ಸಂಕ್ರಾಂತಿಯಿಂದ ಇಂದಿರಾ ಕ್ಯಾಂಟೀನ್​ಗಳಲ್ಲಿ ಸಿಗಲಿದೆ ಭರ್ಜರಿ ಊಟ: ಏನೇನು ಗೊತ್ತಾ? ಇಲ್ಲಿದೆ ಮೆನು

| Updated By: ರಮೇಶ್ ಬಿ. ಜವಳಗೇರಾ

Updated on: Dec 08, 2023 | 12:02 PM

ಸಿದ್ದರಾಮಯ್ಯನವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಂಕ್ರಾಂತಿ ವೇಳೆಗೆ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ ಭಾಗ್ಯ ಸಿಗಲಿದೆ. ಹೌದು.. ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್​ನಲ್ಲಿ ಪ್ರತಿದಿನ ಮಧ್ಯಾಹ್ನ, ರಾತ್ರಿ ಮುದ್ದೆ, ಚಪಾತಿ ಊಟ ದೊರೆಯಲಿದೆ.

ಸಂಕ್ರಾಂತಿಯಿಂದ ಇಂದಿರಾ ಕ್ಯಾಂಟೀನ್​ಗಳಲ್ಲಿ ಸಿಗಲಿದೆ ಭರ್ಜರಿ ಊಟ: ಏನೇನು ಗೊತ್ತಾ? ಇಲ್ಲಿದೆ ಮೆನು
ಇಂದಿರಾ ಕ್ಯಾಂಟೀನ್
Follow us on

ಬೆಂಗಳೂರು, (ಡಿಸೆಂಬರ್ 08): ನಿರ್ವಹಣೆ ಇಲ್ಲದೇ ಸೊರಗಿರುವ ಇಂದಿರಾ ಕ್ಯಾಂಟೀನ್​​ಗೆ (Indira canteen) ಮತ್ತೆ ಮರುಜೀವ ನೀಡಲು ಸರ್ಕಾರ ಹಾಗೂ ಬಿಬಿಎಂಪಿ ಮುಂದಾಗಿದೆ. ಸಂಕ್ರಾಂತಿ ವೇಳೆಗೆ ಹೊಸ ಊಟ ಮೆನ್ಯುನೊಂದಿಗೆ ಇಂದಿರಾ ಕ್ಯಾಂಟೀನ್​ ಮೊದಲಿನಂತೆ ಕಾರ್ಯನಿರ್ವಹಿಸಲಿವೆ.​ ಈವರೆಗೆ ಮಧ್ಯಾಹ್ನ ಮತ್ತು ರಾತ್ರಿ ಕೇವಲ ರೈಸ್‌ ಬಾತ್‌ ಅಥವಾ ಅನ್ನ, ಸಾಂಬರ್‌, ಮೊಸರನ್ನ ಮಾತ್ರ ವಿತರಣೆ ಮಾಡಲಾಗುತ್ತಿತ್ತು. ಹಿರಿಯ ನಾಗರಿಕರು, ಸಕ್ಕರೆ ಕಾಯಿಲೆ ಇರುವವರು ಸೇರಿದಂತೆ ಮೊದಲಾದವರು ಕೇವಲ ರೈಸ್‌ ಪದಾರ್ಥದ ಊಟ ಬೇಡ, ಮುದ್ದೆ, ಚಪ್ಪಾತಿ ನೀಡುವಂತೆ ಕೇಳುತ್ತಿದ್ದರು. ಈ ವಿಚಾರ ಸರ್ಕಾರ ಮತ್ತು ಬಿಬಿಎಂಪಿ ಗಮನಕ್ಕೆ ಬಂದಿತ್ತು. ಹಾಗಾಗಿ, ಹೊಸ ವರ್ಷದಿಂದ ಇಂದಿರಾ ಕ್ಯಾಂಟೀನ್‌ ನಲ್ಲಿ ಕಡ್ಡಾಯವಾಗಿ ಮುದ್ದೆ ಪೂರೈಕೆಗೆ ತೀರ್ಮಾನಿಸಲಾಗಿದೆ.

ಬೆಂಗಳೂರಿನಲ್ಲಿ 2017ರಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಯಿತು. ಆರಂಭದಿಂದಲೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ, ಚಪ್ಪಾತಿ ನೀಡುವುದಕ್ಕೆ ಬೇಡಿಕೆ ಕೇಳಿ ಬರುತ್ತಿತ್ತು. ಇದೀಗ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಮಾಡುವವರಿಗೆ ಮುದ್ದೆ ಭಾಗ್ಯ ನೀಡುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಲಾಗುತ್ತಿದೆ. ಸಂಕ್ರಾಂತಿ ವೇಳೆಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ ದೊರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಟಿವಿ9 ರಿಯಾಲಿಟಿ ಚೆಕ್​​: ಸಿದ್ದರಾಮಯ್ಯ ತವರಿನಲ್ಲೇ ಸರ್ಕಾರದ ಕನಸಿನ ಯೋಜನೆಗೆ ಎಳ್ಳುನೀರು: ಇಂದಿರಾ ಕ್ಯಾಂಟೀನ್​ ಸ್ಥಗಿತ​​

ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆದಾರರ ಟೆಂಡರ್‌ ಆಹ್ವಾನಿಸುವುದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಸದ್ಯದಲ್ಲಿ ಬಿಬಿಎಂಪಿ ಟೆಂಡರ್‌ ಆಹ್ವಾನಿಸಲಿದೆ. ಒಂದು ತಿಂಗಳಿನಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು,. ಟೆಂಡರ್‌ ಷರತ್ತಿನಲ್ಲಿ ಗುತ್ತಿಗೆದಾರರಿಗೆ ಕಡ್ಡಾಯವಾಗಿ ಮುದ್ದೆ ಪೂರೈಕೆ ಮಾಡಬೇಕು. ಉಪಹಾರಕ್ಕೆ ಎರಡೆರಡು ಆಯ್ಕೆ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಷರತ್ತು ಒಪ್ಪಿಕೊಂಡವರಿಗೆ ಮಾತ್ರ ಗುತ್ತಿಗೆ ನೀಡಲು ಬಿಬಿಎಂಪಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಅಕ್ರಮ ತಡೆಗೆ ಡಿಜಿಟಲೀಕರಣ

ಇಂದಿರಾ ಕ್ಯಾಂಟೀನ್‌ ಗ್ರಾಹಕರ ಸಂಖ್ಯೆಯಲ್ಲಿ ಗೋಲ್‌ ಮಾಲ್‌ ಮಾಡಲಾಗುತ್ತಿದೆ. ಸುಳ್ಳು ಲೆಕ್ಕ ನೀಡಿ ರಿಯಾಯಿತಿ ಹಣ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಪ್ರತಿಯೊಂದನ್ನು ಡಿಜಿಟಲಿಲೀಕರಣದ ಮೂಲಕ ಪಾರದರ್ಶಕ ವ್ಯವಸ್ಥೆ ಮಾಡಲು ನಿರ್ಧರಿಸಿದ್ದು, ನಗರದ ಯಾವುದೇ ಇಂದಿರಾ ಕ್ಯಾಂಟೀನ್‌ಗೆ ಗ್ರಾಹಕ ತೆರಳಿ ಊಟ ಅಥವಾ ಉಪಹಾರದ ಕೋಪನ್ ಪಡೆದರೆ ಆ ಮಾಹಿತಿ ಕೇಂದ್ರ ಕಚೇರಿಗೆ ತಲುಪುವಂತೆ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