ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಎಡವಟ್ಟು; ಚಿನ್ನಯ್ಯನಪಾಳ್ಯದ ಬಳಿ ರಸ್ತೆ ಕುಸಿದು ಮಸೀದಿ ಗೋಡೆ ಬಿರುಕು

| Updated By: ಆಯೇಷಾ ಬಾನು

Updated on: Mar 02, 2023 | 3:05 PM

ಬೆಂಗಳೂರಿ‌ನ ಚಿನ್ನಯ್ಯನಪಾಳ್ಯದ ಸಮೀಪ ಟಿಡಿಎಂ ನೆಲಮಾರ್ಗದ ಕಾಮಗಾರಿ ವೇಳೆ ರಸ್ತೆ ಕುಸಿದು ಬಿದ್ದಿದೆ. ರಸ್ತೆ ಕುಸಿದ ಪರಿಣಾಮ ಪಕ್ಕದಲಿದ್ದ ಮಸೀದಿ ಬಿರುಕು ಬಿಟ್ಟಿದೆ.

ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಎಡವಟ್ಟು; ಚಿನ್ನಯ್ಯನಪಾಳ್ಯದ ಬಳಿ ರಸ್ತೆ ಕುಸಿದು ಮಸೀದಿ ಗೋಡೆ ಬಿರುಕು
ರಸ್ತೆ ಕುಸಿತ ಮತ್ತು ಮಸೀದಿ ಗೋಡೆ ಬಿರುಕು
Follow us on

ಬೆಂಗಳೂರು: ಇತ್ತೀಚೆಗೆ ಬಿಎಂಆರ್​ಸಿಎಲ್(BMRCL) ನಿರ್ಲಕ್ಷ್ಯ ಹೆಚ್ಚಾಗಿ ಎದ್ದು ಕಾಣುತ್ತಿದೆ. ಹೆಣ್ಣೂರು ಕ್ರಾಸ್ ಬಳಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿಬಿದ್ದು ತಾಯಿ–ಮಗು ಮೃತಪಟ್ಟಿದ್ದರು(Metro Pillar Tragedy). ಈಗ ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಎಡವಟ್ಟು ನಡೆದಿದೆ. ಮೆಟ್ರೋ ಸುರಂಗ ಮಾರ್ಗ ನಿರ್ಮಾಣದ ವೇಳೆ ರಸ್ತೆ ಕುಸಿದು ಬಿದ್ದ ಘಟನೆ ಬೆಂಗಳೂರಿ‌ನ ಚಿನ್ನಯ್ಯನಪಾಳ್ಯದ ಬಳಿ ನಡೆದಿದೆ.

ಬೆಂಗಳೂರಿ‌ನ ಚಿನ್ನಯ್ಯನಪಾಳ್ಯದ ಸಮೀಪ ಟಿಡಿಎಂ ನೆಲಮಾರ್ಗದ ಕಾಮಗಾರಿ ವೇಳೆ ರಸ್ತೆ ಕುಸಿದು ಬಿದ್ದಿದೆ. ರಸ್ತೆ ಕುಸಿದ ಪರಿಣಾಮ ಪಕ್ಕದಲಿದ್ದ ಮಸೀದಿ ಬಿರುಕು ಬಿಟ್ಟಿದೆ. ಮಸೀದಿ ಗೋಡೆಗೆ ತಡೆಯಾಗಿ ಕಬ್ಬಿಣದ ಜಾಕ್ ಗಳನ್ನ ಸಪೋರ್ಟ್ ನೀಡಲಾಗಿದೆ. ಸದ್ಯ ಮಣ್ಣು ಕುಸಿದಿರುವ ಜಾಗಕ್ಕೆ ಕಾಂಕ್ರಿಟ್ ತುಂಬಿಸಲಾಗಿದೆ. ಸಿಮೆಂಟ್ ಮಿಶ್ರಣ ಹಾಕಿ ಬಿದ್ದ ಬಿರುಕು ಸರಿಪಡಿಸಲಾಗುತ್ತಿದೆ. ಸದ್ಯ ಸಿಬ್ಬಂದಿ ರಸ್ತೆಯನ್ನ ಬಂದ್ ಮಾಡಿದ್ದಾರೆ.

