ರಾಮೇಶ್ವರಂ ಕೆಫೆ ಬಾಂಬರ್ ಬೇಟೆಗಾಗಿ ಪೊಲೀಸರ ತಲಾಶ್: ಶಂಕಿತನ ಮತ್ತೊಂದು ದೃಶ್ಯ ಲಭ್ಯ, ಇಲ್ಲಿದೆ ಪ್ರಕರಣದ ಸಮಗ್ರ ಮಾಹಿತಿ
Rameshwaram Cafe Bomb Blast Casse: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಚುರುಕುಗೊಳಿಸಲಾಗಿದೆ. ಆದರೆ, ಮೂರು ದಿನ ಕಳೆದರೂ ಆರೋಪಿಯ ಪತ್ತೆ ಮಾಡುವುದು ಪೊಲೀಸರಿಂದ ಸಾಧ್ಯವಾಗಿಲ್ಲ. ಮತ್ತೊಂದೆಡೆ, ಶಂಕಿತ ಉಗ್ರನ ಮತ್ತೊಂದು ದೃಶ್ಯ ಟಿವಿ9ಗೆ ಲಭ್ಯವಾಗಿದೆ. ಸ್ಫೋಟದ ಹಿಂದೆ ಐಎಸ್ಐಎಸ್ ಕೈವಾಡ ಇದೆಯೇ ಎಂಬ ಅನುಮಾನವೂ ಇದೀಗ ವ್ಯಕ್ತವಾಗಿದೆ.
ಬೆಂಗಳೂರು, ಮಾರ್ಚ್ 4: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಸ್ಫೋಟ (Bomb Blast) ಸಂಭವಿಸಿ ಮೂರು ದಿನ ಕಳೆಯುತ್ತಾ ಬರುತ್ತಿದೆ. ಹೀಗಿದ್ದರೂ ಇನ್ನೂ ಬಾಂಬ್ ಇಟ್ಟ ಆರೋಪಿಯ ಬಂಧನವಾಗಿಗಿಲ್ಲ. ಪೊಲೀಸರು (Karnataka Police) ತಂಡೋಪ ತಂಡವಾಗಿ ಶೋಧ ಮಾಡಿದ್ದೇ ಬಂತು, ಶಂಕಿತರನ್ನು ಕರೆತಂದು ವಿಚಾರಣೆ ಮಾಡಿದ್ದೇ ಬಂತು ಹೊರತು. ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಮಧ್ಯೆ ಶಂಕಿತ ಉಗ್ರನ ಮತ್ತೊಂದು ಸಿಸಿಟಿವಿ ದೃಶ್ಯ ‘ಟಿವಿ9’ಗೆ ಲಭ್ಯವಾಗಿದೆ. ಅತ್ತ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ಹೂಡಿ ಪರಾರಿಯಾಗಿದ್ದನೋ, ಅದೇ ಶಂಕಿತ ಬಾಂಬರ್ ಮತ್ತೊಂದು ಸಿಸಿಟಿವಿ ಫೂಟೇಜ್ನಲ್ಲೂ ಸೆರೆಯಾಗಿದ್ದಾನೆ. ಬಸ್ನಿಂದ ಇಳಿದು ಮುಂದೆ ಹೋಗುವ ದೃಶ್ಯ ‘ಟಿವಿ9’ಗೆ ಲಭ್ಯವಾಗಿದೆ. ಶುಕ್ರವಾರ ಬೆಳಗ್ಗೆ 11 ಗಂಟೆ 10 ನಿಮಿಷಕ್ಕೆ ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಬಂದಿದ್ದ ಶಂಕಿತ ಉಗ್ರ, ರಾಮೇಶ್ವರಂ ಕೆಫೆಯ ಬಳಿ ಬಸ್ ನಿಲ್ದಾಣದಲ್ಲಿ ಇಳಿದು ಕೆಫೆಗೆ ತೆರಳಿ ಬಾಂಬ್ ಇಟ್ಟು ಬಂದಿದ್ದ. ಆದರೆ ಬಾಂಬ್ ಇಟ್ಟಾದಮೇಲೆ ಮಾರ್ಗ ಬದಲಿಸಿದ್ದ ಆತ, ಬೇರೆ ಮಾರ್ಗವಾಗಿ ತೆಳಿದ್ದ.
