Bengaluru Rains: ಬೆಂಗಳೂರಿನಲ್ಲಿ ಮತ್ತೆ ಮಳೆ: ಮೊಳಕಾಲುದ್ದ ನೀರಿನಲ್ಲಿ ದ್ವಿಚಕ್ರ ವಾಹನ ತಳ್ಳುತ್ತಿರುವ ಸವಾರರು

ಎಂಜಿನ್​ಗೆ ನೀರು ನುಗ್ಗಿದ ಕಾರಣ ದ್ವಿಚಕ್ರ ವಾಹನಗಳು ಕೆಟ್ಟು ನಿಂತವು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಬೈಕ್ ಸವಾರರು ಕೆಳಗಿಳಿದು ತಳ್ಳಿಕೊಂಡು ಹೊರಟರು.

Bengaluru Rains: ಬೆಂಗಳೂರಿನಲ್ಲಿ ಮತ್ತೆ ಮಳೆ: ಮೊಳಕಾಲುದ್ದ ನೀರಿನಲ್ಲಿ ದ್ವಿಚಕ್ರ ವಾಹನ ತಳ್ಳುತ್ತಿರುವ ಸವಾರರು
ಕೋಡಿ ಹರಿಯುತ್ತಿರುವ ಬೆಂಗಳೂರಿನ ಸಿಂಗಾಪುರ ಕೆರೆ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 24, 2021 | 6:54 PM

ಬೆಂಗಳೂರು: ನಗರದ ಹಲವು ಬಡಾವಣೆಗಳಲ್ಲಿ ಬುಧವಾರ ಸಂಜೆ ಮತ್ತೆ ಚುರುಕಿನ ಮಳೆ ಸುರಿದಿದ್ದು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಮನೆ ಸೇರಲು ಪರದಾಡಬೇಕಾಯಿತು. ಕೆ.ಆರ್.ಸರ್ಕಲ್, ಟೌನ್​ಹಾಲ್, ಕೆ.ಆರ್.ಮಾರ್ಕೆಟ್, ಚಾಮರಾಜಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಜೆ ಮಳೆ ಧೋ ಎಂದು ಸುರಿಯಿತು. ಎಂಜಿನ್​ಗೆ ನೀರು ನುಗ್ಗಿದ ಕಾರಣ ದ್ವಿಚಕ್ರ ವಾಹನಗಳು ಕೆಟ್ಟು ನಿಂತವು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಬೈಕ್ ಸವಾರರು ಕೆಳಗಿಳಿದು ತಳ್ಳಿಕೊಂಡು ಹೊರಟರು. ರಿಚ್​ಮಂಡ್ ವೃತ್ತದ ಬಳಿ ಕೇವಲ ಐದು ನಿಮಿಷ ಸುರಿದ ಮಳೆಗೇ ರಸ್ತೆಯ ಮೇಲೆ ನೀರು ಹರಿಯಿತು. ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ನೀರು ಹರಿಯುತ್ತಿರುವುದು ಸಾಮಾನ್ಯ ಸಂಗತಿ ಎನಿಸಿದೆ. ಬೆಂಗಳೂರಿನ ಮೈಸೂರು, ಮಾಗಡಿ ರಸ್ತೆಯಲ್ಲಿಯೂ ಮಳೆಯಿಂದ ಭಾರಿ ಪ್ರಮಾಣದ ನೀರು ರಸ್ತೆಯ ಮೇಲೆ ಹರಿಯುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಮಳೆ ಮತ್ತೆ ಆರಂಭವಾಗಿದೆ. ನೆಲಮಂಗಲ ಪಟ್ಟಣದ ಸುತ್ತಮುತ್ತ ಮಳೆ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ.

ಮದ್ಯಸೇವಿಸಿ ಈಜಲು ಹೋದ ವ್ಯಕ್ತಿ ಸಾವು
ದೇವನಹಳ್ಳಿ ತಾಲೂಕಿನ ಬೂದಿಗೆರೆ ಕೆರೆಯಲ್ಲಿ ಮದ್ಯಸೇವಿಸಿ ಕೆರೆಯಲ್ಲಿ ಈಜಲು ಹೋಗಿದ್ದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತನನ್ನು ಕೇಶವ (36) ಎಂದು ಗುರುತಿಸಲಾಗಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಳೆದ ಹಲವು ದಿನಗಳಿಂದ ಬಿದ್ದ ಮಳೆಗೆ ಕೆರೆ ತುಂಬಿತ್ತು. ಕೆರೆಯ ಬದಿಯಲ್ಲೇ ಇರುವ ವೈನ್ಸ್ ಸ್ಟೋರ್​ನಿಂದ ಮದ್ಯ ಖರೀದಿಸಿ ಸೇವಿಸಿ, ಈಜಲೆಂದು ನೀರಿಗೆ ಇಳಿದಿದ್ದ ಎನ್ನಲಾಗಿದೆ. ಮೃತನ ಶವಕ್ಕಾಗಿ ಕೆರೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಚನ್ನರಾಯಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶೀಘ್ರ ಪರಿಹಾರ ನೀಡಲು ಸಿದ್ದರಾಮಯ್ಯ ಒತ್ತಾಯ
ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಸಾಕಷ್ಟು ನಷ್ಟವಾಗಿದೆ. ಸರ್ಕಾರ ಕೂಡಲೇ ಸರ್ವೆ ಮಾಡಿಸಿ ಪರಿಹಾರ ನೀಡಬೇಕು. ಮುಖ್ಯಮಂತ್ರಿ ಕಾಟಾಚಾರಕ್ಕೆ ಎರಡು-ಮೂರು ಕಡೆ ಭೇಟಿ ನೀಡಿದ್ದಾರೆ. ಸರ್ಕಾರ ಜನರ ಕಷ್ಟಕ್ಕೆ ಕೂಡಲೇ ಸ್ಪಂದಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಪತ್ರವನ್ನು ಬರೆಯುತ್ತೇನೆ. ಕೃಷಿ ಇಲಾಖೆ‌ ಪ್ರಕಾರ ರಾಜ್ಯದ 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ಅವರು ಕೋಲಾರದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ರಾಯಚೂರು: ಮಳೆಯಿಂದ ಅಪಾರ ಹಾನಿ; 40,534 ಹೆಕ್ಟೇರ್‌ನಷ್ಟು ಬೆಳೆ ನಾಶ
ಇದನ್ನೂ ಓದಿ: ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ; ದುಪ್ಪಟ್ಟಾದ ತರಕಾರಿ ಬೆಲೆ, ಪ್ಯಾಕೆಟ್ ಒಂದರಲ್ಲಿ 2 ಟೊಮೆಟೋ ಮಾರಾಟ!

Published On - 6:52 pm, Wed, 24 November 21