Flypast: ಗಣರಾಜ್ಯೋತ್ಸವ ವಿಶೇಷ ವೈಮಾನಿಕ ಪ್ರದರ್ಶನ: ಅಪರೂಪದ ಫ್ಲೈಪಾಸ್ಟ್​ ಸಾಹಸದಲ್ಲಿ ಬೆಂಗಳೂರು ನಂಟಿನ ವಾಯುಪಡೆ ಅಧಿಕಾರಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 27, 2022 | 8:00 AM

Indian Air Force: ಈ ಅಪರೂಪದ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ  ಫ್ಲೈಟ್ ಲೆಫ್ಟಿನೆಂಟ್ ಕೆ.ನಿತೀಶ್ ಕುಮಾರ್ ಬೆಂಗಳೂರು ರೇವಾ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದದಲ್ಲಿ 2016ರಲ್ಲಿ ಪದವಿ ಪಡೆದಿದ್ದರು.

Flypast: ಗಣರಾಜ್ಯೋತ್ಸವ ವಿಶೇಷ ವೈಮಾನಿಕ ಪ್ರದರ್ಶನ: ಅಪರೂಪದ ಫ್ಲೈಪಾಸ್ಟ್​ ಸಾಹಸದಲ್ಲಿ ಬೆಂಗಳೂರು ನಂಟಿನ ವಾಯುಪಡೆ ಅಧಿಕಾರಿ
ಗಣರಾಜ್ಯೋತ್ಸವ ಪ್ರಯುಕ್ತ ವಾಯುಪಡೆಯ ವಿಶೇಷ ವೈಮಾನಿಕ ರಚನೆಯಲ್ಲಿ ಪಾಲ್ಗೊಂಡಿದ್ದ ಫ್ಲೈಟ್ ಲೆಫ್ಟಿನೆಂಟ್ ಕೆ.ನಿತೀಶ್ ಕುಮಾರ್
Follow us on

ಬೆಂಗಳೂರು: ದೆಹಲಿಯಲ್ಲಿ ಬುಧವಾರ (ಜ.26) ಗಣರಾಜ್ಯೋತ್ಸವ (Republic Day) ಪ್ರಯುಕ್ತ ನಡೆದ ವೈಮಾನಿಕ ಪ್ರದರ್ಶನ (Air Show) ‘75’ರಲ್ಲಿ ನಗರದ ರೇವಾ ವಿಶ್ವವಿದ್ಯಾಲಯದ (Reva University) ಹಳೆಯ ವಿದ್ಯಾರ್ಥಿಯೊಬ್ಬರು ಪಾಲ್ಗೊಂಡಿದ್ದರು. ತನ್ನ ಹಳೆಯ ವಿದ್ಯಾರ್ಥಿಯ ಈ ಸಾಧನೆಯನ್ನು ರೇವಾ ವಿಶ್ವವಿದ್ಯಾಲಯವು ಮಾಧ್ಯಮ ಹೇಳಿಕೆ ನೀಡಿ ಸ್ವಾಗತಿಸಿದೆ. ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ  ಫ್ಲೈಟ್ ಲೆಫ್ಟಿನೆಂಟ್ ಕೆ.ನಿತೀಶ್ ಕುಮಾರ್ (Flt Lt Nitheesh Kumar K) ರೇವಾ ವಿವಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದದಲ್ಲಿ 2016ರಲ್ಲಿ ಪದವಿ ಪಡೆದಿದ್ದರು. ಇವರ ಸಾಧನೆಯು ನಮಗೆ ಹೆಮ್ಮೆ ತಂದಿದೆ ಎಂದು ರೇವಾ ವಿವಿ ಕುಲಪಪಿ ಡಾ.ಪಿ.ಶ್ಯಾಮರಾಜು ತಿಳಿಸಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ವಿಶೇಷ ಕಾರ್ಯಕ್ರಮ ಸರಣಿಗೆ ಚಾಲನೆ ನೀಡುವುದನ್ನು ಸಾರಿ ಹೇಳಲು ಗಣರಾಜ್ಯೋತ್ಸವದಂದು ವಾಯುಪಡೆಯು ಈ ವಿಶೇಷ ವೈಮಾನಿಕ ರಚನೆಯನ್ನು ಆಯೋಜಿಸಿತ್ತು.

