PSI Recruitment Scam: ನೀವೇನು ಕತ್ತೆ ಕಾಯ್ತಿದ್ದೀರಾ, ಕಡ್ಲೆಪುರಿ ತಿಂತಿದ್ದೀರಾ; ಗೃಹ ಸಚಿವರ ವಿರುದ್ಧ ಪ್ರಿಯಾಂಕ್ ಖರ್ಗೆ ಗರಂ

PSI Recruitment Scam: ನೀವೇನು ಕತ್ತೆ ಕಾಯ್ತಿದ್ದೀರಾ, ಕಡ್ಲೆಪುರಿ ತಿಂತಿದ್ದೀರಾ; ಗೃಹ ಸಚಿವರ ವಿರುದ್ಧ ಪ್ರಿಯಾಂಕ್ ಖರ್ಗೆ ಗರಂ
ಪ್ರಿಯಾಂಕ್ ಖರ್ಗೆ ಮತ್ತು ಆರಗ ಜ್ಞಾನೇಂದ್ರ

ನನಗೆ ನೊಟೀಸ್ ಕೊಟ್ಟಿರುವುದನ್ನು ನೋಡಿದರೆ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ. ನಾನು ವಿಶೇಷವಾದ ಮಾಹಿತಿ ಕೊಡುತ್ತೆನೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 25, 2022 | 2:13 PM


