರ್ಪೋರೇಟ್ ಕಂಪನಿ ಬಸ್

ನಾಳೆ ಬೆಂಗಳೂರಿನಲ್ಲಿ ಏನಿರುತ್ತೆ?

  • ಕೆಎಸ್​ಆರ್​ಟಿಸಿ ಬಸ್
  • ಬಿಎಂಟಿಸಿ ಬಸ್

ಖಾಸಗಿ ಸಾರಿಗೆ ಸಿಬ್ಬಂದಿ ಸಮರ ನಡೆಸುತ್ತಿರುವುದು ಕೇವಲ ಶಕ್ತಿ ಯೋಜನೆಯ ಉಚಿತ ಬಸ್​ ವಿಚಾರಕ್ಕಷ್ಟೇ ಅಲ್ಲ, ಸರ್ಕಾರದ ಮುಂದೆ ಖಾಸಗಿ ಸಾರಿಗೆ ಒಕ್ಕೂಟ ಸಾಲು ಸಾಲು ಬೇಡಿಕೆಯಿಟ್ಟಿದೆ. ಆಟೋ, ಟ್ಯಾಕ್ಸಿ ಚಾಲಕರು, ಖಾಸಗಿ ಬಸ್ ಚಾಲಕರು ಸರ್ಕಾರಕ್ಕೆ ಪ್ರತ್ಯೇಕ ಡಿಮ್ಯಾಂಡ್​ಗಳನ್ನು ಇಟ್ಟಿದ್ದಾರೆ. ಹಾಗಾದರೆ ಸಾರಿಗೆ ಒಕ್ಕೂಟದ ಬೆಡಿಕೆಗಳೇನು?

ಆಟೋ ಚಾಲಕರ ಬೇಡಿಕೆಗಳು

  • ಆಟೋ ಚಾಲಕರಿಗೆ 10 ಸಾವಿರ ರೂ. ಮಾಸಿಕ ಪರಿಹಾರ
  • ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ
  • ರಾಜ್ಯ ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ಧಪಡಿಸಬೇಕು
  • ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಇಂದಿರಾ ಕ್ಯಾಂಟೀನ್ ಬೇಕು
  • ಎಲೆಕ್ಟ್ರಿಕ್ ಆಟೋಗಳಿಗೆ ಸಹ ರಹದಾರಿ ನೀಡಬೇಕು

ಟ್ಯಾಕ್ಸಿ ಚಾಲಕರ ಬೇಡಿಕೆಗಳು

  • ಜೀವಾವಧಿ ತೆರಿಗೆ ಕಂತುಗಳಲ್ಲಿ ಪಾವತಿಸುವ ಅವಕಾಶ ಕಲ್ಪಿಸಿ
  • ಟ್ಯಾಕ್ಸಿ ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು
  • ಮಕ್ಕಳಿಗೆ ವಿದ್ಯಾರ್ಥಿ ವೇತನ, ವಿದ್ಯಾಭ್ಯಾಸಕ್ಕೆ ಧನಸಹಾಯ

ಖಾಸಗಿ ಬಸ್ ಚಾಲಕರ ಬೇಡಿಕೆಗಳು

  • ಖಾಸಗಿ ಬಸ್​ಗಳಿಗೂ ‘ಶಕ್ತಿ’ ಯೋಜನೆಯನ್ನು ವಿಸ್ತರಿಸಬೇಕು
  • ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು
  • ಕಿ.ಮೀ. ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು

ಹೀಗೆ ಸಾಲು ಸಾಲು ಡಿಮ್ಯಾಂಡ್ ಇಟ್ಟಿರುವ ಖಾಸಗಿ ಸಾರಿಗೆ ಸಿಬ್ಬಂದಿ ನಾಳೆ ಬಂದ್ ಮೂಲಕ ತಮ್ಮ ಆಗ್ರಹ ಸರ್ಕಾರದ ಮುಂದಿಡಲಿದ್ದಾರೆ. ಇದಕ್ಕೆ ಸರ್ಕಾರ ಎಷ್ಟರಮಟ್ಟಿಗೆ ಸ್ಪಂದಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