ಈ ಪ್ರದರ್ಶನದಲ್ಲಿ ಭಾರತೀಯ ವಾಯುಸೇನೆಯ ಯುದ್ಧವಿಮಾನಗಳು ‘75’ ಅಂಕಿಯ ಆಕಾರದ ರಚನೆ (ಫಾರ್ಮೇಶನ್) ಮಾಡಿದ್ದವು. ಈ ರಚನೆಯಲ್ಲಿ ಪಾಲ್ಗೊಂಡಿದ್ದ ವಿಮಾನಗಳ ಪೈಕಿ ಒಂದನ್ನು ನಿತೀಶ್​ ಕುಮಾರ್ ನಿರ್ವಹಿಸಿದ್ದರು. ‘ಇದು ನಮ್ಮ ಇಡೀ ಸಂಸ್ಥೆಗೆ ಅತ್ಯಂತ ಹೆಮ್ಮೆಯ ಕ್ಷಣ. ಇಂತಹ ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ಸಂಸ್ಥೆಯಲ್ಲಿ ಕಲಿಯುತ್ತಿರುವ ಹಾಗೂ ಮುಂದಿನ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ’ ಎಂದು ಕುಲಪತಿ ಶ್ಯಾಮರಾಜು ಹೇಳಿದ್ದಾರೆ.

ರೋಮಾಂಚಕಾರಿ ಏರ್ ಫಾರ್ಮೇಶ್​ನ ವಿಡಿಯೊ ಇಲ್ಲಿದೆ.

 

ರಫೇಲ್, ಸುಖೋಯ್ ಮತ್ತು ಎಂಐ171ವಿ ಮಾದರಿಯ ಒಟ್ಟು 75 ಯುದ್ಧವಿಮಾನಗಳು ಈ ವಿಶೇಷ ಫ್ಲೈಪಾಸ್ಟ್​ ರಚನೆಯಲ್ಲಿ ಭಾಗಿಯಾಗಿದ್ದವು. ತಾಲೀಮಿನ ವಿಡಿಯೊವೊಂದನ್ನು ವಾಯುಪಡೆ ಹಂಚಿಕೊಂಡಿದೆ. ವಾಯುಪಡೆ ಹಂಚಿಕೊಂಡಿರುವ ವಿಡಿಯೊ ಇಲ್ಲಿದೆ.

 

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಎನ್​ಸಿಸಿ ನೇತೃತ್ವ ವಹಿಸಿದ ಮೈಸೂರು ವಿದ್ಯಾರ್ಥಿನಿ

ದೆಹಲಿಯಲ್ಲಿ ನಡೆದ 73ನೇ ಗಣರಾಜ್ಯೋತ್ಸವದ ಐತಿಹಾಸಿಕ ಪರೇಡ್​ನಲ್ಲಿ (Parade) ಭಾಗವಹಿಸಿದ್ದ ಎನ್​ಸಿಸಿ (NCC) ತಂಡವನ್ನು ಮೈಸೂರಿನ ವಿದ್ಯಾರ್ಥಿನಿ ಮುನ್ನಡೆಸಿದ್ದಾರೆ. ಮೈಸೂರಿನ ಮಹಾರಾಣಿ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಪ್ರಮೀಳಾ ಕುವರ್ ನೇತೃತ್ವದ ಎನ್​ಸಿಸಿ ತಂಡ ಪಥಸಂಚಲನದಲ್ಲಿ ಭಾಗಿಯಾಗಿದೆ. ಮೈಸೂರಿನ ವಿವಿ ಮೊಹಲ್ಲಾದ ನಿವಾಸಿಯಾಗಿರುವ ಪ್ರತಾಪ್ ಸಿಂಗ್ ಮತ್ತು ಪುಷ್ಪಾ ಕುವರ್ ದಂಪತಿಯ ಪುತ್ರಿಯಾಗಿರುವ ಪ್ರಮಿಳಾ, ಎನ್​ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿದ್ದಾರೆ.

