ಮಕ್ಕಳ ಆರೈಕೆ ಫುಲ್ ಟೈಮ್ ಕೆಲಸ, ಗಂಡ ಪತ್ನಿಗೆ ಹಣ ನೀಡಬೇಕು – ಕರ್ನಾಟಕ ಹೈಕೋರ್ಟ್
ಹೆಂಡತಿ ದುಡಿಯಲು ಅರ್ಹರಿದ್ದರೂ ಮಕ್ಕಳ ಆರೈಕೆಗಾಗಿ ಕೆಲಸ ಬಿಟ್ಟು ದಿನ ಪೂರ್ತಿ ಮಕ್ಕಳನ್ನು ನೋಡಿಕೊಳ್ಳುವ ಹೆಂಡತಿಗೆ ಪತಿ ಜೀವನಾಂಶದಂತೆ ಪ್ರತಿ ತಿಂಗಳು ಸಂಬಳ ನೀಡಬೇಕು ಎಂದು ಕರ್ನಾಟಕ ಹೈ ಕೋರ್ಟ್ ತಿಳಿಸಿದೆ. ಮಾಸಿಕ 36,000 ರೂ. ಪಾವತಿಸುವಂತೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಸೂಚಿಸಿದ್ದಾರೆ.
ಬೆಂಗಳೂರು, ಮಾರ್ಚ್.04: ತನ್ನ ಮಕ್ಕಳನ್ನು ನೋಡಿಕೊಳ್ಳಲು ಪತ್ನಿ ಉಪನ್ಯಾಸಕ ಹುದ್ದೆ ತೊರೆಯುವಂತೆ ಮಾಡಿದ ಪತಿಯ ವಾದವನ್ನು ತಳ್ಳಿಹಾಕಿರುವ ಕರ್ನಾಟಕ ಹೈಕೋರ್ಟ್ (High Court) ಪತಿ ತನ್ನ ಪತ್ನಿಗೆ ಮಾಸಿಕ 36,000 ರೂ. ಜೀವನಾಂಶ ನೀಡುವಂತೆ ಸೂಚಿಸಿದೆ. ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಪತಿಗೆ ಮಾಸಿಕ 36,000 ರೂ. ಪಾವತಿಸುವಂತೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಸೂಚಿಸಿದ್ದಾರೆ.
2023ರ ಜೂನ್‌ನಲ್ಲಿ ಆನೇಕಲ್‌ನ ಸೆಷನ್ಸ್ ನ್ಯಾಯಾಲಯವು ಪತ್ನಿಗೆ 18,000 ರೂ. ಪಾತವಿಸುವಂತೆ ಹೇಳಿತ್ತು. ಬಳಿಕ 41 ವರ್ಷದ ಮಹಿಳೆ ತನಗೆ ಮತ್ತು ತನ್ನಿಬ್ಬರು ಇಬ್ಬರು ಮಕ್ಕಳಿಗೆ ತಿಂಗಳಿಗೆ 36,000 ರೂ. ನೀಡುವಂತೆ ಕೇಳಿದ್ದರು. ಜೀವನ ವೆಚ್ಚಕ್ಕೆ ಅನುಗುಣವಾಗಿ ಅಥವಾ ಪತಿಯೊಂದಿಗೆ ಜೀವನ ಮುಂದುವರಿಸಿದರೆ ಜೀವನಾಂಶವನ್ನು ಪತ್ನಿ ಮತ್ತು ಮಕ್ಕಳಿಗೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ಪತ್ನಿ ಕೆಲಸ ಮಾಡಲು ಅರ್ಹಳಾಗಿದ್ದಾಳೆ ಎಂಬ ಪತಿಯ ವಾದದ ಆಧಾರದ ಮೇಲೆ ತಿಂಗಳಿಗೆ ಕೇವಲ 18,000 ರೂ.ಗಳನ್ನು ಜೀವನಾಂಶವಾಗಿ ನೀಡಿ ಎಂದು ಆದೇಶ ನೀಡಿದ್ದ ಸೆಷನ್ಸ್ ನ್ಯಾಯಾಲಯದ ಹಿಂದಿನ ತೀರ್ಪಿನಲ್ಲಿ ದೋಷವಿದೆ ಎಂದು ನ್ಯಾಯಾಲಯ ಹೇಳಿದೆ. ಹೆಂಡತಿಯು ಸೋಮಾರಿಯಾಗಿದ್ದಾಳೆ. ಹೀಗಾಗಿ ಆಕೆ ಕೆಲಸಕ್ಕೆ ಹೋಗುತ್ತಿಲ್ಲ ಎಂಬ ಪತಿಯ ವಾದವನ್ನು ಉಲ್ಲೇಖಿಸಿದ ನ್ಯಾಯಾಲಯ, ಇದು ಅಸಂಬದ್ಧವಾಗಿದೆ. ಹೆಂಡತಿ ಅರ್ಹತೆ ಹೊಂದಿರುವುದರಿಂದ, ಯಾವುದೇ ಜೀವನಾಂಶವನ್ನು ಪಡೆಯಲು ಹೆಂಡತಿ ಅನರ್ಹ ಎಂದು ಹೇಳಲಾಗುವುದಿಲ್ಲ. ಪ್ರತಿ ಪ್ರಕರಣವನ್ನು ಅರ್ಹತೆಯ ಮೇಲೆ ಪರಿಗಣಿಸಬೇಕು. ಹೆಂಡತಿ, ಗೃಹಿಣಿ ಮತ್ತು ತಾಯಿಯಾಗಿ, ವಿಶ್ರಾಂತಿ ಇಲ್ಲದೆ ಗಡಿಯಾರದಂತೆ ಕೆಲಸ ಮಾಡುತ್ತಾಳೆ. ಅದರಲ್ಲೂ ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣ ಸಮಯದ ಕೆಲಸ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಕೋರ್ಟ್ ಸೂಚನೆಯಂತೆ ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತ ಸಮಿತಿ ಅಧ್ಯಕ್ಷರನ್ನ ನೇಮಿಸಿದ ಸರ್ಕಾರ
ಹೆಂಡತಿ ತನ್ನ ಕರ್ತವ್ಯಗಳನ್ನು ಪೂರೈಸುತ್ತಿಲ್ಲ. ಆಕೆ ಜಗಳವಾಡುತ್ತಿದ್ದಳು ಮತ್ತು ನನ್ನ ಉದ್ಯೋಗ ಭದ್ರತೆಯು ಅಸ್ಥಿರವಾಗಿದೆ ಎಂದು ಪತಿ ವಾದಿಸಿದರು. ಪತಿ ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು, ಮ್ಯಾನೇಜರ್ ಕೇಡರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕೆಲಸವನ್ನು ಖಾಸಗಿ ಉದ್ಯೋಗಗಳಂತೆ ದಿಢೀರನೆ ಕೆಲಸದಿಂದ ತೆಗೆದು ಹಾಕಲಾಗುವುದಿಲ್ಲ. ಕೆಲಸದ ಅಭದ್ರತೆ ಎಂದು ಹೇಳಿರುವ ಪತಿಯ ವಾದ ತಪ್ಪುದಾರಿಗೆಳೆಯುವ ಮತ್ತು ಕಿಡಿಗೇಡಿತನವಾಗಿದೆ ಎಂದು ನ್ಯಾಯಾಲಯವು ತಿಳಿಸಿದೆ. ಕರ್ತವ್ಯನಿಷ್ಠ ತಾಯಿಯು ಕರ್ತವ್ಯನಿಷ್ಠ ಹೆಂಡತಿಗಿಂತ ಉನ್ನತ ಸ್ಥಾನದಲ್ಲಿದ್ದಾಳೆ ಎಂದು ನ್ಯಾಯಾಲಯವು ಗಮನಿಸಿದೆ. ಮೊದಲ ಮಗುವಿನ ಜನನದ ನಂತರ, ಮಹಿಳೆಗೆ ತನ್ನ ಕೆಲಸವನ್ನು ಬಿಡಲು ಕೇಳಲಾಯಿತು. ಎರಡನೇ ಮಗು ಜನಿಸಿದಾಗ, ಮಕ್ಕಳನ್ನು ನೋಡಿಕೊಳ್ಳಲು ಹೆಂಡತಿ ಸಂಪೂರ್ಣವಾಗಿ ಉದ್ಯೋಗವನ್ನು ತೊರೆದಳು.
ಸಂಬಂಧ ಹಳಸುವವರೆಗೂ ಎಲ್ಲವೂ ಚೆನ್ನಾಗಿತ್ತು. ಒಮ್ಮೆ ಜೀವನಾಂಶವನ್ನು ಕೇಳಿದಾಗ, ಹೆಂಡತಿಯು ಅರ್ಹಳಾಗಿದ್ದರೂ ಕೆಲಸ ಮಾಡಲು ಮತ್ತು ಹಣ ಸಂಪಾದಿಸಲು ಸಿದ್ಧಳಿಲ್ಲ ಮತ್ತು ಪತಿ ನೀಡುವ ಜೀವನಾಂಶದಲ್ಲಿ ಬದುಕಲು ಬಯಸುತ್ತಾಳೆ ಎಂದು ಪತಿ ಆರೋಪಿಸಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:40 am, Mon, 4 March 24