ರಾಮೇಶ್ವರಂ ಕೆಫೆ ಸ್ಫೋಟ: ಐದು ದಿನ ಕಳೆದರೂ ಸಿಕ್ಕಿಲ್ಲ ಆರೋಪಿಯ ಸುಳಿವು, ಪತ್ತೆಗೆ ಮ್ಯಾಪಿಂಗ್ ಮೊರೆ ಹೋದ ಪೊಲೀಸರು

| Updated By: Ganapathi Sharma

Updated on: Mar 06, 2024 | 8:05 AM

ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯ ಸುಳಿವು ಇನ್ನೂ ಪತ್ತೆ ಆಗದಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಇದೀಗ ಮ್ಯಾಪಿಂಗ್ ಮೊರೆ ಹೋಗಿದ್ದಾರೆ. ಈ ವಿಧಾನದ ಮೂಲಕ ಆರೋಪಿಯ ಸುಳಿವು ಪತ್ತೆ ಹಚ್ಚುವುದು ಹೇಗೆ? ಇದಕ್ಕಾಗಿ ಪೊಲೀಸರು ಏನೇನು ಮಾಡುತ್ತಾರೆ? ಇಲ್ಲಿದೆ ನೋಡಿ ಮಾಹಿತಿ.

ರಾಮೇಶ್ವರಂ ಕೆಫೆ ಸ್ಫೋಟ: ಐದು ದಿನ ಕಳೆದರೂ ಸಿಕ್ಕಿಲ್ಲ ಆರೋಪಿಯ ಸುಳಿವು, ಪತ್ತೆಗೆ ಮ್ಯಾಪಿಂಗ್ ಮೊರೆ ಹೋದ ಪೊಲೀಸರು
ಶಂಕಿತನ ಸಿಸಿಟಿವಿ ದೃಶ್ಯ
Follow us on

ಬೆಂಗಳೂರು, ಮಾರ್ಚ್ 6: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸ್ಫೋಟ (Bomb Blast) ಸಂಭವಿಸಿ ಐದು ದಿನ ಕಳೆದರೂ ಇನ್ನೂ ಆರೋಪಿಯ ಸುಳಿವು ಸಿಕ್ಕಿಲ್ಲ. ಆರೋಪಿಯ ಸುಳಿವು ಬೆನ್ನತ್ತಿ ಹಲವು ಆಯಾಮಗಳಲ್ಲಿ ಸಿಸಿಬಿ ತನಿಖೆ (CCB Investigation) ನಡೆಸುತ್ತಿದೆ. ಆರೋಪಿಯ ಪತ್ತೆಗೆ ಮ್ಯಾಪಿಂಗ್ ಸಹ ನಡೆಸಲಾಗಿದೆ. ಆರೋಪಿ ಬಂದು, ಹೋದ ಮಾರ್ಗಗಳಲ್ಲಿ ಹಾಗೂ ಸುತ್ತಮುತ್ತಲಿನ ಏರಿಯಾಗಳಲ್ಲಿ ಮ್ಯಾಪಿಂಗ್ ನಡೆಸಲಾಗುತ್ತಿದೆ.