ಪ್ರಮೀಳಾ ಅವರ ತಂದೆ ನಗರದ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ಇಟ್ಟುಕೊಂಡು ಮಗಳನ್ನು ಓದಿಸುತ್ತಿದ್ದಾರೆ. 2018 ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎನ್​ಸಿಸಿ ತಂಡದ ನೇತೃತ್ವ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿದ್ದ ಪ್ರಮೀಳಾ ಅವರಿಗೆ 2022ರ ಗಣರಾಜ್ಯೋತ್ಸವ ಪರೇಡ್​ನಲ್ಲಿ ಎನ್​ಸಿಸಿ ತಂಡದ ನೇತೃತ್ವ ವಹಿಸಿರುವುದು ಪೋಷಕರಲ್ಲಿ ಸಂತಸವನ್ನುಂಟು ಮಾಡಿದೆ.

ಮೈಸೂರಿನಿಂದ ಒಟ್ಟು 19 ಕೆಡೆಟ್​ಗಳಲ್ಲಿ 10 ಯುವಕರು ಮತ್ತು 9 ಯುವತಿಯರು ಕರ್ನಾಟಕ ಮತ್ತು ಗೋವಾ ಎನ್​ಸಿಸಿ ಡೈರೆಕ್ಟೊರೇಟ್ ಪಡೆಯನ್ನು ಪ್ರತಿನಿಧಿಸಿದ್ದಾರೆ. ದೆಹಲಿಯಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವ ಕ್ಯಾಂಪ್ಗಾಗಿ ಭಾರತದ 17 ಡೈರೆಕ್ಟೊರೇಟ್​ಗಳಿಂದ ಕೆಡೆಟ್​ಗಳನ್ನ ಆಯ್ಕೆ ಮಾಡಲಾಗುತ್ತದೆ. ಕ್ಯಾಂಪ್​ನಲ್ಲಿ ಇವರು ವ್ಯಾಯಾಮ, ಸಾಂಸ್ಕೃತಿಕ ಚಟುವಟಿಕೆಗಳು, ಫ್ಯಾಗ್ ಏರಿಯಾ ಮತ್ತು ಬೆಸ್ಟ್ ಕೆಡೆಟ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.

ಕೊರೊನಾ ಪಿಡುಗಿನಿಂದಾಗಿ ಕಳೆದ ವರ್ಷ ಮತ್ತು ಈ ವರ್ಷ ಎನ್​ಸಿಸಿ ಕ್ಯಾಂಪ್​ಗೆ ಆಯ್ಕೆ ಮಾಡುವ ಕೆಡೆಟ್ಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಪ್ರಸಕ್ತ ವರ್ಷ ಕರ್ನಾಟಕ ಮತ್ತು ಗೋವಾ ಡೈರೆಕ್ಟೋರೇಟ್ ನಿಂದ ಒಟ್ಟು 54 ಕೆಡೆಟ್​ಗಳನ್ನ ಆಯ್ಕೆ ಮಾಡಲಾಗಿದ್ದು, 2 ತಿಂಗಳ ಹಿಂದೆಯೇ ದೆಹಲಿ ತಲುಪಿದ್ದರು.

ಇದನ್ನೂ ಓದಿ: ಉತ್ತರಾಖಂಡ್​ನ ಸಾಂಪ್ರದಾಯಿಕ ಟೋಪಿ ಧರಿಸಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ
ಇದನ್ನೂ ಓದಿ: Republic Day Parade 73ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಏನೇನಿತ್ತು? 10 ಪ್ರಮುಖ ಸಂಗತಿಗಳು