ಟನಲ್​ ರಸ್ತೆ ವಿವಾದ: ಲಾಲ್​ಬಾಗ್​ನಲ್ಲಿರುವ ಬಂಡೆ ಕೊರೆಯುವ ನಿರ್ಧಾರದ ಬಗ್ಗೆ ಜನ ಏನಂತಾರೆ?

ಬೆಂಗಳೂರಲ್ಲಿ ಸಂಚಾರದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟನಲ್​ ರಸ್ತೆ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಲಾಲ್​ಬಾಗ್​ನಲ್ಲಿರುವ ಬಂಡೆ ಕೊರೆದು ಸುರಂಗ ನಿರ್ಮಿಸುವ ನಿರ್ಧಾರವನ್ನು ವಿಪಕ್ಷಗಳು ಮತ್ತು ಪರಿಸರ ಪ್ರೇಮಿಗಳ ಬಳಿಕ ಸಾರ್ವಜನಿಕರೂ ವಿರೋಧಿಸಿದ್ದಾರೆ. ಈ ಬಗ್ಗೆ Tv9 ಡಿಜಿಟಲ್​ ನಡೆಸಿದ್ದ ಪೋಲ್​ನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಟನಲ್​ ರಸ್ತೆ ವಿವಾದ: ಲಾಲ್​ಬಾಗ್​ನಲ್ಲಿರುವ ಬಂಡೆ ಕೊರೆಯುವ ನಿರ್ಧಾರದ ಬಗ್ಗೆ ಜನ ಏನಂತಾರೆ?
ಲಾಲ್​ಬಾಗ್​ನಲ್ಲಿರುವ ಬೃಹತ್​ ಬಂಡೆ.

Updated on: Nov 04, 2025 | 5:02 PM

ಬೆಂಗಳೂರು, ನವೆಂಬರ್​ 04: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ವರೆಗೆ ಸುರಂಗ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. 17,780 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಉದ್ದೇಶಿತ ಯೋಜನೆಯ ಪ್ರಕಾರ ಟನಲ್​ ರೋಡ್​ ಲಾಲ್​ಬಾಗ್​ ಮೂಲಕವೂ ಹಾದು ಹೋಗಲಿದೆ. ಲಾಲ್​ಬಾಗ್​ನಲ್ಲಿರುವ ಬಂಡೆ ಕೊರೆದು ಸುರಂಗ ನಿರ್ಮಿಸಲು ನಿರ್ಧರಿಸುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು ವಿಪಕ್ಷಗಳು ಮತ್ತು ಪರಿಸರಪ್ರಿಯರ  ಬಳಿಕ ಸಾರ್ವಜನಿಕ ವಲಯದಿಂದಲೂ ತೀವ್ರ ಆಕ್ಷೇಪ ಕೇಳಿಬಂದಿದೆ.

ಟನಲ್​ ರೋಡ್​ಗಾಗಿ ಬೆಂಗಳೂರಿನ ಲಾಲ್​ಬಾಗ್​ನಲ್ಲಿರುವ ಬಂಡೆ ಕೊರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಎಂಬ ವಿಷಯದ ಬಗ್ಗೆ Tv9 ಡಿಜಿಟಲ್​ ಪೋಲ್​ ಮಾಡಿತ್ತು. ಸಾವಿರಕ್ಕೂ ಹೆಚ್ಚು ಮಂದಿ ಈ ಪೋಲ್​ನಲ್ಲಿ ಭಾಗಿಯಾಗಿದ್ದು, ಆ ಪೈಕಿ ಬಹುತೇಕರು ಬಂಡೆ ಕೊರೆಯುವ ನಿರ್ಧಾರವನ್ನ ಖಂಡಿಸಿದ್ದಾರೆ. ಈ ಯೋಜನೆಯಿಂದ ಏನೇ ಅನುಕೂಲಗಳು ಇದ್ದರೂ ಇದನ್ನು ದಯವಿಟ್ಟು ಮುಂದುವರಿಸಬಾರದು. ಲಾಲ್​ಬಾಗ್​ನಲ್ಲಿರುವ ಬಂಡೆ ಪ್ರಕೃತಿದತ್ತವಾದದ್ದು. ಇದಕ್ಕೆ ಕೈಹಾಕೋದು ನೈಸರ್ಗಿಕ ವಿಕೋಪಕ್ಕೆ ಕಾರಣವಾಗಬಹುದು. ಇದ್ದ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಕಾಂಕ್ರೀಟ್ ಕಾಡುಗಳನ್ನು ಆ ಜಾಗದಲ್ಲಿ ಸೃಷ್ಟಿಸಿ ಆಗಿದೆ. ಇದರ ಪರಿಣಾಮವಾಗಿ ಮಳೆ ಬಂದಾಗ ಬೆಂಗಳೂರಿಗರು ಅನುಭವಿಸುತ್ತಿರುವ ಸಮಸ್ಯೆಗಳೇ ಸಾಕು ಎಂದು ಶೈಲಜಾ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಲಾಲ್ ಬಾಗ್ ಮಾತ್ರವಲ್ಲ, ಸ್ಯಾಂಕಿ ಟ್ಯಾಂಕ್ ಕೆರೆಗೂ ಸುರಂಗ ರಸ್ತೆಯಿಂದ ಹಾನಿ ಎಂದ ತಜ್ಞರು

