ಬೆಂಗಳೂರು: ಹಲಾಲ್ ಮಾಂಸ (Halal Cut Meat) ಮಾರಾಟಕ್ಕೆ ಪ್ರತಿಯಾಗಿ ಬಲಪಂಥೀಯ ಹಿಂದೂ ಸಂಘಟನೆಗಳು (Right-wing Hindu groups) ಬೆಂಗಳೂರಿನ 18 ಕಡೆಗಳಲ್ಲಿ ಮಾಂಸದ ಅಂಗಡಿಗಳನ್ನು ತೆರೆದಿವೆ. ಕಮ್ಮನಹಳ್ಳಿ, ಇಟ್ಟಮಡು, ದಾಸರಹಳ್ಳಿ, ಸಂಜಯನಗರ, ಯಲಹಂಕ, ಇಂದಿರಾನಗರ ಹಾಗೂ ಅನ್ನಪೂರ್ಣೇಶ್ವರಿ ನಗರ ಹಾಗೂ ಇತರೆಡೆಗಳಲ್ಲಿ ಮಾಂಸದ ಅಂಗಡಿಗಳನ್ನು ತೆರೆಯಲಾಗಿದೆ. ಗ್ರಾಹಕರನ್ನು ಆಕರ್ಷಿಸಲು ಮಾಂಸದ ಹೋಮ್ ಡೆಲಿವರಿ ಮತ್ತು ಕಾಂಬೊ ಆಫರ್ಗಳನ್ನೂ ಈ ಅಂಗಡಿಗಳು ಘೋಷಿಸಿವೆ. ಮಧುಗಿರಿ, ಬಾಣಸವಾಡಿ, ರಾಜಸ್ಥಾನದ ಅಜ್ಮೇರ್ನಿಂದ ಆಡುಗಳು ಮತ್ತು ಕುರಿಗಳನ್ನು ತರಲಾಗಿದೆ. ಸುಮಾರು 600 ಆಡುಗಳು ಮತ್ತು ಕುರಿಗಳನ್ನು ಹತ್ಯೆ ಮಾಡಿ 1,200 ಕಿಲೋ ಮಾಂಸವನ್ನು ಈಗಾಗಲೇ ಮಾರಾಟ ಮಾಡಲಾಗಿದೆ.
ಬಲಪಂಥೀಯ ಸಂಘಟನೆಗಳು ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ಹಲಾಲ್ ಮಾಂಸ ಬಹಿಷ್ಕರಿಸುವಂತೆ ಅಭಿಯಾನ ನಡೆಸುತ್ತಿವೆ. ಹಿಂದೂ ಉತ್ಸವಗಳ ಸಂದರ್ಭದಲ್ಲಿ ಹಲಾಲ್ ಮಾಂಸ ಖರೀದಿಸಬಾರದು ಎಂದು ಹಿಂದೂಗಳನ್ನು ಒತ್ತಾಯಿಸುತ್ತಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಹಲಾಲ್ ಕಟ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಯುಗಾದಿ ಹಬ್ಬದಂದು ಹಲಾಲ್ ಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ ಸರ್ಕಾರವನ್ನು ಕೆಲವು ದಿನಗಳ ಹಿಂದೆ ಒತ್ತಾಯಿಸಿತ್ತು. ಹಲಾಲ್ ಹಣವನ್ನು ಭಯೋತ್ಪಾದನಾ ಚಟುವಟಿಕೆಗಳಿಗೂ ಬಳಸಲಾಗುತ್ತದೆ. ವೈಜ್ಞಾನಿಕವಾಗಿಯೂ ಹಲಾಲ್ ಮಾಂಸವು ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ ಹೇಳಿದ್ದರು.
ಇದನ್ನೂ ಓದಿ: Halal Cut Vs Jhatka Cut: ಯುಗಾದಿ ಹಬ್ಬ ಮತ್ತು ಹೊಸತೊಡುಕು, ಮತ್ತೇ ಮುನ್ನೆಲೆಗೆ ಬಂದ ಹಲಾಲ್ ಕಟ್-ಜಟ್ಕಾ ಕಟ್ ವಿವಾದ
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಸಣ್ಣದಾಗಿ ಹತ್ತಿಕೊಂಡಿದ್ದ ಹಿಜಾಬ್ ವಿವಾದ ಇಡೀ ರಾಜ್ಯದಲ್ಲಿ ವ್ಯಾಪಿಸಿ ಹಿಂದೂ-ಮುಸ್ಲಿಂ ಸುಮುದಾಯದ ನಡುವೆ ಧರ್ಮ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಬೆಂಬಲಿಸಿದ್ದಕ್ಕೆ ಹಿಂದೂ ವ್ಯಾಪಾರಿಗಳಿಂದ ಮೀನು ಖರೀದಿ ಮಾಡದಂತೆ ಕೆಲವು ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದವು. ಬಳಿಕ ಹಿಂದೂ ಸಂಘಟನೆಗಳು ದೇವಸ್ಥಾನದ ಜಾತ್ರಾಮಹೋತ್ಸವಗಳ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿದವು. ಇದರ ಬೆನ್ನಲ್ಲೇ ಹಲಾಲ್ ಕಟ್ ಮುನ್ನಲೆಗೆ ಬಂದಿತ್ತು. ಇದರಿಂದ ಬರುವ ಹಣ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಲಾಗುತ್ತದೆ, ಯಾವುದೇ ಕಾರಣಕ್ಕೂ ಹಿಂದೂಗಳು ಹಲಾಲ್ ಕಟ್ ಮಾಂಸ ಖರೀದಿಸದಂತೆ ಮತ್ತು ಜಟ್ಕಾ ಕಟ್ ಮಾಂಸ ಬಳಕೆ ಮಾಡುವಂತೆ ಹಿಂದೂಪರ ಸಂಘಟನೆಗಳು ಕರಪತ್ರ ವಿತರಿಸಿದ್ದವು. ಇದೀಗ ಮತ್ತೆ ಹಲಾಲ್ ಮಾಂಸ ವಿಚಾರ ಮುನ್ನೆಲೆಗೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