ಟಿವಿ9 ರಿಯಾಲಿಟಿ ಚೆಕ್: ಸಿದ್ದರಾಮಯ್ಯ ತವರಿನಲ್ಲೇ ಸರ್ಕಾರದ ಕನಸಿನ ಯೋಜನೆಗೆ ಎಳ್ಳುನೀರು: ಇಂದಿರಾ ಕ್ಯಾಂಟೀನ್ ಸ್ಥಗಿತ
ಸರಿಯಾದ ನಿರ್ವಹಣೆ ಇಲ್ಲದೇ ನಗರದ ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಸ್ಥಗಿತವಾಗಿದೆ.ಲಕ್ಷಾಂತರ ರೂ. ವೆಚ್ಚದ ಕ್ಯಾಂಟೀನ್ ಸೊರಗಿದ್ದು, ಮುರಿದ ಕಿಟಕಿ, ಬಾಗಿಲುಗಳ ಸುತ್ತಮುತ್ತ ಗಿಡಗಂಟಿಗಳು ಬೆಳೆದುಕೊಂಡಿದ್ದು, ಜನಪ್ರತಿನಿಧಿಗಳ ಲೋಪ, ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಟಿವಿ9 ರಿಯಾಲಿಟಿ ಚೆಕ್ನಲ್ಲಿ ಇಂದಿರಾ ಕ್ಯಾಂಟೀನ್ ಬಂಡವಾಳ ಬಯಲಾಗಿದೆ.
ಮೈಸೂರು, ಡಿಸೆಂಬರ್ 08: ಸರಿಯಾದ ನಿರ್ವಹಣೆ ಇಲ್ಲದೇ ನಗರದ ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ (Indira canteen) ಸ್ಥಗಿತವಾಗಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ತವರಿನಲ್ಲೇ ಸರ್ಕಾರದ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ಗೆ ಎಳ್ಳುನೀರು ಬಿಡಲಾಗಿದೆ. ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ಪ್ರತಿನಿಧಿಸುವ ಕ್ಷೇತ್ರದಲ್ಲೆ ಜನರ ಹೊಟ್ಟೆ ತುಂಬಿಸಬೇಕಿದ್ದ ಇಂದಿರಾ ಕ್ಯಾಂಟೀನ್ಗೆ ಬೀಗ ಹಾಕಿ ಬಂದ್ ಮಾಡಲಾಗಿದೆ. ಲಕ್ಷಾಂತರ ರೂ. ವೆಚ್ಚದ ಕ್ಯಾಂಟೀನ್ ಸೊರಗಿದ್ದು, ಮುರಿದ ಕಿಟಕಿ, ಬಾಗಿಲುಗಳ ಸುತ್ತಮುತ್ತ ಗಿಡಗಂಟಿಗಳು ಬೆಳೆದುಕೊಂಡಿದ್ದು, ಜನಪ್ರತಿನಿಧಿಗಳ ಲೋಪ, ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಟಿವಿ9 ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ.
ಇಂದಿರಾ ಕ್ಯಾಂಟಿನ್ ಹೆಸರಿನಲ್ಲಿ ಸರ್ಕಾರದ ಹಣ ಲೂಟಿ?
ಊಟ ತಿಂಡಿ ಕೊಡುತ್ತಿದ್ದೇವೆ ಅಂತ ಲೆಡ್ಜರ್ ಪುಸ್ತಕದಲ್ಲಿ ನಮೂದು ಮಾಡಲಾಗಿದೆ. ಆ ಮೂಲಕ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಸರ್ಕಾರ ಹಣ ಲೂಟಿ ಮಾಡುತ್ತಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಪ್ರತಿದಿನ ಲೆಡ್ಜರ್ ಪುಸ್ತಕದಲ್ಲಿ ಊಟದ ವಿವರ ನಮೂದು ಮಾಡಲಾಗುತ್ತಿದೆ. ಇಂದಿನ ದಿನಾಂಕದಲ್ಲೂ ಊಟದ ವಿವರ ನಮೂದಿಸಲಾಗಿದೆ.
