ರಾಮನಗರ: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಪಿಎಸ್ಐ ಪರೀಕ್ಷಾ ಅಕ್ರಮವನ್ನು ಪೊಲೀಸರೇ ಹೊರತಂದಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ವಿರುದ್ಧ ಬಿಜೆಪಿ ನಾಯಕರು ಮಾತನಾಡಿದ್ದರಿಂದ ಈ ಹಗರಣ ಹೊರಗೆ ಬಂದಿದೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಬಿಜೆಪಿ ನಾಯಕರು ಬೆಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ಮಾತನಾಡಿದ್ದರಿಂದ ಪೊಲೀಸರೇ ಈ ಹಗರಣ ಹೊರಗೆ ತಂದಿದ್ದಾರೆ. ನಿಷ್ಠಾವಂತ ಅಧಿಕಾರಿ ವಿರುದ್ಧ ಮಾತನಾಡಿದ್ದರಿಂದ ಹೊರತಂದಿದ್ದಾರೆ. ಇಲ್ಲದಿದ್ದರೇ PSI ಪರೀಕ್ಷಾ ಅಕ್ರಮವನ್ನ ಸರ್ಕಾರ ಮುಚ್ಚಿ ಹಾಕುತ್ತಿತ್ತು. ಸಚಿವ ಅಶ್ವತ್ಥ್ ನಾರಾಯಣ ಬಗ್ಗೆ ಬಿಜೆಪಿಯವರೇ ಮಾಹಿತಿ ನೀಡಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಚಂದ್ರು ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರು ಕಮಿಷನರ್ ಕಮಲ್ ಪಂತ್ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದರು. ನಿಷ್ಠಾವಂತ ಅಧಿಕಾರಿ ಕಮಲ್ ಪಂತ್ ವಿರುದ್ಧವೇ ಆರೋಪ ಮಾಡಿದ್ದರು. ಕಮಲ್ ಪಂತ್ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ. ಪಂತ್ ವಿರುದ್ಧ ಆರೋಪ ಮಾಡಿದ್ದರಿಂದ ಹಗರಣ ಹೊರಬಂದಿದೆ. ಕಮಲ್ ಪಂತ್ ಬೆಂಬಲಿತ ಅಧಿಕಾರಿಗಳು ಹಗರಣ ಹೊರತಂದ್ರು. ಈ ಹಿಂದೆ ಪೊಲೀಸ್ ಆಯುಕ್ತರಾಗಿದ್ದವರೂ PSI ನೇಮಕಾತಿ ಹಗರಣದ ಬಗ್ಗೆ ಅಧಿಕಾರಿಗಳಿಗೆ ಲಿಂಕ್ ಕೊಟ್ಟಿದ್ದಾರೆ. ಒಂದು ಪಕ್ಷಕ್ಕೆ ನಿಷ್ಠರಾಗಿರುವವರನ್ನು ಆಯ್ಕೆ ಮಾಡುವ ಪ್ರಯತ್ನ ನಡೆದಿದೆ. ಬಾಯಿಬಿಟ್ಟರೆ ಹಿಂದೂ ಹಿಂದೂ ಅನ್ನುವರಿಂದ ಅಕ್ರಮಕ್ಕೆ ಪ್ರಯತ್ನ ನಡೆದಿದೆ.
545 PSI ಹುದ್ದೆಗಳ ನೇಮಕಾತಿಯಲ್ಲಿ ಶೇ.80ರಷ್ಟು ಅಕ್ರಮ ನಡೆದಿದೆ. ರಾಜ್ಯ ಸರ್ಕಾರಕ್ಕೆ 200 ಪರ್ಸೆಂಟ್ ಮುಖಭಂಗವಾಗಿರುವುದು ಸತ್ಯ. ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ಕಾಂಗ್ರೆಸ್ನವರು ಆರೋಪಿಸಿದ್ದಾರೆ. ಡಾ.ಅಶ್ವತ್ಥ್ ನಾರಾಯಣ ಸಹೋದರನ ವಿರುದ್ಧ ಹಣ ಪಡೆದ ಆರೋಪ ಕೇಳಿ ಬಂದಿದೆ. ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದ ದರ್ಶನ್ಗೌಡ ನಾಪತ್ತೆಯಾಗಿದ್ದಾನೆ. ವಿಚಾರಣೆಗೆ ಕರೆದು ದೂರವಾಣಿ ಕರೆ ಬಂದ ಬಳಿಕ ಬಿಟ್ಟು ಕಳುಹಿಸಿದ್ದಾರೆ. ತನಿಖಾಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸುಂತೆ ನಡೆದುಕೊಳ್ಳುವುದು ತಪ್ಪು. ತನಿಖಾಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ವ್ಯವಸ್ಥೆ ಬದಲಿಸಲಿ. ಭ್ರಷ್ಟ ವ್ಯವಸ್ಥೆ ಸರಿಪಡಿಸಲು, ಭವಿಷ್ಯದ ದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಇನ್ನಷ್ಟು ಪಿಎಸ್ಐ ಅಕ್ರಮದ ಬಗೆಗಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಲಬುರಗಿಯಲ್ಲಿ ಅರೆಸ್ಟ್ ಆಗಿರುವವರು ಕಾಂಗ್ರೆಸ್ ಪಕ್ಷದವರು
ಇನ್ನು ಮತ್ತೊಂದು ಕಡೆ PSI ಪರೀಕ್ಷೆ ಅಕ್ರಮದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ತನಿಖೆ ಶುರು ಮಾಡುವುದಾಗಿ ಬೆಂಗಳೂರಿನಲ್ಲಿ ಟಿವಿ9ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಕಲಬುರಗಿಯಲ್ಲಿ ಅರೆಸ್ಟ್ ಆಗಿರುವವರು ಕಾಂಗ್ರೆಸ್ ಪಕ್ಷದವರು. ಅವರನ್ನು ಬಚಾವ್ ಮಾಡಲು ಕಾಂಗ್ರೆಸ್ನವರು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನೇನಾಗಿದೆ ಅನ್ನೋದು ಗೊತ್ತಿದೆ. ಇಂತಹ ಹೇಳಿಕೆ ನೀಡಿ ದಿಕ್ಕು ತಪ್ಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. PSI ನೇಮಕಾತಿ ಹಗರಣದಲ್ಲಿ ಸಚಿವರ ಸೋದರ ಇದ್ದಾನೆ ಅಂತಾರೆ. ಸುಮ್ಮನೆ ಆರೋಪ ಮಾಡುವುದು ಬೇಡ, ದಾಖಲೆಯಿದ್ದರೆ ನೀಡಿ. ದಾಖಲೆ ನೀಡುವ ಬದಲು ಆರೋಪಮಾಡಿ ರಾಜಕಾರಣ ಮಾಡ್ತಿದ್ದಾರೆ. ತೇಜೋವಧೆ ಮಾಡುವ ರಾಜಕಾರಣ ಬಿಡಬೇಕು. PSI ಪರೀಕ್ಷೆಯಲ್ಲಿ ಅಕ್ರಮದ ಬಗ್ಗೆ ಪ್ರಾಮಾಣಿಕ ತನಿಖೆ ನಡೆಯುತ್ತಿದೆ. ಸಾಕ್ಷ್ಯಾಧಾರ ನೀಡಿ ಕ್ರಮಕೈಗೊಳ್ಳದಿದ್ದರೆ ಪ್ರತಿಪಕ್ಷಗಳು ಮಾತನಾಡಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
Published On - 10:01 am, Wed, 4 May 22