‘ಬಂಡೆ ಕೊರೆಯದೇ ಸುರಂಗ ರಸ್ತೆ ಮಾಡಿ’

ಈ ಯೋಜನೆಯ ಉದ್ದೇಶ ಕೇವಲ ಹಣ ಮಾಡೋದು. ಇದರ ಬದಲು ಮೆಟ್ರೋ ರೈಲುಗಳ ಸಂಖ್ಯೆ ಹೆಚ್ಚು ಮಾಡಿ. ಇರುವ ರಸ್ತೆಗುಂಡಿಗಳನ್ನ ಮುಚ್ಚಿ ಎಂದು ಸುಮನ್​ ಎಂಬವರು ಹೇಳಿದ್ದರೆ, ಈ ರೀತಿಯ ಅಪರೂಪದ ಪ್ರಕೃತಿ ನಮ್ಮಲ್ಲಿ ಉಳಿದಿರುವುದುಕ್ಕೆ ನಾವು ಹೆಮ್ಮೆಪಡಬೇಕು. ಅದು ಬಿಟ್ಟು ಈ ರೀತಿಯ ಮಾನವ ಸ್ವಾರ್ಥಕ್ಕೆ ಅವನ್ನು ನಾಶಮಾಡಬಾರದು. ಈ ನಿರ್ಧಾರಕ್ಕೆ ನನ್ನ ಧಿಕ್ಕಾರ ಎಂದು ಮಾರುತೇಶ್​ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹು ಕೋಟಿ ವೆಚ್ಚದ ಇಂತಹ ಯೋಜನೆಗಳನ್ನು ಎಲ್ಲಾ ಪಕ್ಷಗಳ ಜನ ಪ್ರತಿನಿಧಿಗಳ, ಬೆಂಗಳೂರಿನ ಹಿತೈಷಿಗಳ ಅಭಿಪ್ರಾಯ ಪಡೆದು ರೂಪಿಸಬೇಕು. ಸಾರ್ವಜನಿಕರ ಸಲಹೆಗಳನ್ನು ಸರ್ಕಾರ ಕೇಳಬೇಕು. ಸುರಂಗ ರಸ್ತರೆಯನ್ನು ಮಾಡಲೇ ಬೇಕು ಎಂದಾದರೆ ಈ ಬಂಡೆಯನ್ನ ಕೊರೆಯದೇ ಮಾಡಿ ಎಂದು ಮತ್ತೋರ್ವರು ಹೇಳಿದ್ದಾರೆ.

‘ಮೆಟ್ರೋಗಾಗಿ ಸುರಂಗ ಕೊರೆದಿಲ್ವಾ?’

ಇನ್ನು ಕೆಲವರು ಸರ್ಕಾರದ ನಿರ್ಧಾರದ ಪರವಾಗಿ ಮಾತನಾಡಿದ್ದು, ಅಭಿವೃದ್ಧಿ ದೃಷ್ಟಿಯಿಂದ ಮಾಡೋದಾದರೆ ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 40 ಅಡಿ ಆಳದಲ್ಲಿ ಸುರಂಗ ಮಾಡಿದರೆ ಭೂಮಿಯ ಮೇಲ್ಮೈಗೆ ಹಾನಿಯಾಗಲ್ಲ. ನಮ್ಮ ಮೆಟ್ರೋಗಾಗಿ ನಿರ್ಮಿಸಿರುವ ಸುರಂಗಗಳ ರೀತಿಯಲ್ಲೇ ಇವು ನಿರ್ಮಾಣ ಆಗಲಿವೆ. ದಿನದಿಂದ ದಿನಕ್ಕೆ ಬೆಂಗಳೂರು ಬೆಳೆಯುತ್ತಿದ್ದು, ಮೈಸೂರು ರಸ್ತೆ ಫ್ಲೈಓವರ್​ಗೂ ಮೊದಲು ಸಾಕಷ್ಟು ವಿರೋಧ ಮಾಡಿದ್ದರು. ಆದರೆ ಅದರ ನಿರ್ಮಾಣದಿಂದ ಇವತ್ತು ಎಷ್ಟು ಅನುಕೂಲ ಆಗಿದೆ. ಅದೇ ರೀತಿ ಜೆ.ಪಿ. ನಗರ, ಮಾರತಹಳ್ಳಿ, ಸರ್ಜಾಪುರ ಸೇರಿ ಹಲವೆಡೆ ಟ್ರಾಫಿಕ್​ ಕಡಿಮೆ ಆಗಲು ಇಂತಹ ನಿರ್ಧಾರಗಳೇ ಕಾರಣ ಎಂದು ವಾಸು ಎಂಬವರು ಪ್ರತಿಪಾದಿಸಿದ್ದಾರೆ. ಚೀನಾದಲ್ಲಿ ಅಪಾರ್ಟ್​ಮೆಂಟ್​ಗಳ ಮಧ್ಯೆಯೇ ರೈಲುಗಳು ಓಡಾಡುತ್ತವೆ. ಲಕ್ಷಾಂತರ ಮರಗಳನ್ನು ಕಡಿದು ಹೈವೇ ಮಾಡುತ್ತೇವೆ. ಆಗ ಪ್ರಕೃತಿಗೆ ಆಗದ ನಾಶ ಈಗ ಬಂಡೆ ಕೊರೆದ ಮಾತ್ರಕ್ಕೆ ಆಗುತ್ತಾ ಎಂದು ಅವಿನಾಶ್​ ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:59 pm, Tue, 4 November 25