150 ಇಡ್ಲಿ, 10 kg ಬಾತು, 5 ಕೆ.ಜಿ. ಚಟ್ನಿ ಕೊಡಲಾಗಿದೆ ಎಂದು ಎಂಟ್ರಿಯಾಗಿದೆ. ಲೆಡ್ಜರ್ ಪುಸ್ತಕವನ್ನ ಗುತ್ತಿಗೆದಾರರು ಕ್ಯಾಂಟೀನ್ನಲ್ಲೆ ಬಿಟ್ಟುಹೋಗುತ್ತಾರೆ.
ಸರಿಯಾಗಿ ಉಪಹಾರ ಮತ್ತು ಊಟವನ್ನ ಕಳುಹಿಸುತ್ತಿಲ್ಲ: ದೇವಿರಮ್ಮ
ಈ ಕುರಿತಾಗಿ ಟಿವಿ9ಗೆ ಇಂದಿರಾ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ ದೇವಿರಮ್ಮ ಮಾತನಾಡಿ, ಕಳೆದ 5 ತಿಂಗಳಿನಿಂದ ಕ್ಯಾಂಟೀನ್ ಬಂದ್ ಆಗಿದ್ದು, 5 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಕೇರಳ ಮೂಲದವರು ಕ್ಯಾಂಟೀನ್ ನೋಡಿಕೊಳ್ಳುತ್ತಿದ್ದರು. ಸರಿಯಾಗಿ ಉಪಹಾರ ಮತ್ತು ಊಟವನ್ನ ಕಳುಹಿಸುತ್ತಿಲ್ಲ. ಹೀಗಾಗಿ ಜನರು ಇಂದಿರಾ ಕ್ಯಾಂಟೀನ್ ಬರುವುದು ಕಡಿಮೆ ಮಾಡಿದರು. ಕ್ಯಾಂಟೀನ್ಗೆ ನೀರಿನ ಬಿಲ್ ಹಾಗೂ ವಿದ್ಯುತ್ ಬಿಲ್ ಬಾಕಿ ಇದೆ ಎಂದಿದ್ದಾರೆ.
ಇದನ್ನೂ ಓದಿ: Indira Canteen: ಸಿಎಂ ಸಿದ್ದರಾಮಯ್ಯ ಕನಸಿನ ಕೂಸಿನ ಯೋಜನೆಗೆ ಕಗ್ಗತ್ತಲು!
ಅಧಿಕಾರಿಗಳು ನೀರಿನ ಸಂಪರ್ಕ ಹಾಗೂ ವಿದ್ಯುತ್ ಕಡಿತಗೊಳಿಸಿದ್ದಾರೆ. ನೀರಿಲ್ಲದಿದ್ದರು ಹೊರಗಡೆಯಿಂದ ನೀರು ತಂದು ಕ್ಯಾಂಟೀನ್ ನೋಡಿಕೊಳ್ಳುತ್ತಿದೆ. ಇತ್ತೀಚಿಗೆ ಊಟ ತಿಂಡಿಯನ್ನ ಸರಿಯಾಗಿ ಕಳುಹಿಸುತ್ತಿರಲಿಲ್ಲ. ಬೆಳಗ್ಗೆ ಕೊಟ್ಟ ತಿಂಡಿಯನ್ನೇ ಮಧ್ಯಾಹ್ನಕ್ಕೂ ಕೊಡುತ್ತಿದ್ದರು. ಇದರಿಂದ ಜನರು ಕ್ಯಾಂಟೀನ್ಗೆ ಬರುವುದು ಕಡಿಮೆ. ಇದೊಂದೆ ಅಲ್ಲ ಬೇರೆ ಕಡೆ ಕೂಡ ಕ್ಯಾಂಟೀನ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:41 am, Fri, 8 December 23