ಬೆಂಗಳೂರು: ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸೋಮವಾರ ಸಿಐಡಿ ವಿಚಾರಣೆಗೆ ಹಾಜರಾಗಲಿಲ್ಲ. ನಾನು‌ ಕಳೆದ ಎರಡು ಮೂರು ವಾರಗಳಿಂದ ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದೆ. ಇದನ್ನು ನೋಡಿ ನಿನ್ನೆ ಸಿಐಡಿ ನನಗೆ ನೋಟೀಸ್ ಕೊಟ್ಟಿದೆ. ಇದನ್ನು ನೋಡಿದರೆ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ. ನಾನು ವಿಶೇಷವಾದ ಮಾಹಿತಿ ಕೊಡುತ್ತೆನೆ ಎಂದು ಎಲ್ಲಿಯೂ ಹೇಳಿಲ್ಲ. ಪಿಎಸ್​ಐ ಬರೆದ ಅಭ್ಯರ್ಥಿಗಳು ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ. ಅದರ ಬಗ್ಗೆ ಟ್ವಿಟ್ ಕೂಡ ಮಾಡಿದ್ದಾರೆ. ಈ ಎಲ್ಲಾ ಮಾಹಿತಿ ಸರ್ಕಾರದ ಬಳಿ ಇಲ್ವಾ. ಹಗರಣದ ಬಗ್ಗೆ ಸಚಿವ ಪ್ರಭು ಚೌಹಣ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ನಾನು ಯಾವುದೇ ಹೊಸ ದಾಖಲೆ ಬಿಡುಗಡೆ ಮಾಡಿಲ್ಲ. ತನಿಖಾ ಪತ್ರಿಕೋದ್ಯಮ ಮಾಡುತ್ತೇನೆ ಎಂದು ಹೇಳಿರಲಿಲ್ಲ. ಎಲ್ಲ ದಾಖಲೆಗಳು ಸರ್ಕಾರದ ಬಳಿಯೇ ಇವೆ ಎಂದು ತಾವು ಸಂಗ್ರಹಿಸಿರುವ, ಸರ್ಕಾರದಿಂದ ಸ್ವೀಕೃತವಾಗಿರುವ ಉತ್ತರಗಳ ಪಟ್ಟಿಯನ್ನು ವಿವರಿಸಿದರು. ಈಗಾಗಲೇ ಸರ್ಕಾರದ ಬಳಿ ಏನೆಲ್ಲಾ ಮಾಹಿತಿ ಇದೆ ಎಂಬ ಬಗ್ಗೆ ಅಧಿಕಾರಿಗಳಿಂದ ಗೃಹ ಸಚಿವರು ಮಾಹಿತಿ ಪಡೆದುಕೊಳ್ಳಬೇಕು. ವಿಧಾನಸಭೆ ಮತ್ತು ವಿಧಾನ ಪರಿಷತ್​ಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಗೃಹ ಸಚಿವರು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಅರುಣ್ ಎನ್ನುವ ಎಬಿವಿಪಿ ಕಾರ್ಯಕರ್ತನೊಬ್ಬ ಆಯ್ಕೆ ಪ್ರಕ್ರಿಯೆ ಮುಗಿಯುವ ಮೊದಲೇ ಪಿಎಸ್​ಐ ಸಮವಸ್ತ್ರ ಹಾಕಿಕೊಂಡು ಓಡಾಡಿದ್ದಾನೆ. ನಾನು ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡುವ ಮೊದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿತ್ತು. ನಾನು ಸುದ್ದಿಗೋಷ್ಠಿ ನಡೆಸುವ ದಿನವೇ ದಿನಪತ್ರಿಕೆಯೊಂದರಲ್ಲಿ ಸುದ್ದಿಯೂ ಪ್ರಕಟವಾಗಿತ್ತು. ಗುಪ್ತಚರ ಇಲಾಖೆಗೆ ಸ್ವಂತ ಬಾತ್ಮಿಮೂಲಗಳೇ ಇಲ್ಲ. ಕೇವಲ ಪತ್ರಿಕೆಗಳನ್ನು ಓದಿ ಮುಖ್ಯಮಂತ್ರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಕಣ್ಮುಂದೆ ಇರುವ ಸಾಕ್ಷಿಗಳನ್ನು ನೋಡಲು ಸರ್ಕಾರ ಗಮನಿಸುತ್ತಿಲ್ಲ. ನೀವೇನು ಕತ್ತೆ ಕಾಯ್ತಿದ್ದೀರಾ, ಕಡ್ಲೆಪುರಿ ತಿಂತಿದ್ದೀರಾ, ಕೋಲಾಟ ಆಡ್ತಿದ್ದೀರಾ? ಆಡಿಯೊ ರಿಲೀಸ್ ಆಗಿ ಮೂರು ದಿನವಾದ್ರೂ ಯಾಕೆ ಎಫ್​ಐಆರ್ ಆಗ್ತಿಲ್ಲ. ಇದರಲ್ಲಿ ಇಲಾಖೆ ಮತ್ತು ಗೃಹ ಸಚಿವರು ಶಾಮೀಲಾಗಿರಬಹುದು ಎಂಬ ಶಂಕೆ ಮೂಡುತ್ತದೆ. ನಾನು ಈ ಪ್ರಕರಣದಲ್ಲಿ ಆರೋಪಿಯೂ ಅಲ್ಲ, ಸಾಕ್ಷಿಯೂ ಅಲ್ಲ. ನನ್ನನ್ನೇಕೆ ವಿಚಾರಣೆಗೆ ಕರೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಇಂದು ಬೆಳಗ್ಗೆ 11.30ಕ್ಕೆ ಹಾಜರಾಗುವಂತೆ ನಿನ್ನೆ ಬೆಂಗಳೂರಿನ ನಿವಾಸದಲ್ಲಿದ್ದಾಗ ನನಗೆ ನೋಟಿಸ್ ನೀಡಿದ್ದಾರೆ. ರಾಜ್ಯಸರ್ಕಾರದ ಕಾರ್ಯವೈಖರಿ ಹೇಗಿದೆ ಎಂಬುದು ಇದರಲ್ಲಿ ಸಾಬೀತಾಗಿದೆ. ನನ್ನ ಬಳಿ ಇರುವ ಮಾಹಿತಿ ಸಿಐಡಿ ಬಳಿ ಇಲ್ಲ ಅಂದಿದ್ದಕ್ಕೆ ಅಚ್ಚರಿಯಾಯಿತು. ನಾನು ನನ್ನ ಸುದ್ದಿಗೋಷ್ಠಿಯಲ್ಲಿ ಯಾವುದೇ ಹೊಸ ಮಾಹಿತಿ ಕೊಟ್ಟಿಲ್ಲ. ವಿಚಾರಣೆಗೆ ಬರುವಂತೆ ನೊಟೀಸ್ ಕೊಡಬೇಕಿದ್ದುದು ನನಗಲ್ಲ. ಹಿಂದಿನ ಮತ್ತು ಈಗಿನ ಗೃಹ ಸಚಿವರು, ಎಡಿಜಿಪಿಗೆ ನೊಟೀಸ್ ಕೊಟ್ಟು ವಿಚಾರಣೆಗೆ ಒಳಪಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಪೊಲೀಸ್ ಸಬ್​ ಇನ್​​ಸ್ಪೆಕ್ಟರ್ ಪರೀಕ್ಷೆಯ ನೇಮಕಾತಿ ವಿಭಾಗದ ಮುಖ್ಯಸ್ಥರಿಗೆ ಏಕೆ ನೊಟೀಸ್ ಜಾರಿ ಮಾಡಿಲ್ಲ? ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನೇ ಈ ಬಗ್ಗೆ ವಿಚಾರಣೆಗೆ ಒಳಪಡಿಸಬೇಕು. ಪರೀಕ್ಷೆ ಅಕ್ರಮದಲ್ಲಿ ನಾನು ಭಾಗಿಯಾಗಿದ್ರೆ ನನ್ನನ್ನೂ ಬಂಧಿಸಲಿ. ಯಾವುದೇ ಪಕ್ಷದವ್ರು ಭಾಗಿಯಾಗಿದ್ದರೂ ಬಂಧಿಸಲಿ. ನಿಮ್ಮದೇ ಸರ್ಕಾರವಿದ್ದರೂ ಏಕೆ ಸೂಕ್ತ ತನಿಖೆ ನಡೆಸುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಗೃಹಸಚಿವ ಆರಗ ಜ್ಞಾನೇಂದ್ರ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದು ನಿಜ. ಈಗ ಇರುವ ಗೃಹ ಸಚಿವರು ಸರಿಯಿಲ್ಲ. ಸಮರ್ಥ ಗೃಹ ಸಚಿವರಿಗಾಗಿ ಜಾಹೀರಾತು ನೀಡಲಿ ಎಂದಿದ್ದರು. ಅದು ಸರಿಯಿದೆ. ಅಂತಾರಾಷ್ಟ್ರೀಯ ಕರೆಗಳ ಮೂಲಕ ನನಗೆ ಬೆದರಿಕೆ ಬಂದಿದೆ. ರಾಜ್ಯ ಸರ್ಕಾರ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಯಾವುದೇ ನೇಮಕಾತಿ ನಡೆದರೂ ಹಣ ಇದ್ದವರು ಮಾತ್ರ ಆಯ್ಕೆಯಾಗುತ್ತಾರೆ. ರಾಜ್ಯ ಸರ್ಕಾರವು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ನೊಟೀಸ್​ಗೆ ಇಂದು ಅಥವಾ ನಾಳೆ ನಾನು ಲಿಖಿತ ಉತ್ತರ ನೀಡುತ್ತೇನೆ ಎಂದು ನುಡಿದರು.

