ಬೆಂಗಳೂರು: ನಗರದ ಸಿಂಗಾಪುರದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆಯೇ ಮೊದಲು ರಾಜಕಾಲುವೆ ಆಗಿತ್ತು. ರಸ್ತೆಯನ್ನು ಮುಚ್ಚಿ ಅಕ್ರಮವಾಗಿ ರಸ್ತೆ ನಿರ್ಮಿಸಿರುವ ಕಾರಣದಿಂದಲೇ ಜನರಿಗೆ ಸಮಸ್ಯೆ ಆಗುತ್ತಿದೆ ಎಂದು ಸ್ಥಳ ಪರಿಶೀಲನೆ ನಂತರ ವಿಶೇಷ ಆಯುಕ್ತ ದಯಾನಂದ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಳೆಯಿಂದ ಜನರು ತೊಂದರೆ ಅನುಭವಿಸುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಇದು ಮಳೆಯಿಂದ ಆಗಿರುವ ಸಮಸ್ಯೆಯಲ್ಲ, ನಮ್ಮಿಂದ ಆದ ಸಮಸ್ಯೆ. ಇದು ನಾವೇ ತಂದುಕೊಂಡಿರುವ ದುರಂತ ಎಂದರು. ಏನೇ ಆದರೂ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸುತ್ತೇವೆ. ಸಿಂಗಾಪುರ ಕೆರೆಯಿಂದ ಅಬ್ಬಿಗೆರೆ ಕೆರೆಗೆ ಸಂಪರ್ಕ ಕಲ್ಪಿಸಲು ರಸ್ತೆ ಪಕ್ಕ ನೀರು ಸರಾಗವಾಗಿ ಹರಿಯಲು ಡ್ರೈನೇಜ್ ಮಾಡುತ್ತೇವೆ. ಮಳೆ ಬಿಡುವು ಕೊಟ್ಟ ನಂತರ ಕಾಮಗಾರಿ ಆರಂಭ ಮಾಡುತ್ತೇವೆ. ಮಳೆಯಿಂದ ಆಗಿರುವ ಹಾನಿಯನ್ನು ಬಿಬಿಎಂಪಿ ಹೊತ್ತುಕೊಳ್ಳಲಿದೆ ಎಂದು ಸಿಂಗಾಪುರದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ದಯಾನಂದ ಹೇಳಿದ್ದಾರೆ.
ಇಡೀ ಬೆಂಗಳೂರಿನಲ್ಲಿ ಮಳೆಯಿಂದ ಸಾಲು ಸಾಲು ಅವಾಂತರ ಸೃಷ್ಡಿಯಾಗಿದೆ. ಮಳೆ ಬಿಡುವು ಕೊಟ್ಟ ಕೂಡಲೇ ಪರಿಹಾರ ಕಾಮಗಾರಿ ಶುರು ಮಾಡುತ್ತೇವೆ ಎಂದರು. ಸಿಂಗಾಪುರದಲ್ಲಿ ಕೆರೆ ಕೋಡಿ ಹರಿದ ನಂತರ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ರಸ್ತೆ ಮೇಲೆ ನೀರು ಹರಿಯಲು ಆರಂಭಿಸಿದ ಸತತ 15 ಗಂಟೆಗಳ ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಪಡೆದರು.
ನಾಗವಾರದಲ್ಲಿ ತುಂಬಿ ಹರಿಯುತ್ತಿರುವ ಡ್ರೈನೇಜ್: 15 ದಿನಗಳಿಂದ ಬಗೆಹರಿಯದ ಸಮಸ್ಯೆ
ಬೆಂಗಳೂರು ನಗರದಲ್ಲಿ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಸಹಜವಾಗಿಯೇ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವ ಕೆಲ ಪ್ರದೇಶಗಳಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದು ಜನರಿಗೆ ಸಂಕಷ್ಟ ತಂದೊಂಡಿದೆ. ನಾಗವಾರ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಕಳೆದ 15 ದಿನಗಳಿಂದ ಡ್ರೈನೇಜ್ ಸೋರಿಕೆಯಾಗುತ್ತಿದ್ದು, ರಸ್ತೆಯ ಮೇಲೆ ಮೋರಿ ನೀರು ಹರಿಯುತ್ತಿದೆ. ಡ್ರೈನೇಜ್ ನೀರು ಸೋರಿಕೆಯಿಂದ ರಸ್ತೆಯಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ಬಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು ತಿಳಿದಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸ್ಪಂದಿಸುತ್ತಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಜನರು ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿಗೆ ವರುಣನ ರೌದ್ರ ರೂಪ ಕಂಡಂತಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನ ಜೀವನ ತತ್ತರಿಸಿದೆ. ಭಾರಿ ಮಳೆಯಿಂದಾಗಿ ಬೆಂಗಳೂರಿನ ಕೋಗಿಲು ಕ್ರಾಸ್ ಬಳಿ ರಸ್ತೆ ಜಲಾವೃತಗೊಂಡಿದ್ದು ಕೋಗಿಲು ಕ್ರಾಸ್‌ನ 3 ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಏರ್‌ಪೋರ್ಟ್, ಕೋಗಿಲು, ಯಲಹಂಕ ರಸ್ತೆ ಜಾಮ್ ಆಗಿದೆ. ಏರ್ಪೋಟ್, ಕೋಗಿಲು, ಯಲಹಂಕ ಮತ್ತು ಸಿಟಿ ಕಡೆ ಹೋಗಲು ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ಸಂಚಾರ ಮಾಡಲು ಹೋಗಿ ವಾಹನಗಳು ಕೆಟ್ಟು ಹೋಗುತ್ತಿವೆ.
ಇದನ್ನೂ ಓದಿ: Bengaluru Weather Report: ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ತಜ್ಞ ಸದಾನಂದ ಅಡಿಗ ಮಾಹಿತಿ
ಇದನ್ನೂ ಓದಿ: ಕೋಲಾರ ಜಿಲ್ಲೆಯಲ್ಲಿ ಸಿಎಂ ಮಳೆ ಹಾನಿ ಪರಿಶೀಲನೆ; ತೋಟ, ಗದ್ದೆಗಳಿಗೆ ತೆರಳಿ ಮಾಹಿತಿ ಕಲೆ ಹಾಕಿದ ಬಸವರಾಜ ಬೊಮ್ಮಾಯಿ
Published On - 11:29 pm, Mon, 22 November 21