ಮೂರು ದಿನ ಕಳೆಯುತ್ತಾ ಬಂದರೂ ಪತ್ತೆಯಾಗ ಬಾಂಬರ್!
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಆದರೆ ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಸ್ಫೋಟ ಮಾಡಿದ್ದು ಇವನೇ ಅಂತ ಸಿಸಿಟಿವಿ ದೃಶ್ಯದ ಮೂಲಕ ತಿಳಿದು ಬರ್ತಿದ್ದಂತೆ, ಸಿಸಿಬಿ ಹಾಗೂ ಇಂಜೆಲಿಜನ್ಸ್ ಅಧಿಕಾರಿಗಳ ತಂಡ ಆರೋಪಿಯ ಪತ್ತೆಗೆ ಫೀಲ್ಡ್ಗೆ ಇಳಿದಿದ್ದರು. ಇದೀಗ ಕೆಫೆಯಲ್ಲಿ ಮತ್ತೆ ಸ್ಥಳ ಮಹಜರು ಮಾಡಿದ್ದಾರೆ. ಸಿಸಿಬಿ ತನಿಖಾಧಿಕಾರಿ ನವೀನ್ ಕುಲಕರ್ಣಿ ನೇತೃತ್ವದ ತಂಡ ಬಾಂಬರ್ ಎಂಟ್ರಿಯಾದ ಸ್ಥಳ, ಓಡಾಡಿದ್ದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಒಂದು ಸಾವಿರಕ್ಕೂ ಅಧಿಕ ಸಿಸಿಟಿವಿ ದೃಶ್ಯಗಳ ಪರಿಶೀಲನೆ
ಆರೋಪಿ ಬಾಂಬ್ ಇಟ್ಟ ಬಳಿಕ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಅನ್ನೋ ಸುಳಿವಿಲ್ಲ. ಹೀಗಾಗಿ ರಾಮೇಶ್ವರಂ ಕೆಫೆಯಿಂದ ತಮಿಳುನಾಡು ಬಾರ್ಡರ್ ವರೆಗಿನ ಹಾಗೂ ಕೆಫೆಯಿಂದ ವೈಟ್ ಫೀಲ್ಡ್ ಮಾರ್ಗದಲ್ಲಿ ಚೆನ್ನಸಂದ್ರ, ಸರ್ಜಾಪುರ ಮಾರ್ಗದಲ್ಲಿ ಸಾವಿರಕ್ಕು ಹೆಚ್ಚು ಸಿಸಿಟಿವಿಗಳನ್ನ ಸರ್ಚ್ ಮಾಡಲಾಗಿದ್ದು, ಯಾವುದೇ ಸುಳಿವು ಸಿಗದೇ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.
