ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಮಳೆ: ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಪವರ್ ಕಟ್, ಅಪಘಾತದಲ್ಲಿ ಯುವಕ ಸಾವು

ರಸ್ತೆ ಮೇಲೆ ಹರಿಯುತ್ತಿದ್ದ ಮಳೆ ನೀರಿನಿಂದ ಬೈಕ್ ಸ್ಕಿಡ್ ಆಗಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಕಾರ್ಪೊರೇಷನ್ ಬಳಿಯ ಪಲ್ಲವಿ ಟಾಕೀಸ್ ಬಳಿ ರಾತ್ರಿ 12 ಗಂಟೆ ಸುಮಾರಿನಲ್ಲಿ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಮಳೆ: ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಪವರ್ ಕಟ್, ಅಪಘಾತದಲ್ಲಿ ಯುವಕ ಸಾವು
ಬೆಂಗಳೂರಿನ ಗಾಯತ್ರಿ ನಗರದಲ್ಲಿ ಮರವೊಂದು ಕಾರಿನ ಮೇಲೆ ಉರುಳಿದೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 19, 2022 | 7:02 AM

ಬೆಂಗಳೂರು: ನಗರದಲ್ಲಿ ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ವಿದ್ಯುತ್ ಲೇನ್ ಮೇಲೆ ಬೃಹತ್ ಮರವೊಂದು ಉರುಳಿಬಿದ್ದಿದೆ. ವಿದ್ಯುತ್ ತಂತಿಗಳು ತುಂಡರಿಸಿದ ಕಾರಣ ಗಾಯತ್ರಿ ನಗರ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. 20ಕ್ಕೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೃಹತ್ ಮರ ಬಿದ್ದ ಕಾರಣ ಎರಡು ಕಾರುಗಳು ಜಖಂಗೊಂಡಿದ್ದು, 3 ವಿದ್ಯುತ್ ಕಂಬಗಳು ಉರುಳಿವೆ. ಈ ಪೈಕಿ ಒಂದು ಕಂಬ ಕಾರಿನ ಮೇಲೆಯೇ ಬಿದ್ದಿದೆ. ಮತ್ತೊಂದು ಕಾರಿನ ಮೇಲೆ ತೆಂಗಿನ ಮರ ಬಿದ್ದಿದೆ. ಗಾಯತ್ರಿ ನಗರದಲ್ಲಿ ನಾಲ್ಕಕ್ಕೂ ಹೆಚ್ಚು ಕಂಬಗಳು ವಾಲಿರುವ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ಉರುಳಿರುವ ಮರ ತೆರವುಗೊಳಿಸಿ ವಿದ್ಯುತ್ ಮಾರ್ಗ ಸರಿಪಡಿಸುವ ಕೆಲಸ ಆರಂಭಿಸಿದ್ದಾರೆ. ಸುಮಾರು ಮೂರು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.

ಯುವಕ ಸಾವು ರಸ್ತೆ ಮೇಲೆ ಹರಿಯುತ್ತಿದ್ದ ಮಳೆ ನೀರಿನಿಂದ ಬೈಕ್ ಸ್ಕಿಡ್ ಆಗಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಕಾರ್ಪೊರೇಷನ್ ಬಳಿಯ ಪಲ್ಲವಿ ಟಾಕೀಸ್ ಬಳಿ ರಾತ್ರಿ 12 ಗಂಟೆ ಸುಮಾರಿನಲ್ಲಿ ಘಟನೆ ನಡೆದಿದೆ. ಬೈಕ್​ನಿಂದ ಕೆಳಗೆ ಬಿದ್ದ ಯುವಕನ ಮೇಲೆ ವೇಗವಾಗಿ ಬಂದ ಟಿಪ್ಪರ್ ಲಾರಿ ಹರಿಯಿತು. ಬೈಕ್‌ನಲ್ಲಿದ್ದ ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನ ಕಾರ್ಪೊರೇಷನ್ ಅಪಘಾತ ಸಂಭವಿಸಿದೆ. ಟಿಪ್ಪರ್ ಹರಿದ ಪರಿಣಾಮ ಯುವಕನ ಮೃತದೇಹ ಛಿದ್ರಗೊಂಡಿದೆ. ಮತ್ತೊಬ್ಬ ಸವಾರನ ಸೋಂಟದ ಮೇಲೆ ಟಿಪ್ಪರ್ ಹರಿದಿದೆ. ವಿಲ್ಸನ್‌ಗಾರ್ಡನ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಅಪಘಾತದ ಬಳಿಕ ಟಿಪ್ಪರ್ ಚಾಲಕ ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.

