ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಆಕ್ಷೇಪ
ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಆರ್‌ಎಸ್‌ಎಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ಎತ್ತಿದ್ದು, ವಸತಿ ಪ್ರದೇಶಗಳನ್ನು ಸೈದ್ಧಾಂತಿಕ ಪ್ರಚಾರಕ್ಕೆ ಬಳಸುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಆರ್‌ಎಸ್‌ಎಸ್ ಕಾರ್ಯಕ್ರಮದ ಉದ್ದೇಶ ಏನಿತ್ತು? ಪ್ರಿಯಾಂಕ್ ಖರ್ಗೆ ಕಳವಳವೇನು ಎಂಬ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಅಪಾರ್ಟ್‌ಮೆಂಟ್‌ನಲ್ಲಿ ಆರ್‌ಎಸ್‌ಎಸ್ ಸಮಾವೇಶಕ್ಕೆ ಖರ್ಗೆ ಆಕ್ಷೇಪ
- ಯುವಜನರ ಸೈದ್ಧಾಂತಿಕ ಪ್ರಭಾವದ ಕುರಿತು ಕಳವಳ
- ಸಂಸ್ಥೆಯ ಕಾನೂನಾತ್ಮಕ ಸ್ಥಿತಿ ಪ್ರಶ್ನಿಸಿದ ಸಚಿವ
ಬೆಂಗಳೂರು, ಸೆಪ್ಟೆಂಬರ್ 28: ಖಾಸಗಿ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವತಿಯಿಂದ ನಡೆಯುತ್ತಿರುವ ಪ್ರಚಾರ ಹಾಗೂ ಸಭೆ-ಸಮಾರಂಭಗಳ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜಧಾನಿ ಬೆಂಗಳೂರಿನ ಪ್ರಸಿದ್ಧ ಅಪಾರ್ಟ್‌ಮೆಂಟ್ ಒಂದರಲ್ಲಿ ಯುವಜನತೆ ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ಹಮ್ಮಿಕೊಳ್ಳಲಾಗಿದ್ದ ‘ಇಂಟ್ರೊಡಕ್ಷನ್ ಟು ಆರ್‌ಎಸ್‌ಎಸ್ (ಆರ್‌ಎಸ್‌ಎಸ್ ಪರಿಚಯ)’ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ಅವರು, ವಸತಿ ಸಮುಚ್ಚಯಗಳ ಬಳಕೆಯ ಕುರಿತು ಪ್ರಶ್ನೆ ಎತ್ತಿದ್ದಾರೆ.
ಯಾವುದೇ ಸಂಸ್ಥೆಯು ಸಾರ್ವಜನಿಕರ ಅಥವಾ ನಿವಾಸಿಗಳ ಸಮ್ಮುಖಕ್ಕೆ ಬರುವ ಮುನ್ನ ಅದರ ಶಾಸನಬದ್ಧ ಹಾಗೂ ಕಾನೂನಾತ್ಮಕ ಸ್ಥಿತಿಗತಿ (Legal & Regulatory Status), ಹಣಕಾಸಿನ ಮೂಲ ಮತ್ತು ಹೊಣೆಗಾರಿಕೆಗಳು ಸ್ಪಷ್ಟವಾಗಿರಬೇಕು ಎಂದು ಒತ್ತಾಯಿಸಿರುವ ಖರ್ಗೆ, ವಸತಿ ಪ್ರದೇಶಗಳು ರಾಜಕೀಯ ಅಥವಾ ಸೈದ್ಧಾಂತಿಕ ಪ್ರಚಾರದ ಕೇಂದ್ರಗಳಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.
ಅಪಾರ್ಟ್‌ಮೆಂಟ್‌ನಲ್ಲಿ ಆರ್‌ಎಸ್‌ಎಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮವೇನು?