ಕಾಳೇನಾ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21 ಕಿ.ಮೀ‌ ಸುರಂಗ ಮಾರ್ಗ ಕೊರೆಯಲಾಗುತ್ತಿದೆ. ಸುರಂಗ ಮಾರ್ಗ ಕೊರೆಯುವಾಗ ನಿನ್ನೆ(ಮಾ.01) ಸಂಜೆ 6:30ರ ಸುಮಾರಿಗೆ ಇದ್ದಕ್ಕಿದ್ದಂತೆ ರಸ್ತೆ ಕುಸಿದು ಬಿದ್ದಿದೆ.

ಮಸೀದಿ ಗೋಡೆ ಸರಿಪಡಿಸುವಂತೆ ಕಮೀಟಿ ಸದಸ್ಯರ ಮನವಿ

ಸುಮಾರು 70 ವರ್ಷಗಳ ಹಳೆಯದಾದ ಆಲಾ ಮಸೀದಿ ಬಿರುಕು ಬಿಟ್ಟಿದ್ದು ಮಸೀದಿ ಗೋಡೆ ಸರಿಪಡಿಸಿಕೊಡಿ ಎಂದು BMRCL ಬಳಿ ಮಸೀದಿ ಕಮೀಟಿ ಸದಸ್ಯರು ಮನವಿ ಮಾಡಿದ್ದಾರೆ. ಸದ್ಯ ಕುಸಿದ ರಸ್ತೆಯನ್ನ ಮುಚ್ಚಿದ್ದಾರೆ. ಕಾಂಕ್ರಿಟ್ ಹಾಕಿ ರಸ್ತೆ ಸರಿಪಡಿಸಿದ್ದಾರೆ. ಸದ್ಯ ಯಾವುದೇ ದುರ್ಘಟನೆ ನಡೆದಿಲ್ಲ, ಮಸೀದಿಗಷ್ಟೇ ಸ್ವಲ್ಪ ಡ್ಯಾಮೇಜ್ ಆಗಿದೆ. ಅಕ್ಕಪಕ್ಕದ ಯಾವ ಮನೆಗಳಿಗೂ ಬಿರುಕು ಬಿಟ್ಟಿಲ್ಲ. ಯಾರಿಗೂ, ಯಾವ ಕಟ್ಟಡಗಳಿಗೂ ತೊಂದರೆ ಆಗದಂತೆ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ.

ಮತ್ತೊಂದೆಡೆ ಈ ಪ್ರಕರಣ ಸಂಬಂಧ ಬಿಎಂಆರ್​ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಮಗಾರಿಗೂ ಮೊದಲೇ ಎಲ್ಲ ಸೂಚನೆಗಳನ್ನ ನೀಡಲಾಗಿದೆ. ಪ್ರಾರ್ಥನೆ ಸಲ್ಲಿಸುವಾಗ ಹೆಚ್ಚು ಜನಸಂದಣಿ ಸೇರದಂತೆ ತಿಳಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಮಸೀದಿ ಒಳಗೆ ಮತ್ತು ಹೊರ ಭಾಗದಲ್ಲಿ ಕಬ್ಬಿಣದ ರಾಡ್ ಅಳವಡಿಸಲಾಗಿದೆ. ಮಸೀದಿ ಕಮಿಟಿ ಜೊತೆ ಕಾಮಗಾರಿಗೂ ಮುನ್ನ ಸಭೆ ನಡೆಸಲಾಗಿದೆ. ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ಕಾಮಗಾರಿ ಸ್ಥಗಿತಗೊಳಿಸಿ ನಂತರ ಕೆಲಸ ಮಾಡಲಾಗುತ್ತಿತ್ತು. ಸಿಂಕ್ ಹೋಲ್ ಇದ್ದ ಕಾರಣ ಈ ರೀತಿ ಆಗಿದೆ. ಸದ್ಯ ರಾತ್ರಿ ಸಂಭವಿಸಿದ ಘಟನೆ ಈಗ ಕ್ಲಿಯರ್ ಆಗಿದೆ. ಇಲ್ಲ ಯಾವ ಅಧಿಕಾರಿ ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿ ಇಲ್ಲ. ಮಣ್ಣು ಗಟ್ಟಿ ಇಲ್ಲದ ಕಾರಣ ಹೀಗಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Bengaluru Metro: ಬೆಂಗಳೂರು ಟು ಹೊಸೂರು ಮೆಟ್ರೋ ವಿಸ್ತರಣೆಗೆ ಕನ್ನಡಿಗರ ವಿರೋಧ; ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ ಕರವೇ ಪ್ರವೀಣ್ ಶೆಟ್ಟಿ ಬಣ