8 ತಂಡ, 6 ಆಯಾಮ: ಶಂಕಿತನಿಗಾಗಿ ತೀವ್ರಗೊಂಡ ಶೋಧ
ಬಾಂಬ್ ಇಟ್ಟು ಹೋದ ಶಂಕಿತ ಉಗ್ರನ ಬೇಟೆಗಾಗಿ ಪೊಲೀಸರ 8 ತಂಡ ತಲಾಶ್ ನಡೆಸುತ್ತಿದೆ. 6 ಆಯಾಮದಲ್ಲಿ ಆರೋಪಿಯ ಜಾತಕ ಜಾಲಾಡುತ್ತಿರುವ ಖಾಕಿ, ನೆರೆ ರಾಜ್ಯದಲ್ಲಿ ಶಂಕಿತನ ಹೆಜ್ಜೆ ಗುರುತು ಕೆದಕುತ್ತಿದೆ. ರಾಮೇಶ್ವರಂ ಕೆಫೆಗೆ ಬಂದ ದಾರಿ, ಕೆಫೆಯಿಂದ ಹೋದ ದಾರಿ, ಎಷ್ಟು ಗಂಟೆಗೆ ಬಂದ, ಹೇಗೆ ಬಂದ? ಯಾರಾದರೂ ಡ್ರಾಪ್ ಮಾಡಿದರಾ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ತನಿಖೆ ಕುರಿತು ಭಾನುವಾರ ಮಹತ್ವದ ಸಭೆ ನಡೆಸಿದ ಗೃಹ ಸಚಿವ ಡಾಜಿ ಪರಮೇಶ್ವರ್, ಅಧಿಕಾರಿಗಳಿಂದ ತನಿಖೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಸಭೆ ಬಳಿಕ ಮಾತನಾಡಿದ ಸಚಿವರು, ಆರೋಪಿ ಬಗ್ಗೆ ಕುರುಹು ಸಿಕ್ಕಿದೆ. ಶೀಘ್ರವೇ ಬಂಧನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಟಿವಿ9’ಗೆ ಸಿಕ್ಕಿರುವ ಮತ್ತೊಂದು ವಿಡಿಯೋ ಇಲ್ಲಿದೆ
2-3 ಬಸ್ ಬದಲಿಸಿ ನೆರೆ ರಾಜ್ಯಕ್ಕೆ ಆರೋಪಿ ಪರಾರಿ ಶಂಕೆ
ಬೆಂಗಳೂರು ಪೊಲೀಸರು, ಸಿಸಿಬಿ, ಡಾ.ಜಿ ಪರಮೇಶ್ವರ್ ಸೇರಿದಂತೆ ಇಡೀ ಗೃಹ ಇಲಾಖೆಯೇ ಆರೋಪಿಯನ್ನ ಆದಷ್ಟು ಬೇಗ ಬಂಧಿಸೋ ವಿಶ್ವಾಸದಲ್ಲಿದೆ. ಯಾಕಂದ್ರೆ, ಕೆಫೆಗೆ ಹೇಗೆ ಬಂದ, ಕೆಫೆಯಿಂದ ಹೇಗೆ ಹೋದ ಅನ್ನೋ ಪ್ರಾಥಮಿಕ ಮಾಹಿತಿಯನ್ನ ಕಲೆಹಾಕಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಹೃದಯ ಭಾಗಬಿಟ್ಟು ಗಡಿ ಭಾಗದಲ್ಲೇ ಬಾಂಬ್ ಇಟ್ಟಿದ್ಯಾಕೆ? ಕೆಫೆ ಸ್ಫೋಟದ ಸಂಚಿನ ರಹಸ್ಯ ಬಯಲು!
ರಾಮೇಶ್ವರಂ ಕೆಫೆಯಿಂದ 1 ಕಿಲೋ ಮೀಟರ್‌ವರೆಗಿನ ಸಿಸಿಕ್ಯಾಮರಾ ಪರಿಶೀಲನೆ ನಡೆಸಿದ ಪೊಲೀಸರಿಗೆ 1 ಕಿಲೋ ಮೀಟರ್ ದೂರದಲ್ಲಿ ಅಂದ್ರೆ, ಗ್ರಾಫೈಟ್ ಇಂಡಿಯಾ ಸರ್ಕಲ್‌ನಲ್ಲಿ ಆರೋಪಿಯ ಚಲನವಲನ ಸಿಕ್ಕಿದೆ. ಆದ್ರೆ, ಗ್ರಾಫೈಟ್ ಸರ್ಕಲ್‌ಗೆ ಆರೋಪಿ ಬಂದಿದ್ದೇಗೆ? ಬಸ್‌ನಲ್ಲಿ ಬಂದ್ನಾ? ಯಾವ ವಾಹನದಲ್ಲಿ ಬಂದ? ಯಾರಾದ್ರು ಡ್ರಾಪ್ ಮಾಡಿದ್ರಾ? ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬಾಂಬ್ ಇಟ್ಟ ಬಳಿಕ ಬಂದ ದಾರಿಯಲ್ಲಿ ವಾಪಸ್ ಹೋಗದ ಆರೋಪಿ, ಬದಲಾಗಿ ಮಾರತ್‌ಹಳ್ಳಿ ವೈಟ್ ಫೀಲ್ಡ್ ಮುಖ್ಯರಸ್ತೆ ಕಡೆಗೆ ಹೋಗಿದ್ದಾನೆ. 