ಬೆಂಗಳೂರು: ಹೆದ್ದಾರಿಗಳಲ್ಲಿ ಅಪಘಾತಗಳು ಸಂಭವಿಸಿದಾಗ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಇನ್ನು ಮುಂದೆ ‘ರಾಸ್ತಾ’ (Rastha) ಕಾರ್ಯನಿರ್ವಹಿಸಲಿದೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಜೀವ ರಕ್ಷಾ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಾಸ್ತಾ ಅಭಿಯಾನಕ್ಕೆ ಗುರುವಾರ (ಮಾ. 09) ಚಾಲನೆ ನೀಡಲಾಗಿದೆ. ಇದರಡಿ ರಸ್ತೆ ಅಪಘಾತದ ವೇಳೆ ತುರ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಪೊಲೀಸರು, ಆಂಬ್ಯುಲೆನ್ಸ್ ಚಾಲಕರು ಮತ್ತು ನಾಗರಿಕರಿಗೆ ತರಬೇತಿ ನೀಡಲಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಜ್ಯದಾದ್ಯಂತ 9 ಜಿಲ್ಲೆಗಳಲ್ಲಿ 26 ಪ್ರಮುಖ ಅಪಘಾತ ಸ್ಥಳಗಳನ್ನು ಗುರುತಿಸಿದ್ದು, 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೂ ಈ ತರಬೇತಿ ನೀಡಲಾಗುತ್ತದೆ.
ರಸ್ತೆ ಮತ್ತು ಸಾರಿಗೆ ನಮ್ಮೆಲ್ಲರ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ರಸ್ತೆ ಬಳಸುತ್ತೇವೆ. ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಲಕ್ಷಾಂತರ ಜೀವಗಳನ್ನು ಕಳೆದುಕೊಳ್ಳಲಾಗುತ್ತಿದೆ. ಸಾಕಷ್ಟು ಜನರು ಗಂಭೀರ ಗಾಯಗಳಿಂದ ನರಳುವಂತಾಗುತ್ತಿದೆ. ಹಾಗಾಗಿ ಪೊಲೀಸರು, ಅಗ್ನಿ ಸುರಕ್ಷತಾ ಸಿಬ್ಬಂದಿ, ಆಂಬ್ಯುಲೆನ್ಸ್ ಚಾಲಕರು, ಆಸ್ಪತ್ರೆ ಸಿಬ್ಬಂದಿ ಮತ್ತು ಆಸಕ್ತ ನಾಗರಿಕರಿಗೆ ತರಬೇತಿ ನೀಡಲಾಗುತ್ತಿದೆ. ಆ ಮೂಲಕ ಸಾವಿರಾರು ಜೀವಗಳನ್ನು ಉಳಿಸುವ ಗುರಿಯನ್ನು ಈ ರಾಸ್ತಾ ಹೊಂದಿದೆ.
ಇದನ್ನೂ ಓದಿ: Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಕಿಲ್ಲರ್ ಹೈವೇ; ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ
ಅನೇಕ ಸಂದರ್ಭಗಳಲ್ಲಿ, ಗಾಯಾಳುಗಳು ಅತಿಯಾದ ರಕ್ತಸ್ರಾವ ಅಥವಾ ಶ್ವಾಸನಾಳದಲ್ಲಿ ಉಂಟಾಗುವ ಅಡೆತಡೆಗಳಿಂದ ಆಸ್ಪತ್ರೆಗೆ ತಲುಪುವ ಮುಂಚೆಯೇ ಮಾರ್ಗಮಧ್ಯೆದಲ್ಲಿ ಕೊನೆಯುಸಿರೆಳೆಯುತ್ತಾರೆ ಎಂದು ಜೀವ ರಕ್ಷಾ ಟ್ರಸ್ಟ್ ಕಾರ್ಯಕ್ರಮ ನಿರ್ದೇಶಕ ಡಾ.ಯೋಗೇಶ್ ಬಿ ತಿಳಿಸಿದರು. ಇನ್ನು ಅಪಘಾತವಾದ ಬಳಿಕ ಗಾಯಾಳುವಿನ ತಲೆ ಮತ್ತು ಕುತ್ತಿಗೆಯ ಭಾಗವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಜನರಿಗೆ ತರಬೇತಿ ನೀಡುವ ಅಗತ್ಯವಿದೆ. ಈ ತರಬೇತಿಯೂ ಸಂಪೂರ್ಣ ರಕ್ತಸ್ರಾವವನ್ನು ಹೇಗೆ ತಡೆಯಬೇಕು ಎಂಬುದರ ಮೇಲೆ ಗಮನ ಹರಿಸುತ್ತದೆ. ಈ ಸರಳ ವಿಧಾನಗಳನ್ನು ಪಾಲಿಸುವ ಮೂಲಕ ಅಪಘಾತಕ್ಕೊಳಗಾದವರ ಜೀವವನ್ನು ಉಳಿಸಬಹುದಾಗಿದೆ ಎಂದರು.
