Bangalore Rain Havoc: ಕಂದಾಯ ಸಚಿವರ ಕ್ಷೇತ್ರದಲ್ಲಿ ಮಳೆ ಬಂದರೆ ಮನೆಗೆ ನೀರು ಬಂತು ಅಂತಲೇ ಲೆಕ್ಕ

|

Updated on: May 18, 2022 | 7:30 AM

ಕಂದಾಯ ಸಚಿವ ಆರ್​.ಅಶೋಕ ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ದತ್ತಾತ್ರೇಯ ನಗರದಲ್ಲಿ ಮೇ 17ರ ಸಂಜೆ ಸುರಿದ ಮಳೆಗೆ ಮನೆಗಳಿಗೆ ನೀರು ನುಗಿದ್ದು, ಗೃಹೋಪಯೋಗಿ ವಸ್ತುಗಳು ಹಾಳಾಗಿವೆ.

Bangalore Rain Havoc: ಕಂದಾಯ ಸಚಿವರ ಕ್ಷೇತ್ರದಲ್ಲಿ ಮಳೆ ಬಂದರೆ ಮನೆಗೆ ನೀರು ಬಂತು ಅಂತಲೇ ಲೆಕ್ಕ
ದತ್ತಾತ್ರೇಯ ನಗರದ 4ನೇ ಮುಖ್ಯರಸ್ತೆಯಲ್ಲಿ ಮಳೆ ನೀರು ನಿಂತಿರುವುದು
Follow us on

ಬೆಂಗಳೂರು: ಇಲ್ಲಿನ ಬನಶಂಕರಿ 3ನೇ ಹಂತದ ಹೊಸಕರೆಹಳ್ಳಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅಕ್ಟೋಬರ್ 24, 2020ರಂದು ಹೊಸಕೆರೆಹಳ್ಳಿ ಹೆಸರು ರಾಷ್ಟ್ರ ಮಟ್ಟದಲ್ಲಿ ಕೇಳಿಬಂತು. ಅಲ್ಲಿನ ದತ್ತಾತ್ರೇಯ ನಗರದಲ್ಲಿ ಸುರಿದ ಸಂಜೆ ಮಳೆಗೆ (Rain havoc) ಮನೆಗಳಿಗೆ ನೀರು ನುಗ್ಗಿ, ಲಕ್ಷಾಂತರ ರೂಪಾಯಿ ಆಸ್ತಿ-ಪಾಸ್ತಿ ನಷ್ಟವಾಯಿತು. ಅದೇ ಮಳೆ ರಾತ್ರಿ ಎಲ್ಲರೂ ಮಲಗಿದ ಮೇಲೆ ಬಂದಿದ್ದರೆ ಹತ್ತಾರು ಮಂದಿ ಸಾವಿಗೆ ಕಾರಣವಾಗುತ್ತಿತ್ತು. ಮರುದಿನವೇ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಸಚಿವರಾದ ಅಶೋಕ್ ಕುಟುಂಬಗಳಿಗೆ ತಲಾ 25 ಸಾವಿರ ರೂಪಾಯಿ ಪರಿಹಾರ ಘೋಷಿಸಿದರು. ಎನ್​ಡಿಆರ್​ಎಫ್​ನಲ್ಲಿ ಇರುವುದೇ 10 ಸಾವಿರ ರೂಪಾಯಿ ಪರಿಹಾರದ ಸಾಧ್ಯತೆ. ಆದರೆ 25 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದಿದ್ದರು.

ಆ ಘಟನೆಯ ವೇಳೆ ಮುಖ್ಯಮಂತ್ರಿ ಆಗಿದ್ದ ಬಿ.ಎಸ್​.ಯಡಿಯೂರಪ್ಪ, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಕೂಡ ಭೇಟಿ ನೀಡಿದ್ದರು. ಇಡೀ ಪ್ರದೇಶ ಕೆಸರಿನಿಂದ ತುಂಬಿ ಹೋಗಿದ್ದು, ಎರಡು ದಿನದೊಳಗಾಗಿ ಬಿಬಿಎಂಪಿಯವರು ಹಾಗೂ ಸ್ಥಳೀಯರ ಶ್ರಮದಿಂದಾಗಿ ಸಹಜ ಸ್ಥಿತಿಗೆ ಬಂತು. ಆ ವೇಳೆ ಸಚಿವರು ಈ ಪ್ರದೇಶದ ಒಳಚರಂಡಿಗಳನ್ನು ಸರಿ ಮಾಡಿಸುವುದಾಗಿ ಭರವಸೆ ನೀಡಿದ್ದರು. ಸಂಸದರು ಬಿಬಿಎಂಪಿ ಅಧಿಕಾರಿಗಳಿಗೆ ಮೂರು ದಿನದೊಳಗಾಗಿ ಪರಿಹಾರ ಯೋಜನೆಯೊಂದಿಗೆ ಬರುವಂತೆ ರೇಗಿಕೊಂಡಿದ್ದರು. ಆ ಘಟನೆಯ ನಂತರ ರಾಜಕಾಲುವೆಗಳ ಹೂಳೆತ್ತುವ ಕೆಲಸ, ಚರಂಡಿ ವಿಸ್ತರಣೆ ಮಾಡುವುದು ದತ್ತಾತ್ರೇಯ ದೇವಸ್ಥಾನ ಬಳಿ ಮೋರಿಯ ಕಾಂಪೌಂಡ್ ಎತ್ತರ ಮಾಡುವ ಕೆಲಸ ಹೀಗೆ ಎಲ್ಲವೂ ನಡೆದಿದೆ.