ಆರೋಪಿ ಎಲ್ಲಿಂದ ಪ್ರಯಾಣ ಶುರು ಮಾಡಿದ್ದ? ಅಥವಾ ಎಲ್ಲಿ ಪ್ರಯಾಣ ಕೊನೆಗೊಳಿಸಿದ್ದಾನೆ ಎಂದು ಶೋಧಿಸಲಾಗುತ್ತಿದೆ. ಯಾವುದಾದರೂ ಒಂದು ಮಾರ್ಗದಲ್ಲಿ ಸುಳಿವು ಸಿಕ್ಕಿದರೂ ಆರೋಪಿ ಪತ್ತೆಗೆ ಅನುಕೂಲವಾಗಲಿದೆ. ಮುಖ ಕಾಣದಂತೆ ಆರೋಪಿ ಎಲ್ಲೆಡೆ ಎಚ್ಚರವಹಿಸಿರುವುದು ತಿಳಿದುಬಂದಿದೆ. ಎಲ್ಲೂ ಕೂಡ ತನ್ನ ಸಂಪೂರ್ಣ ಮುಖ ಕಾಣದಂತೆ ಆರೋಪಿ ಓಡಾಡಿದ್ದಾನೆ. ಪರಿಶೀಲನೆ ನಡೆಸಿದ ಎಲ್ಲ ಸಿಸಿಟಿವಿ ದೃಶ್ಯಗಳಲ್ಲಿ ಕೂಡ ಅಲ್ಪ ಸ್ವಲ್ಪ ಅಷ್ಟೇ ಮುಖ ಕಾಣುತ್ತಿದೆ. ಎಲ್ಲಾದರೂ ಒಂದು ಕಡೆ ಸಂಪೂರ್ಣ ಮುಖ ಕಾಣಿಸುತ್ತದೆಯೇ ಎಂದು ಪೊಲೀಸರು ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಹೀಗಾಗಿ ಪೊಲೀಸರು ಎರಡು ರೀತಿಯ ಮ್ಯಾಪಿಂಗ್ ನಡೆಸಿದ್ದಾರೆ. ಒಂದು ರಿವರ್ಸ್ ಮ್ಯಾಪಿಂಗ್, ಇನ್ನೊಂದು ಪಾರ್ವಡ್ ಮ್ಯಾಪಿಂಗ್. ಘಟನೆಗೂ ಮುನ್ನ ಆರೋಪಿ ಯಾವ ಮಾರ್ಗದಲ್ಲಿ, ಹೇಗೆ ಬಂದ? ಘಟನೆ ನಂತರ ಯಾವ ಮಾರ್ಗದಲ್ಲಿ ಹೇಗೆ ಹೋದ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಮೇಶ್ವರಂ ಕೆಫೆಯ ಸುತ್ತಮುತ್ತಲಿನ ಮೂರ್ನಾಲ್ಕು ಕಿಮೀ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳು, ಪ್ರಮುಖ ರಸ್ತೆಗಳನ್ನ ಕೂಡುವ ಸಣ್ಣ ರಸ್ತೆಗಳು, ಏರಿಯಾ ರಸ್ತೆಗಳ ಕುರಿತ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ. ಸಿಸಿಟಿವಿಗಳ ಪರಿಶೀಲನೆ ನಡೆಸಿ ರಸ್ತೆಗಳ ಉದ್ದಕ್ಕೂ ಶೋಧ ನಡೆಸಲಾಗುತ್ತಿದೆ.

ಈ ಮಧ್ಯೆ, ಮಂಗಳವಾ ರಾಷ್ಟ್ರೀಯ ತನಿಖಾ ದಳ ಘಟನೆಯ ತನಿಖೆಯ ಹೊಣೆಯನ್ನು ಅಧಿಕೃತವಾಗಿ ವಹಿಸಿಕೊಂಡಿದೆ. ಎನ್​ಐಎ ಅಧಿಕಾರಿಗಳು ರಾಮೇಶ್ವರಂ ಕೆಫೆ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಬಳಿ ಮಾಹಿತಿಯನ್ನೂ ಪಡೆದಿದ್ದಾರೆ. ಎನ್​ಐಎ ಕೂಡ ಆರೋಪಿಯ ಪತ್ತೆಗೆ ಬಲೆ ಬೀಸಲಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್‌ ಬೇಟೆಗಾಗಿ ಪೊಲೀಸರ ತಲಾಶ್: ಶಂಕಿತನ ಮತ್ತೊಂದು ದೃಶ್ಯ ಲಭ್ಯ, ಇಲ್ಲಿದೆ ಪ್ರಕರಣದ ಸಮಗ್ರ ಮಾಹಿತಿ

ಮತ್ತೊಂದೆಡೆ, ಘಟನೆ ಸಂಭವಿಸಿ ವಾರವೇ ಸಮೀಪಿಸುತ್ತಾ ಬಂದರೂ ಆರೋಪಿಯ ಜಾಡು ಹಿಡಿಯಲು ಪೊಲೀಸರಿಗೆ ಸಾಧ್ಯವಾಗದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಷ್ಟೊಂದು ಗಂಭೀರ ಪ್ರಕರಣದಲ್ಲಿಯೂ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಇನ್ನಿತರ ವ್ಯವಸ್ಥೆ ಗಳಿದ್ದರೂ ದೇಶದ ಭದ್ರತೆಗೆ ಸಂಬಂಧಿಸಿದ ಅಹಿತಕರ ಘಟನೆ ಸಂಭವಿಸಿದಾಗ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲು ಇಷ್ಟೊಂದು ಸಮಯ ಬೇಕೇ ಎಂದು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