ಆಸ್ಪತ್ರೆಯಲ್ಲಿ ಹೆಣಕ್ಕೂ ಇಲ್ವಾ ರಕ್ಷಣೆ, ಶವಾಗಾರದಲ್ಲಿನ ಮೃತದೇಹವನ್ನು ಕಚ್ಚಿ ತಿಂದ ಇಲಿಗಳು

| Updated By: ವಿವೇಕ ಬಿರಾದಾರ

Updated on: Nov 13, 2024 | 8:12 AM

ಬದುಕಿರುವಾಗ ಬಿಡಿ ಸತ್ತ ನಂತರ ಹೆಣಕ್ಕೂ ರಕ್ಷಣೆ ಇಲ್ಲ ಎನ್ನುವಂತಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಶವಾಗಾರದಲ್ಲಿ ಇಲಿಗಳು ಮೃತದೇಹವನ್ನು ಕಚ್ಚಿ ತಿಂದಿವೆ. ಹಾಗಿದ್ದರೆ, ಅದ್ಯಾವ ಆಸ್ಪತ್ರೆ? ನಡೆದಿರುವ ಘಟನೆ ಏನು? ಈ ಸ್ಟೋರಿ ಓದಿ.

ಆಸ್ಪತ್ರೆಯಲ್ಲಿ ಹೆಣಕ್ಕೂ ಇಲ್ವಾ ರಕ್ಷಣೆ, ಶವಾಗಾರದಲ್ಲಿನ ಮೃತದೇಹವನ್ನು ಕಚ್ಚಿ ತಿಂದ ಇಲಿಗಳು
ಅಂಬೇಡ್ಕರ್​ ಆಸ್ಪತ್ರೆ
Follow us on

ಬೆಂಗಳೂರು, ನವೆಂಬರ್​ 13: ಬದುಕಿರುವಾಗ ಬಿಡಿ ಸತ್ತ ನಂತರವೂ ಹೆಣಕ್ಕೂ ರಕ್ಷಣೆ ಇಲ್ಲ ಎನ್ನುವಂತಾಗಿದೆ. ಬೆಂಗಳೂರಿನ (Bengaluru) ಕೆಜಿ ಹಳ್ಳಿಯ ಅಂಬೇಡ್ಕರ್ ಆಸ್ಪತ್ರೆಯ (Ambedkar Hospital) ಶವಾಗಾರದಲ್ಲಿನ ದೇಹಗಳನ್ನು ಇಲಿ ಕಚ್ಚಿ ತಿಂದಿದೆ. 37 ವರ್ಷದ ರಂಗಸ್ವಾಮಿ ಎಂಬುವರು ಹರ್ನಿಯಾ ಸಮಸ್ಯೆಯಿಂದ ಶೇಷಾದ್ರಿಪುರದ ಶ್ರೀ ಮಾರುತಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಸಮಸ್ಯೆಯಾಯ್ತು ಅಂತ ಅವರನ್ನು ಕೆಜಿ ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆಗೆ ಶಿಫ್ಟ್​​ ಮಾಡಲಾಗಿತ್ತು. ಆದರೆ, ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ರಂಗಸ್ವಾಮಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.

ನಂತರ ರಂಗಸ್ವಾಮಿ ಅವರ ಮೃತದೇಹವನ್ನು ಶವಾಗಾರದಲ್ಲಿ ಇಡಲಾಗಿತ್ತು. ದೇಹವನ್ನು ಕೋಲ್ಡ್ ಸ್ಟೋರೆಜ್​ನಲ್ಲಿ ಇಟ್ಟಿದ್ದರೂ ಇಲಿ ಮೃತದೇಹದ ಮೂಗು, ಕಣ್ಣಿನ ರೆಪ್ಪೆಯನ್ನು ತಿಂದಿದೆ.

ಈ ವಿಚಾರವಾಗಿ ಅಂಬೇಡ್ಕರ್ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಬಿ.ಎಸ್ ರಮೇಶ್ ಮಾತನಾಡಿ, ಶವಗಾರದ ಹಿಂದೆ ದೊಡ್ಡದಾದ ರಾಜಕಾಲುವೆ ಇದೆ. ಅಲ್ಲಿಂದ ಇಲಿಗಳು ಬಂದಿರಬಹುದು. ಇಲಿಗಳನ್ನು ನಿಯಂತ್ರಿಸಲು ಟೆಂಡರ್ ಕೊಟ್ಟಿದ್ದೀವಿ ಎಂದು ಹೇಳಿದರು.

ಪತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತ್ನಿ

ನನ್ನ ಪತಿಗೆ ವೈದ್ಯರು ಹೆವಿ ಡೋಸ್ ಇಂಜೆಕ್ಷನ್ ಕೊಟ್ಟಿದ್ದರಿಂದ ಅವರು ಮೃತಪಟ್ಟಿದ್ದಾರೆ. ಶ್ರೀ ಮಾರುತಿ ಆಸ್ಪತ್ರೆಯವರ ನಿರ್ಲಕ್ಷ್ಯದಿಂದಲೇ ನನ್ನ ಪತಿ ಸಾವಿಗೀಡಾಗಿದ್ದಾರೆ ಎಂದು ರಂಗಸ್ವಾಮಿ ಪತ್ನಿ ಸಂಗೀತ ಆರೋಪಿಸಿದರು.

ಈ ವಿಚಾರವಾಗಿ ಶ್ರೀ ಮಾರುತಿ ಆಸ್ಪತ್ರೆಯ ಅಡ್ಮಿನಿಸ್ಟ್ರೇಟರ್ ದೊರೈಸ್ವಾಮಿ ಮಾತನಾಡಿ, ನಮ್ಮ ಆಸ್ಪತ್ರೆಯ ಮಾಲೀಕರು ವಿದೇಶಕ್ಕೆ ಹೋಗಿದ್ದಾರೆ. ಮತ್ತು ರಂಗಸ್ವಾಮಿಗೆ ಚಿಕಿತ್ಸೆ ನೀಡಿದ ವೈದ್ಯರು ಆಸ್ಪತ್ರೆಗೆ ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