ಬೆಂಗಳೂರು: ಶಾಲೆಗೆ ಹೋಗುವಾಗ ಮರದ ಕೊಂಬೆ ಮುರಿದು ಬಿದ್ದು ಗಾಯಗೊಂಡಿದ್ದ ಬಾಲಕಿ ಪ್ರಿಷಾ(9) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಸುಮಾರು 702 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಪ್ರಿಷಾ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಳೆ. ಮುದ್ದು ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 702 ದಿನಗಳ ಸತತ ಚಿಕಿತ್ಸೆಯ ನಂತರವೂ ಪ್ರಿಷಾಳನ್ನು ಉಳಿಸಿಕೊಳ್ಳಲಾಗಿಲ್ಲ.
2020ರ ಮಾರ್ಚ್ 11ರಂದು ಪ್ರಿಷಾ ತಂದೆ ಜತೆ ಸ್ಕೂಟಿಯಲ್ಲಿ ಸ್ಕೂಲ್ಗೆ ಹೊರಟಿದ್ದಳು. ಈ ವೇಳೆ ರಾಮಮೂರ್ತಿನಗರದ ಕೌದೇನಹಳ್ಳಿ ಬಳಿ ಒಣಗಿದ ರೆಂಬೆ ಬಿದ್ದು ಬಾಲಕಿ ಪ್ರಿಷಾ ತೀವ್ರವಾಗಿ ಗಾಯಗೊಂಡಿದ್ದಳು. ಬಾಲಕಿಯ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಕೂಡ್ಲೇ ಆಕೆಯನ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗೆ 702 ದಿನಗಳಿಂದಲೂ ಆಸ್ಪತ್ರೆಯಲ್ಲೇ ಟ್ರೀಟ್‌ಮೆಂಟ್ ಪಡೆಯುತ್ತಿದ್ದ ಪ್ರಿಶಾ, ಇವತ್ತು ಚಿಕಿತ್ಸೆ ಫಲಿಸದೇ ಪ್ರಾಣ ಬಿಟ್ಟಿದ್ದಾಳೆ.
ಸ್ಕೂಲ್‌ನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗಿಂತ ಮುಂದಿದ್ದ ಬಾಲಕಿ, ಹಾಡು ಡ್ಯಾನ್ಸ್ ಅಂತಾ ಚೂಟಿಯಾಗಿದ್ಲು. ಒಬ್ಬೇ ಮಗಳು ಆಗಿದ್ರಿಂದ ಹೆತ್ತವರು ಕೂಡಾ ಮುದ್ದಾಗಿ ಬೆಳೆಸಿದ್ರು. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು. ಇನ್ನು ಈ ಅವಘಡದ ಬಗ್ಗೆ ಗೊತ್ತಾಗ್ತಿದ್ದಂತೆ ನಟ ಸುದೀಪ್ ಕೂಡಾ ವಿಡಿಯೋ ಕಾಲ್ ಮಾಡಿ ಪುಟಾಣಿಯ ಆರೋಗ್ಯ ವಿಚಾರಿಸಿದ್ರು. ಪ್ರಿಶಾಗೆ ಧೈರ್ಯ ತುಂಬಿದ್ರು. ಅಷ್ಟೇ ಅಲ್ಲ ಒಬ್ಬ ವೈದ್ಯರನ್ನೂ ಪ್ರಿಶಾಳ ಚಿಕಿತ್ಸೆಗೆ ನೇಮಕ ಮಾಡಿದ್ರಂತೆ. ಮಾಜಿ ಸಿಎಂ ಕುಮಾರ ಸ್ವಾಮಿ, ನಿಖಿಲ್ ಕುಮಾರಸ್ವಾಮಿ ಈ ಆಸ್ಪತ್ರೆಗೆ ಬಂದಾಗ ಆರೋಗ್ಯ ವಿಚಾರಿಸಿದ್ರು. ಇಷ್ಟೆಲ್ಲಾ ಆದ್ರೂ ಪ್ರಿಶಾ ಮಾತ್ರ ಬದುಕುಳಿಯಲೇ ಇಲ್ಲ. ಬರೋಬ್ಬರಿ 700 ದಿನ ಚಿಕಿತ್ಸೆ ನೀಡಿರೋದ್ರಿಂದ ಅಂದಾಜು 80 ಲಕ್ಷ ರೂಪಾಯಿ ಬಿಲ್ ಆಗಿದೆ. ಶುಲ್ಕ ಭರಿಸುವ ಭರವಸೆ ನೀಡಿದ್ದ ಪಾಲಿಕೆ ಇದನ್ನ ಬರಿಸೋ ಸಾಧ್ಯತೆ ಇದೆ. ಅದೇನೇ ಇದ್ರೂ ಒಣಗಿ ಹೋಗಿದ್ದ ಮರದ ರೆಂಬೆಗೆ ಬಾಲಕಿ ಬಲಿಯಾಗಿದ್ದು ನಿಜಕ್ಕೂ ದುರಂತ. ಪಾಲಿಕೆ ಇನ್ನಾದ್ರೂ ಇಂಥಾ ರೆಂಬೆ ಕೊಂಬೆಗಳನ್ನ ತೆಗೆಸಿ ಅನಾಹುತಗಳನ್ನ ತಪ್ಪಿಸಬೇಕಿದೆ .
ಇದನ್ನೂ ಓದಿ: ಕಸ ಎಸೆಯಲು ಬಂದ ವ್ಯಕ್ತಿ ಮೇಲೆ ಬಿದ್ದ ಕೊಂಬೆ, ಸ್ಥಳದಲ್ಲೇ ಸಾವು
Published On - 11:45 am, Thu, 10 February 22