ಹಲವೆಡೆ ಮಳೆ ಬೆಂಗಳೂರಿನ ಹಲವೆಡೆ ಸೋಮವಾರ ಗುಡುಗು ಸಹಿತ ಮಳೆಯಾಯಿತು. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿನಿತ್ಯ ಬೆಂಗಳೂರಿನ ಜನರಿಗೆ ಮಳೆರಾಯ ದರ್ಶನ ನೀಡುತ್ತಿದ್ದಾನೆ. ಸತತ ನಾಲ್ಕು ದಿನದಿಂದ ಮಳೆ ಆಗುತ್ತಿದ್ದು, ಹಲವೆಡೆ ಮಳೆಯಿಂದಾಗಿ ಟ್ರಾಫಿಕ್​ ಜಾಮ್​ ಉಂಟಾಗಿ ಸವಾರರು ಪರದಾಡುತ್ತಿದ್ದಾರೆ. ಕಾರ್ಪೊರೇಷನ್, ಮೈಸೂರು ಬ್ಯಾಂಕ್ ವೃತ್ತದಲ್ಲಿ ಟ್ರಾಫಿಕ್​ಜಾಮ್ ಆಗಿದ್ದು,​ ಮೆಜೆಸ್ಟಿಕ್​ಗೆ ತೆರಳುವ ಮಾರ್ಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ನಾಳೆಯೂ ಕರಾವಳಿ, ದಕ್ಷಿಣ ಒಳನಾಡು, ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರೆಯಲಿದ್ದು, ಇನ್ನೆರಡು ದಿನ ಗುಡುಗು, ಗಾಳಿ ಸಹಿತ ಮಳೆಯಾಗಲಿದೆ. ಇಂದು ಬೆಂಗಳೂರಿನಲ್ಲಿ ಕನಿಷ್ಠ 15 ಮಿಮೀನಿಂದ ಗರಿಷ್ಠ 64 ಮಿ.ಮೀವರೆಗೆ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಮಾಹಿತಿ ನೀಡಿದೆ.

ಬಿರುಗಾಳಿ ಸಹಿತ ಮಳೆಯಿಂದಾಗಿ ಕಸ್ತೂರ್ಬಾ ರಸ್ತೆಯಲ್ಲಿ ಬಸ್ ನಿಲ್ದಾಣದ ಮೇಲೆ ಮರ ಬಿದ್ದು ವಾಹನಗಳು ಜಖಂವಾಗಿದೆ. ಮರ ಬಿದ್ದ ರಭಸಕ್ಕೆ ದ್ವಿಚಕ್ರ ವಾಹನ, ಬಸ್​ಗೆ ಹಾನಿ ಉಂಟಾಗಿದೆ. ವಿಲ್ಸನ್ ಗಾರ್ಡನ್, ಕೆ.ಆರ್. ಮಾರ್ಕೆಟ್, ಲಾಲ್ ಬಾಗ್, ಎಂ.ಜಿ ರಸ್ತೆ ಸೇರಿದಂತೆ ಹಲವೆಡೆ ಮಳೆ ಹಿನ್ನಲೆ ದ್ವಿಚಕ್ರ ವಾಹನ ಸವಾರರು ಪರದಾಡುತ್ತಿದ್ದು, ಬಸ್ ನಿಲ್ದಾಣಗಳಲ್ಲಿ ಬೈಕ್​ಗಳನ್ನು ಪಾರ್ಕ್ ಮಾಡಿ ಮಳೆ ಬೀಳದ ಕಡೆ ನಿಂತ್ತಿದ್ದಾರೆ. ಕೆಂಪೇಗೌಡ ರಸ್ತೆ, ಮೆಜೆಸ್ಟಿಕ್ ಸುತ್ತಾ ಮುತ್ತಾ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಗರದ ತಗ್ಗು ಪ್ರದೇಶದ ಬಹುತೇಕ ರಸ್ತೆಗಳು ಮಳೆ‌ ನೀರಿನಿಂದ ಆವೃತಗೊಂಡಿವೆ. ಜಲಾವೃತವಾಗಿ ರಸ್ತೆಗಳು ಕೆರೆಯಂತಾಗಿವೆ. ಚಾಲುಕ್ಯ ಸರ್ಕಲ್, ಶಿವಾನಂದ ವೃತ್ತ, ಓಕಳಿಪುರಂ, ಹಡ್ಸನ್ ಸರ್ಕಲ್, ಬ್ರಿಗೇಡ್ ರೋಡ್ ಜಂಕ್ಷನ್, ಆನಂದರಾವ್ ಸರ್ಕಲ್, ರೇಸ್ ಕೋರ್ಸ್ ರಸ್ತೆ ಬಳಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇದನ್ನೂ ಓದಿ: Bengaluru Rain: ಬೆಂಗಳೂರು ನಗರದ ಹಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

ಇದನ್ನೂ ಓದಿ: ಬೇಸಿಗೆ ಮಾಯವಾಗಿ, ರಾಜಧಾನಿ ಬೆಂಗಳೂರು ಫುಲ್ ಕೂಲ್