100 ಮೀಟರ್ ನಡೆದುಕೊಂಡು ಹೋಗಿ ಬಸ್ ಏರಿರುವ ಆರೋಪಿ, ವೈಟ್‌ಫೀಲ್ಡ್ ಮುಖ್ಯರಸ್ತೆಯಲ್ಲಿ ಬಸ್ ಇಳಿದಿದ್ದಾನೆ. ಇದಾದ ನಂತ್ರ ಮತ್ತೆ ಯಾವ ಮಾರ್ಗದಲ್ಲಿ ಹೋಗಿದ್ದಾನೆಂಬ ಮಾಹಿತಿ ಗೊತ್ತಾಗಿಲ್ಲ. ಯಾಕಂದ್ರೆ, ಮಾರ್ಗ ಮಧ್ಯೆ ಶರ್ಟ್ ಮತ್ತು ಪ್ಯಾಂಟ್ ಬದಲಿಸಿ ಹೋಗಿರೋ ಅನುಮಾನವೂ ಇದೆ.
ಪರಾರಿಯಾಗಲು ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಬಾಂಬ್ ಇಟ್ಟಿದ್ದ ಶಂಕಿತ!
ರಾಮಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಬಾಂಬರ್ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಬಾಂಬ್ ಇಟ್ಟಿದ್ದಾನೆ ಎಂಬುದು ಗೊತ್ತಾಗಿದೆ. ಒಂದೂವರೆ ಗಂಟೆ ಟೈಂ ಗ್ಯಾಪ್ ಇಟ್ಟುಕೊಂಡೇ ಬಾಂಬ್‌ಗೆ ಟೈಮ್ ಫಿಕ್ಸ್ ಮಾಡಿದ್ದಾನೆ. ಪೊಲೀಸರ ತನಿಖೆ ಹೇಗಿರುತ್ತದೆ ಎಂಬುದನ್ನು ತಿಳಿದುಕೊಂಡೇ ಶಂಕಿತ ಉಗ್ರ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಕರ್ನಾಟಕ ಗಡಿ ದಾಟಲು ಒಂದೂವರೆ ಗಂಟೆ ಟೈಂ ಫಿಕ್ಸ್ ಮಾಡಿಕೊಂಡೇ ಕೃತ್ಯ ಎಸಗಿದ್ದಾನೆಯೇ ಎಂಬ ಅನುಮಾನ ಶುರುವಾಗಿದೆ. ಯಾಕಂದರೆ, ಕೆಫೆಯಿಂದ ಹೊಸೂರು ಬಾರ್ಡರ್‌ಗೆ 59 ನಿಮಿಷಕ್ಕೆ ಹೋಗಬಹುದು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಟೈಮರ್ ಫಿಕ್ಸ್ ಮಾಡಿ ಸ್ಪೋಟಿಸಲು ಬಳಿಸಿದ್ದ ಕೆಮಿಕಲ್ಸ್ ಪತ್ತೆ
ಹೀಗಾಗಿ ಸ್ಫೋಟದ ಟೈಮ್‌ಗೆ ಸರಿಯಾಗಿ ಒಂದೂವರೆ ಗಂಟೆಗೂ ಮುನ್ನ ಕೆಫೆಗೆ ಎಂಟ್ರಿ ಕೊಟ್ಟು ಕೆಲಸ ಮುಗಿಸಿರೋ ಸಾಧ್ಯತೆ ಇದೆ. ಆತ ಅಲ್ಲಿಂದ ಪರಾರಿಯಾದ ಆದ ಒಂದೂವರೆ ಗಂಟೆ ಬಳಿಕ ಕೆಫೆಯಲ್ಲಿ ಮಧ್ಯಾಹ್ನ 12.55ಕ್ಕೆ ಬಾಂಬ್ ಸ್ಫೋಟ ಆಗಿದೆ. ಪರಾರಿಯಾಗರಲು ಸಮಯ ನಿಗದಿ ಮಾಡಿಕೊಂಡೇ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಫೋಟ ಸಂಭವಿಸಿದ ಸ್ಥಳಕ್ಕೆ ಬಂದು ನಂತರ ನಾಕಾಬಂಧಿ ಹಾಕುವ ಮೊದಲೇ ನೆರೆ ರಾಜ್ಯಕ್ಕೆ ಪರಾರಿಯಾಗುವುದು ಆರೋಪಿಯ ಪ್ಲ್ಯಾನ್ ಆಗಿತ್ತು ಎಂದು ಶಂಕಿಸಲಾಗಿದೆ.