ಬೆಂಗಳೂರಿನ ಫೀನಿಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ (Phoenix OBW & Kessaku) ಆರ್‌ಎಸ್‌ಎಸ್ ವತಿಯಿಂದ ಸೆಪ್ಟೆಂಬರ್ 26 ರ ಸಂಜೆ ‘ಇಂಟ್ರೊಡಕ್ಷನ್ ಟು ಆರ್ಸ್ಎಸ್’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆರ್‌ಎಸ್‌ಎಸ್‌ನ ಗುರಿಗಳು, ಚಟುವಟಿಕೆಗಳು ಹಾಗೂ ಕಾರ್ಯನಿರ್ವಹಣೆ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ‘ಬಲವಾದ, ಒಗ್ಗಟ್ಟಿನ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಆರ್‌ಎಸ್‌ಎಸ್ ನೀಡುತ್ತಿರುವ ಕೊಡುಗೆ ಹಾಗೂ ಅದರ ದೂರದೃಷ್ಟಿಯನ್ನು ತಿಳಿದುಕೊಳ್ಳಿ’ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಆಹ್ವಾನ ನೀಡಲಾಗಿತ್ತು.. ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಸಹ ಸಂಪರ್ಕ ಪ್ರಮುಖ್ (ಸಾರ್ವಜನಿಕ ಸಂಪರ್ಕ ವಿಭಾಗ) ಹಾಗೂ ರಾಷ್ಟ್ರೋತ್ಥಾನ ಆಸ್ಪತ್ರೆಯ ಧರ್ಮದರ್ಶಿ ಹರೀಶ್ ರಾವ್ ಉಪನ್ಯಾಸ ನೀಡಿದ್ದರು.
ಆರ್‌ಎಸ್‌ಎಸ್ ಉಪನ್ಯಾಸ ಕಾರ್ಯಕ್ರಮಕ್ಕೆ ಪ್ರಿಯಾಂಕ್ ಖರ್ಗೆ ಆಕ್ಷೇಪವೇನು?
ಖಾಸಗಿ ವಸತಿ ಪ್ರದೇಶಗಳು ಪ್ರಮುಖವಾಗಿ ಎಳೆಯ ಮನಸ್ಸುಗಳನ್ನು (ಮಕ್ಕಳು ಹಾಗೂ ಯುವಕರನ್ನು) ಗುರಿಯಾಗಿಸಿಕೊಂಡು ಸೈದ್ಧಾಂತಿಕ ಬೋಧನೆ ನಡೆಸಲು ವೇದಿಕೆಯಾಗುತ್ತಿರುವುದು ಕಳವಳಕಾರಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆರ್‌ಎಸ್‌ಎಸ್ ಸಂಸ್ಥೆಯ ಶಾಸನಬದ್ಧ ಹಾಗೂ ಕಾನೂನಾತ್ಮಕ ಸ್ಥಿತಿಗತಿಯೇ ಇಂದಿಗೂ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಂತಹ ಸಂಸ್ಥೆಗಳಿಗೆ ಅಪಾರ್ಟ್‌ಮೆಂಟ್ ಬಾಗಿಲು ತೆರೆಯುತ್ತಿರುವುದು ಆಶ್ಚರ್ಯಕರ ಸಂಗತಿ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಎಕ್ಸ್ ಸಂದೇಶ
Interesting to see apartment communities opening their doors to organisations whose legal and regulatory status itself raises questions, especially when the outreach is aimed at influencing young minds.
The advertised session is:
“Introduction to RSS” Goals • Activities •… pic.twitter.com/3z5BPmwaNt
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 27, 2026
ವಸತಿ ಸಮುಚ್ಚಯಗಳು ಎನ್ನುವುದು ಪ್ರಜೆಗಳ ನೆಮ್ಮದಿಯ ವಾಸಕ್ಕಾಗಿಯೋ ಅಥವಾ ನಿರ್ದಿಷ್ಟ ರಾಜಕೀಯ-ಸಾಮಾಜಿಕ ಸಿದ್ಧಾಂತಗಳನ್ನು ತುರುಕುವ ಕೇಂದ್ರಗಳಾಗಬೇಕೇ ಎಂದು ಅಪಾರ್ಟ್‌ಮೆಂಟ್ ಸಂಘಗಳನ್ನು ಪ್ರಿಯಾಂಕ್ ಖರ್ಗೆ ನೇರವಾಗಿ ಪ್ರಶ್ನಿಸಿದ್ದಾರೆ. ಯಾವುದೇ ಸಂಘಟನೆಯು ನಾಗರಿಕರನ್ನು ಅಥವಾ ಅವರ ಮಕ್ಕಳನ್ನು ತಲುಪುವ ಮುನ್ನ ಆ ಸಂಸ್ಥೆಯ ಹಣಕಾಸಿನ ಸ್ವರೂಪ, ಒಟ್ಟು ರಚನೆ ಹಾಗೂ ಜವಾಬ್ದಾರಿಯ ಬಗ್ಗೆ ಕನಿಷ್ಠ ಪಾರದರ್ಶಕತೆ ಇರಲೇಬೇಕು ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




