Narendra Modi: ಬೆಂಗಳೂರಿಗೆ ಮೋದಿ ಭೇಟಿ ಬೆನ್ನಲ್ಲೆ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ವಿವಿಧ ಸಂಘಟನೆಗಳು ಸರ್ಕಾರದ ವಿರುದ್ಧ ಮತ್ತೆ ಸಮರ ಸಾರಿದ್ದಾವೆ. ಇಂದು ಫ್ರೀಡಂ ಪಾರ್ಕ್ ನಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಇಂದು ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಪ್ರತಿಭಟನೆಗಳ ಕಾವು ಹೆಚ್ಚಾಗಿದೆ. ವಿವಿಧ ಸಂಘಟನೆಗಳು ಸರ್ಕಾರದ ವಿರುದ್ಧ ಮತ್ತೆ ಸಮರ ಸಾರಿದ್ದಾವೆ. ಇಂದು ಫ್ರೀಡಂ ಪಾರ್ಕ್ ನಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.
ಒಂದು ಕಡೆ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ರೆ. ಇನ್ನೊಂದು ಕಡೆ ಬಿಎಂಎಸ್ ಬೆಂಗಳೂರು ಚಲೋಗೆ ಕರೆಕೊಟ್ಟಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಸಾರಿಗೆ ನೌಕರರು ಹಾಗೂ ಆರೋಗ್ಯ ಸಿಬ್ಬಂದಿ ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಮತ್ತೆ ರಸ್ತೆಗಿಳಿಯಲಿದ್ದಾರೆ. ಸಾರಿಗೆ ಇಲಾಖೆಯ 4 ನಿಗಮಗಳ ನೌಕರರಿಂದ ಪ್ರತಿಭಟನೆ ನಡೆಯುತ್ತಿದ್ದು ಫ್ರೀಡಂ ಪಾರ್ಕ್ ನಲ್ಲಿ ಕುಟುಂಬ ಸಮೇತ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ನೌಕರರು ಭಾಗಿಯಾಗುವ ಸಾಧ್ಯತೆ ಇದೆ. ಬಸ್ ಸಂಚಾರದಲ್ಲಿ ಯಾವುದೇ ಅಡೆತಡೆ ಇಲ್ಲದಂತೆ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಸಾರಿಗೆ ನೌಕರರ ಬೇಡಿಕೆಗಳೇನು?
- 2020ರ ಜ.1 ರಿಂದ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಬಾಕಿ ಇದ್ದು, ಕೂಡಲೇ ವೇತನ ಹೆಚ್ಚಳ ಮಾಡುವುದು
- ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ನಾಲ್ಕು ನಿಗಮಗಳ ನೌಕರರನ್ನು ಯಾವುದೇ ಷರತ್ತುಗಳಿಲ್ಲದೆ ಮರುನೇಮಕಾತಿ ಮಾಡಿಕೊಳ್ಳುವುದು
- ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬಸ್ಥರ ಮೇಲೆ ದಾಖಲಾಗಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು
- ಸಾರಿಗೆ ಸಂಸ್ಥೆಯಲ್ಲಿ ನಿವೃತ್ತಿಗೊಂಡಿರುವ ನೌಕರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ನೀಡುವುದು, ಅವರಿಗೆ ಸರಿಯಾದ ರೀತಿ ಪಿಂಚಣೆ ಸೌಲಭ್ಯವನ್ನು ಒದಗಿಸುವುದು
- ಸಾರಿಗೆ ಸಂಸ್ಥೆಯ ನೌಕರರಿಗೆ ನಗದುರಹಿತ ಉತ್ತಮವಾದ ಆರೋಗ್ಯ ಯೋಜನೆಗಳನ್ನು ಒದಗಿಸುವುದು.
ಇನ್ನೊಂದು ಕಡೆ ಬಿಎಂಎಸ್ ಸಂಘ ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ. ಸರ್ಕಾರದ ವಿರುದ್ಧ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸಲು ಮುಂದಾಗಿದೆ. ರಾಜ್ಯದ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಇಂದು ಬೆಂಗಳೂರು ಚಲೋ ಕೈಗೊಂಡಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗಿಯಾಗಲಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂದಿಗಳ ಬೇಡಿಕೆಗಳೇನು?
- ರಾಜ್ಯದ ಆರೋಗ್ಯ ಇಲಾಖೆ ಗುತ್ತಿಗೆ ಹೊರಗುತ್ತಿಗೆ ನೌಕರರ ಸಂಬಂಧಿಸಿದ ಶ್ರೀನಿವಾಸಚಾರ್ಯ ವರದಿ ಜಾರಿಗೆ ಆಗ್ರಹ
- ರಾಜ್ಯದ ಆರೋಗ್ಯ ಇಲಾಖೆ ಒಳ, ಹೊರಗುತ್ತಿಗೆ ನೌಕರರ ಸೇವೆ ಆಧಾರದ ಮೇಲೆ ಖಾಯಂ ಮಾಡಬೇಕು
- ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿ, ಸಮಾನವೇತನ ಜಾರಿ ಮಾಡಬೇಕು
- ಸರ್ಕಾರದ ಎಲ್ಲಾ ಇಲಾಖೆಗಳ ಗುತ್ತಿಗೆ ಹೊರಗುತ್ತಿಗೆ ಕಾರ್ಮಿಕ ಪದ್ದತಿ ಕೈ ಬಿಡಬೇಕು
- ಹಾಲಿ ಇರುವ ಗುತ್ತಿಗೆ ಕಾರ್ಮಿಕರನ್ನ ಖಾಯಂಗೊಳಿಸಬೇಕು
- ಕಟ್ಟಡ ಕಾರ್ಮಿಕ ಮಂಡಳಿಯಲ್ಲಿನ ಭ್ರಷಚಾರ ನಿಲ್ಲಿಸಿ ತನಿಖೆ ಮಾಡಿಸಬೇಕು
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