ಐಎಸ್ಐಎಸ್ ಕೈವಾಡದ ಸಾಧ್ಯತೆ ಬಗ್ಗೆಯೂ ತನಿಖೆ
ಕೆಫೆ ಬಾಂಬ್ ಬ್ಲಾಸ್ಟ್‌ನ ಮತ್ತಷ್ಟು ರಹಸ್ಯಗಳು ಬಯಲಾಗಿವೆ. ಸ್ಥಳೀಯವಾಗಿ ಸಿಗುವ ಪೊಟ್ಯಾಷಿಯಂ ನೈಟ್ರೆಟ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಬಳಕೆ ಮಾಡಿ ಬಾಂಬ್ ತಯಾರಿಸಿರೋ ಶಂಕೆ ಇದೆ. ಚರ್ಚ್‌ಸ್ಟ್ರೀಟ್ ಬ್ಲಾಸ್ಟ್ ಕೇಸ್, ಮಂಗಳೂರು ಕುಕ್ಕರ್ ಕೇಸ್‌ನಲ್ಲೂ ಒಬ್ಬನೇ ಬಾಂಬ್ ಇಟ್ಟಿದ್ದಾನೆ. ಇದೇ ಮಾದರಿಯಲ್ಲೇ ರಾಮಶ್ವರಂ ಕೆಫೆಯಲ್ಲೂ ಒಬ್ಬನೇ ಬಾಂಬ್ ಇಟ್ಟಿರೋದ್ರಿಂದ ಸ್ಫೋಟದ ಹಿಂದೆ ಐಎಸ್ಐಎಸ್ ನೆರಳು ಏನಾದ್ರೂ ಇದೆಯಾ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಇದರ ಜೊತೆಗೆ ಕಳೆದ ಎರಡು ವರ್ಷದಲ್ಲಿ 20ಕ್ಕೂ ಹೆಚ್ಚು ಬಾರಿ ಬೆದರಿಕೆ ಇ-ಮೇಲ್‌ಗಳು ಬಂದಿದೆ. ಈ ಬೆದರಿಕೆ ಇ-ಮೇಲ್‌ಗಳಿಗೂ ಬಾಂಬ್ ಇಟ್ಟವನಿಗೂ ಲಿಂಕ್ ಇದ್ಯಾ ಅನ್ನೋ ಬಗ್ಗೆಯೂ ತನಿಖೆ ನಡೆಸಲಾಗ್ತಿದೆ. ಒಂದ್ವೇಳೆ ಆರೋಪಿ ಪತ್ತೆಯಾಗದಿದ್ರೆ ರೇಖಾಚಿತ್ರ ಬಿಡುಗಡೆಗೂ ಪ್ಲ್ಯಾನ್ ಮಾಡಿದ್ದಾರೆ.
ವರದಿ: ಶಿವಪ್ರಸಾದ್, ರಾಚಪ್ಪ, ಜಗದೀಶ್ ‘ಟಿವಿ9’ ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