ಪ್ರಿಯಾಂಕ್​ಗೆ ನೊಟೀಸ್: ಸರ್ಕಾರದ ವಿರುದ್ಧ ಡಿಕೆಶಿ ಗರಂ

ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ನೀಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಮಾಹಿತಿ ನೀಡಿದವರಿಗೇ ನೋಟಿಸ್ ನೀಡುತ್ತೀರಾ? ದಾಖಲೆ ಬಹಿರಂಗಪಡಿಸಿದವರನ್ನು ಹೆದರಿಸುತ್ತೀರಾ ಎಂದು ಪ್ರಶ್ನಿಸಿದರು. ವಿಚಾರಣೆಗೆ ಹಾಜರಾಗದಂತೆ ಪ್ರಿಯಾಂಕ್ ಅವರಿಗೆ ಪಕ್ಷದಿಂದ ಸೂಚನೆ ನೀಡಿದ್ದೇವೆ. ಆರೋಪಿಗಳು ಗೃಹ ಸಚಿವರ ಜೊತೆ ಫೋಟೋ ತೆಗೆಸಿಕೊಳ್ತ್ತಾರೆ. ಆರೋಪಿ ಭ್ರಷ್ಟಾಚಾರದ ಅಂಗಡಿ ಓಪನ್ ಮಾಡಿದ್ದವರು ಎಂದು ದೂರಿದರು.