ಬೆಂಗಳೂರು ಮೆಟ್ರೋದಲ್ಲಿ ತಪ್ಪಿದ ದೊಡ್ಡ ಅನಾಹುತ, ರಹಸ್ಯವಾಗಿ ಹಳಿ ಬಿರುಕನ್ನು ದುರಸ್ಥಿಗೊಳಿಸಿದ BMRCL

ಬೆಂಗಳೂರು(ಫೆ.07) ರಾಜಧಾನಿ ಜನರ ವೇಗದ ಸಂಪರ್ಕ ಸಾಧನ ನಮ್ಮ ಮೆಟ್ರೋದಲ್ಲಿ (Namma Metro) ಭಾರಿ ಅನಾಹುತವೊಂದು ತಪ್ಪಿದೆ. ಸ್ವಲ್ಪ ಯಾಮಾರಿದ್ದರೂ ದೊಡ್ಡ ಅನಾಹುತ ಆಗುತ್ತಿತ್ತು. ನಾಯಂಡಹಳ್ಳಿಯಿಂದ ಕೆಂಗೇರಿಗೆ ಹೋಗುವ ನೇರಳೆ ಬಣ್ಣದ (Purple line) ಮೆಟ್ರೋ ಮಾರ್ಗದ, ಪಟ್ಟಣಗೆರೆ ನಿಲ್ದಾಣದ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಳಿ ಬಿರುಕು ಕಾಣಿಸಿಕೊಂಡಿದ್ದನ್ನು ರೈಲು ಚಾಲಕ ಮತ್ತು ಕೆಳಮಟ್ಟದ ಸಿಬ್ಬಂದಿ ಗಮನಿಸಿದ್ದಾರೆ. ರೈಲು ಪ್ರಯಾಣದ ವೇಳೆ ಕೇಳಿ ಬರುವ ಶಬ್ದದಲ್ಲಿ ವ್ಯತ್ಯಾಸ ಕೇಳಿಬಂದಿದ್ದರಿಂದ ಮೆಟ್ರೋ ಸ್ಪೀಡ್​ನಲ್ಲಿ ಬದಲಾವಣೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೆ ವಿಷಯವನ್ನು ಬಿಎಂಆರ್​ಸಿಎಲ್​ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದರಿಂದ ಇಡೀ ದಿನ ಮತ್ತೊಂದು ಟ್ರ್ಯಾಕ್​ನಲ್ಲಿ ಮೆಟ್ರೋ ಓಡಾಟ ನಡೆಸಿದೆ. ಬಳಿಕ ಮೆಟ್ರೋ ಟೀಮ್ ಕೂಡಲೇ ಎಚ್ಚೆತ್ತು ದುರಸ್ಥಿ ಮಾಡಿದ್ದಾರೆ. ಟ್ರ್ಯಾಕ್ ಸರಿಪಡಿಸಿದ ನಂತರ ಎರಡು ಹಳಿಯಲ್ಲಿ‌ ಎಂದಿನಂತೆ ಮೆಟ್ರೋ ಓಡಾಟ ಶುರು ಮಾಡಿಕೊಂಡಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:40 am, Thu, 2 March 23