ಆದರೆ, ದತ್ತಾತ್ರೇಯ ನಗರ 3, 4 ಹಾಗೂ 5ನೇ ಮುಖ್ಯರಸ್ತೆಗಳಲ್ಲಿ ನೀರು ನಿಲ್ಲುವುದು, ಮನೆಗಳಿಗೆ ನೀರು ನುಗ್ಗುವುದು ಇನ್ನೂ ನಿಂತಿಲ್ಲ. ಅಂದರೆ, 2022ರ ಮೇ ತಿಂಗಳ 17ನೇ ತಾರೀಕಿಗೂ ನಿಂತಿಲ್ಲ. ಮಂಗಳವಾರ ಸಂಜೆ ಸುರಿದ ಮಳೆಗೆ ಅದೇ 3, 4 ಹಾಗೂ 5ನೇ ಮುಖ್ಯರಸ್ತೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮೊಳಕಾಲು ಎತ್ತರದಲ್ಲಿ ರಸ್ತೆಯಲ್ಲಿ ನೀರು ನಿಂತಿದೆ. ಅದರಲ್ಲೂ ಕಾರ್ಮಿಕ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇಲ್ಲಿನ ಬಾಡಿಗೆ ಮನೆಗಳ ಸ್ಥಿತಿ ಬಹಳ ಕಷ್ಟದಲ್ಲಿದೆ.

ಇದನ್ನೂ ಓದಿ: ಮಳೆಗೆ ಮುಳುಗುತ್ತಿದೆ ಬೆಂಗಳೂರು; ಬಿಬಿಎಂಪಿ ಅವೈಜ್ಞಾನಿಕ ಕಾಮಗಾರಿಯಿಂದ ಅಪಾಯದ ಅಂಚಿನಲ್ಲಿದೆ ಈ 10 ಪ್ರದೇಶಗಳು

ಐದಾರು ವರ್ಷದ ಹಿಂದಿನಿಂದ ಈ ಬಡಾವಣೆಯಲ್ಲಿ ಸಮಸ್ಯೆ ತಲೆ ಎತ್ತಿದೆ. ರಾಜಕಾಲುವೆಗಳ ಸರ್ವೇ ಮಾಡಿಸಬೇಕು. ಅನಧಿಕೃತವಾಗಿ ಮನೆ ಕಟ್ಟಿದವರು, ಅತಿಕ್ರಮಣ ಮಾಡಿದವರನ್ನು ತೆರವುಗೊಳಿಸಬೇಕು ಎನ್ನುತ್ತಾರೆ ಸ್ಥಳೀಯರಾದ ಸಂತೋಷ್. ಇನ್ನೂ ಮುಂದುವರಿದು, ಚರಂಡಿಗಳನ್ನು ಸರಿ ಮಾಡಿಸುವುದಕ್ಕೆ ಇಷ್ಟೆಲ್ಲ ಹಣ ಖರ್ಚು ಮಾಡಿದ ನಂತರವೂ ಇದೇ ಪರಿಸ್ಥಿತಿ ಇದೆ ಎಂದ ಮೇಲೆ ಆ ಬಗ್ಗೆಯೂ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸುತ್ತಾರೆ.

ಹೊಸಕೆರೆಹಳ್ಳಿ ವಾರ್ಡ್​ ಬಿಬಿಎಂಪಿ ಸದಸ್ಯರಾಗಿ ಆಯ್ಕೆ ಆಗಿದ್ದವರು, ಪದ್ಮನಾಭನಗರ ವಿಧಾನಸಭೆ ಕ್ಷೇತ್ರ ಹಾಗೂ ಬೆಂಗಳೂರು ಲೋಕಸಭೆ ಕ್ಷೇತ್ರ ಎಲ್ಲದರಲ್ಲೂ ಬಿಜೆಪಿಯಿಂದ ಆಯ್ಕೆ ಆದವರೇ ಇದ್ದಾರೆ. ಹಾಗಿದ್ದ ಮೇಲೆ ಸಂವಹನದ ಕೊರತೆಯಂತೂ ಇಲ್ಲ. ಸಮಸ್ಯೆ ಸರಿಪಡಿಸಬೇಕು ಎಂದು ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತದೆ ಎನ್ನುತ್ತಾರೆ ಮತ್ತೊಬ್ಬ ಸ್ಥಳೀಯರಾದ ಕುಮಾರ್.

ಮೇ 17ರ ಮಂಗಳವಾರ ಸುರಿದ ಮಳೆಯ ಪ್ರಮಾಣಕ್ಕೆ ಈ ಪರಿಸ್ಥಿತಿ. ಇನ್ನು ಮಳೆಗಾಲದಲ್ಲಿ ಏನಾಗಬಹುದು. ಬೆಂಗಳೂರಿನ ಪ್ರಮುಖ ಭಾಗವಾಗಿರುವ ಈ ಪ್ರದೇಶದಲ್ಲಿ ಈಗಲೂ ಬಿಬಿಎಂಪಿಯ ಕಾನೂನುಗಳು ಅನ್ವಯ ಆಗುತ್ತಿಲ್ಲ. ರಸ್ತೆಯಲ್ಲಿ ತಮಗೆ ಬೇಕಾದಂತೆ ವಾಹನ ನಿಲುಗಡೆ, ಕಟ್ಟಡ ನಿರ್ಮಾಣ, ಜೋಪಡಿಗಳು, ಅನಧಿಕೃತ ನಿರ್ಮಾಣ ಹೀಗೆ ಸಾಕಷ್ಟು ಸಮಸ್ಯೆಗಳಿವೆ ಎಂದು ನಾಗರಿಕರು ದೂರುತ್ತಾರೆ.

ಇನ್ನಷ್ಟು ಬೆಂಗಳೂರು ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