ಮಂಡ್ಯ, ಮೈಸೂರು, ಹುಬ್ಬಳ್ಳಿ-ಧಾರವಾಡ, ತುಮಕೂರು, ದಾವಣಗೆರೆ, ಬೆಳಗಾವಿ, ಕಲಬುರಗಿ ಮತ್ತು ಮಂಗಳೂರು ಜಿಲ್ಲೆ ಇವು 2022 ರಲ್ಲಿ ಸಚಿವಾಲಯವು ಗುರುತಿಸಿರುವ ಪ್ರಮುಖ ಅಪಘಾತ ಹಾಟ್ಸ್ಪಾಟ್ಗಳಾಗಿವೆ. ‘ರಾಸ್ತಾ’ ಮೂಲಕ ಪ್ರತಿ ಪ್ರಮುಖ ಅಪಘಾತ ಸ್ಥಳಗಲ್ಲಿ 160 ನುರಿತ ಪ್ರತಿಸ್ಪಂದಕರು ಮತ್ತು 60 ತರಬೇತಿ ಪಡೆದ ಆಸ್ಪತ್ರೆ ಸಿಬ್ಬಂದಿಗಳನ್ನು ನೀಯೋಜಿಸಲಾಗಿರುತ್ತದೆ. ಜೊತೆಗೆ ಪಾಲಿಟ್ರಾಮಾ ಸಂತ್ರಸ್ತರನ್ನು ನಿರ್ವಹಿಸುವಲ್ಲಿ ಎರಡು ಸರ್ಕಾರಿ-ಸಂಯೋಜಿತ ಆಘಾತ ಕೇಂದ್ರಗಳು ಉದ್ದೇಶಿತ, ಸಿಬ್ಬಂದಿ ತರಬೇತಿ ಅವಧಿಗಳನ್ನು ಹೊಂದಿರುತ್ತವೆ.
ಇದನ್ನೂ ಓದಿ: BMTC: ಮಹಿಳಾ ದಿನಾಚರಣೆಯಂದು ಫ್ರೀಯಾಗಿ ಎಷ್ಟು ಮಹಿಳೆಯರು ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಿದರು? ಇಲ್ಲಿದೆ ಅಂಕಿ-ಸಂಖ್ಯೆ
ಅಪಘಾತ ಸಂಭವಿಸಿದ ತಕ್ಷಣ ಹತ್ತಿರದ ಆಸ್ಪತ್ರೆಗೆ ಮಾಹಿತಿ ನೀಡಲಾಗುತ್ತದೆ. ಇದರಿಂದ ಅಪಘಾತಕ್ಕೀಡಾದವರನ್ನು ದಾಖಲಿಸಿಕೊಂಡು ಚಿಕಿತ್ಸೆ ಪ್ರಾರಂಭಿಸಲು ಸುಲಭವಾಗುತ್ತದೆ. ಮತ್ತು ಆಂಬ್ಯುಲೆನ್ಸ್ ನೇರವಾಗಿ ಆಘಾತ ಸ್ಥಳಕ್ಕೆ ತಲಪುತ್ತದೆ. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಮಾತನಾಡಿ, ಕರ್ನಾಟಕವು ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಸುಮಾರು 4,000 ಜೀವಗಳನ್ನು ಕಳೆದುಕೊಳ್ಳುತ್ತಿದೆ. ಈ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.
ರಸ್ತೆ ಅಪಘಾತಗಳ ಸಂತ್ರಸ್ತರಿಗೆ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡುವಲ್ಲಿ ನಮ್ಮ ಆರೋಗ್ಯ ಇಲಾಖೆಯ ಪ್ರಯತ್ನಗಳಿಗೆ ರಾಸ್ತಾ ಸಹಾಯ ಮಾಡುತ್ತದೆ. ಸಮಯೋಚಿತ ಮಧ್ಯಪ್ರವೇಶದಿಂದ, ರಸ್ತೆ ಅಪಘಾತಗಳಲ್ಲಿ ಮೃತಪಡುವ ಅಮೂಲ್ಯ ಜೀವಗಳನ್ನು ನಾವು ಉಳಿಸಬಹುದಾಗಿದೆ ಎಂದು ಆರೋಗ್ಯ ಆಯುಕ್ತ ರಂದೀಪ್ ಡಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:56 pm, Fri, 10 March 23