ಬೆಂಗಳೂರಿನಲ್ಲಿ ಹರ್ಷಗೆ ಶ್ರದ್ಧಾಂಜಲಿ, ಮೊಬೈಲ್ ಟಾರ್ಚ್, ಪಂಜಿನದೀಪ ಹಿಡಿದು ನಮನ
ಪೀಪಲ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು 2015ರಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ಆಗಲೇ ಇವರನ್ನು ಮಟ್ಟ ಹಾಕಿದ್ದರೆ ಇಂದು ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ನಾಯಕರು ಹೇಳಿದರು.
ಬೆಂಗಳೂರು: ಶಿವಮೊಗ್ಗದಲ್ಲಿ ಈಚೆಗೆ ಕೊಲೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ಅವರಿಗೆ ಮೌನಾಚರಣೆ ಮೂಲಕ ವಿವಿಧ ಸಂಘಟನೆಗಳ ಕಾರ್ಯಕರ್ತರು ಶ್ರದ್ಧಾಂಜಲಿ ಅರ್ಪಿಸಿದರು. ಟೌನ್ಹಾಲ್ ಎದುರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೊಬೈಲ್ ಟಾರ್ಚ್, ಪಂಜಿನ ದೀಪ ಹಿಡಿದು ನಮನ ಸಲ್ಲಿಸಿದರು. ಇದೊಂದು ಭಯೋತ್ಪಾದಕ ಕೃತ್ಯ. ಘಟನೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಮೂಲಕ ಮರು ತನಿಖೆ ನಡೆಸಬೇಕು ಎಂದು ನೆರೆದಿದ್ದವರು ಆಗ್ರಹಿಸಿದರು. ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಘಟಕದ ಕಾರ್ಯದರ್ಶಿ ಉಲ್ಲಾಸ್ ಮಾತನಾಡಿ, ಹರ್ಷನ ಬಲಿದಾನದ ಮೂಲಕ ಈ ಭಯೋತ್ಪಾದನೆಯನ್ನು ಮಟ್ಟ ಹಾಕಲು ಮುಂದಾಗುತ್ತಿದ್ದೇವೆ. ಪೀಪಲ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರು 2015ರಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ಆಗಲೇ ಇವರನ್ನು ಮಟ್ಟ ಹಾಕಿದ್ದರೆ ಇಂದು ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಸಂವಿಧಾನವನ್ನು ಉಳಿಸುವ ಹೆಸರಲ್ಲಿ ಪಿಎಫ್ಐ ಭಯೋತ್ಪಾದನೆ ಮಾಡುತ್ತಿದೆ. 2015ರಲ್ಲಿ ಸಿದ್ದರಾಮಯ್ಯ ಪಿಎಫ್ಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ವಾಪಸ್ ತೆಗೆದುಕೊಂಡರು. ನಂತರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ಆರಂಭವಾದವು. ಹರ್ಷನ ಬಲಿದಾನದ ಮೂಲಕ ಈ ಭಯೋತ್ಪಾದನೆಯನ್ನು ಮಟ್ಟ ಹಾಕಲು ಮುಂದಾಗುತ್ತೇವೆ. ಈ ಹತ್ಯೆಯ ಹಿಂದೆ ಭಯೋತ್ಪಾದನೆಯ ಉದ್ದೇಶ ಅಡಗಿದೆ. ಮೈಸೂರಿನಲ್ಲಿ ತನ್ವೀರ್ ಸೇಠ್ಗೆ ಚಾಕುವಿನಿಂದ ಇರಿಯಲು ಹೋಗಿದ್ದವರು ಯಾರು ಎಂದು ಪರೋಕ್ಷವಾಗಿ ಪಿಎಫ್ಐ ಮೇಲೆ ಹರಿಹಾಯ್ದರು.
ವಿಶ್ವ ಹಿಂದೂ ಪರಿಷತ್ (VHP) ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಹಿಜಾಬ್ ಅಲ್ಲ ಮುಂದೊಂದು ದಿನ ಕೇಸರಿ ಹಾಕಿಸುತ್ತೇವೆ. ಹರ್ಷನ ಕೊಲೆ ಹಿಂದೆ ಕೇರಳ ಸಂಘಟನೆಯ ಕೈವಾಡವಿದೆ. ಯಾರೇ ತಪ್ಪು ಮಾಡಿದ್ದರೂ ಕಠಿಣ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಭಾಗವಹಿಸಿದ್ದರು. ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೈಕ್, ಟಿಟಿ, ಮಿನಿ ಬಸ್ನಲ್ಲಿ ಕಾರ್ಯಕರ್ತರು ಆಗಮಿಸಿದರು. ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೂಡಲೇ ಪಿಎಫ್ಐ ಮತ್ತು ಎಸ್ಡಿಪಿಐ ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಐನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು. ಟೌನ್ಹಾಲ್ ಬಳಿ ವಾಹನ ದಟ್ಟಣೆ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ 25ಕ್ಕೂ ಹೆಚ್ಚು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಟ್ರಾಫಿಕ್ ಉಂಟಾಗದಂತೆ ಕಂಟ್ರೋಲ್ ಮಾಡಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಹಿಂದೂ ಜಾಗರಣ ವೇದಿಕೆಯ ರಾಜ್ಯ ಕಾರ್ಯದರ್ಶಿ ಉಲ್ಲಾಸ್, ವಿಶ್ವ ಹಿಂದೂ ಪರಿಷತ್ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್, ಆರ್ಎಸ್ಎಸ್ ಬೆಂಗಳೂರು ನಗರ ಕಾರ್ಯದರ್ಶಿ ಕರುಣಾಕರ ರೈ, ಆರ್ಎಸ್ಎಸ್ ಸಹ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಭಾಗವಹಿಸಿದ್ದರು.
ಇದನ್ನೂ ಓದಿ: ಶಿವಮೊಗ್ಗ ಪ್ರಕರಣ: ಮೃತ ಹರ್ಷನ ಮೊಬೈಲ್ ಪತ್ತೆ, ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಇದನ್ನೂ ಓದಿ: ಹರ್ಷ ಕೊಲೆ ನಡೆಯುವ ಕೆಲ ಗಂಟೆ ಮೊದಲು ಹತ್ಯೆಗೆ ಸ್ಕೆಚ್; ಮಹತ್ವದ ವಿಚಾರಗಳು ಬಹಿರಂಗ