ಪ್ರಿಯಾಂಕ್‌ ಖರ್ಗೆಗೆ ನೋಟಿಸ್ ನೀಡಿದ್ದಕ್ಕೆ ದಲಿತ ಮುಖಂಡರು ಹೋರಾಟಕ್ಕೆ ಮುಂದಾಗಿದ್ದರು. ನಾನೇ ಸದ್ಯ ಹೋರಾಟ ಬೇಡ ಅಂದಿದ್ದೇನೆ. ನಮ್ಮನ್ನು ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ. ಖರ್ಗೆ 3 ತಿಂಗಳ ಹಿಂದೆ ಟ್ರಸ್ಟ್ ಒಂದರ ಅಧ್ಯಕ್ಷರಾಗಿದ್ದಾರೆ. ಆಸ್ಕರ್ ನಿಧನದ ನಂತರ ತೆರವಾದ ಸ್ಥಾನಕ್ಕೆ ಟ್ರಸ್ಟಿಯಾದರು ಎಂದು ವಿವರಿಸಿದರು.

ನಿಮ್ಮ ವಿರುದ್ಧ ಮಾತನಾಡಬಾರದಾ? ನಮ್ಮ ಪ್ರಾಣ ಹೋದರೂ ನಾವು ಹೆದರಲ್ಲ. ನಿಮ್ಮ ಮೂಗಿನ ನೇರಕ್ಕೆ ನಡೆದ ಬೆಳವಣಿಗೆ ಗೊತ್ತಿಲ್ವಾ? ಮೊದಲು ವಿಚಾರಣೆ ನಡೆಯಲಿ, ನಂತರ ತಕ್ಕ ಉತ್ತರ ಕೊಡುತ್ತೇವೆ? ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಬಗ್ಗೆ ನಮ್ಮ ಬಳಿ ಇನ್ನಷ್ಟು ದಾಖಲೆ ಇದೆ. ಮುಂದಿನ ದಿನಗಳಲ್ಲಿ ಅದನ್ನೂ ಬಹಿರಂಗಪಡಿಸುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಸುಳ್ಳನ್ನು ಮಸಿಯಿಂದ ಅಳಿಸಲಾಗದು: ಸಿದ್ದರಾಮಯ್ಯ

ಮಾಜಿ ಸಚಿವ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ನೀಡಿರುವ ವಿಚಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದರು. ಪ್ರಿಯಾಂಕ್ ಖರ್ಗೆಯನ್ನ ವಿಚಾರಣೆ ನಡೆಸಿ ಎಂದು ಹೇಳಿದ ಸಚಿವ ವಿ.ಸುನಿಲ್ ಕುಮಾರ್ ಅವರ ಕುರಿತು, ‘ತಾ ಕಳ್ಳ, ಪರರ ನಂಬ’ ಎಂಬಂತಾಗಿದೆ. ಸರ್ಕಾರದ ಬೆದರಿಕೆಗೆ ನಾವು ಜಗ್ಗುವುದಿಲ್ಲ. ಶಾಸಕ ಪ್ರಿಯಾಂಕ್ ಖರ್ಗೆ ಹಿಂದೆ ಕಾಂಗ್ರೆಸ್ ಪಕ್ಷ ಇದೆ. ಸಚಿವರ ಹೇಳಿಕೆ ಬೆನ್ನಲ್ಲೇ ನೋಟಿಸ್ ನೀಡಿದ್ದನ್ನು ಗಮನಿಸಿದೆ. ಹಗರಣದ ಬಗ್ಗೆ ಮಾತಾಡಿದವರ ಬಾಯಿ ಮುಚ್ಚಿಸುವ ಹುನ್ನಾರ ಇದು ಎಂದರು.

‘ಸರ್ಕಾರ ಅಡಿಯಿಂದ ಮುಡಿವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಜೆಪಿಯ ಸುಳ್ಳುಗಳ ಬಣ್ಣದಿಂದ ಮಸಿಯನ್ನು ಅಳಿಸಲು ಆಗುವುದಿಲ್ಲ. ಸರ್ಕಾರ, ತನಿಖಾ ಸಂಸ್ಥೆಗಳು ನಿಮ್ಮ ನಿಯಂತ್ರಣದಲ್ಲಿರಬಹುದು. ಆದರೆ ರಾಜ್ಯದ ಜನತೆ ನಮ್ಮ ಜೊತೆ ಇದ್ದಾರೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada