ಬೆಂಗಳೂರು: ಮ್ಯಾನೇಜರ್ ಕಾಟಕ್ಕೆ ಬೇಸತ್ತು ಡ್ರೈವರ್ ಕಂ ಕಂಡಕ್ಟರ್ ಹೊಳೆಬಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಸಂಬಂಧ BMTC ಡಿಪೋ ಮ್ಯಾನೇಜರ್ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. R.R.ನಗರ ಡಿಪೋ 21ರ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಸಸ್ಪೆಂಡ್ ಮಾಡಲಾಗಿದೆ.
ಈ ಪ್ರಕರಣದ ಬಗ್ಗೆ ಟಿವಿ9 ವಾಹಿನಿ ನಿರಂತರ ವರದಿ ಪ್ರಸಾರ ಮಾಡಿದ್ದು ಇದರ ಫಲಶ್ರುತಿಯಾಗಿ ಮ್ಯಾನೇಜರ್ ಸಸ್ಪೆಂಡ್ ಆಗಿದ್ದಾರೆ. ಮಲ್ಲಿಕಾರ್ಜುನಯ್ಯ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಹೊಳೆಬಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ಮೃತನ ಪತ್ನಿ ದೂರು ನೀಡಿದ್ದರು. ಇದನ್ನೂ ಓದಿ: ಡಿಪೋ ಮ್ಯಾನೇಜರ್ ಕಿರುಕುಳ: ನೌಕರನ ಶವವಿಟ್ಟು ಪತ್ನಿಯಿಂದ ಪ್ರತಿಭಟನೆ, ತಂದೆ ಕಳೆದುಕೊಂಡು ಕಣ್ಣೀರಿಡುತ್ತಿರುವ ಅಂಗವಿಕಲ ಮಗಳು
ಹೊಳೆಬಸಪ್ಪ ಅವರು ಕಳೆದ 29 ರಂದು ಡಿಪೋ -21 ರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ರು. ಹೊಳೆಬಸಪ್ಪ ಜೇಬಿನಲ್ಲಿ ಡಿಪೋ ಮ್ಯಾನೇಜರ್ ಕಿರುಕುಳದ ಬಗ್ಗೆ ಡೆತ್ ನೋಟ್ ಇತ್ತು. ಟಿವಿ9 ವರದಿ ಬಳಿಕ ಬಿಎಂಟಿಸಿ ಎಂಡಿ ಎಂ.ಜಿ ಸತ್ಯವತಿ ತನಿಖೆಗೆ ಆದೇಶ ಮಾಡಿದ್ದರು. ಬಿಎಂಟಿಸಿಯ ಜಾಗೃತ ಮತ್ತು ಭದ್ರತಾದಳದ ಮುಖ್ಯ ಅಧಿಕಾರಿ ರಾಧಿಕಾ ತನಿಖೆ ಮಾಡಿ ರಿಪೋರ್ಟ್ ಸಲ್ಲಿಸಿದ್ರು. ವರದಿಯಲ್ಲಿ ಮಲ್ಲಿಕಾರ್ಜುನಯ್ಯ ಹಣಕ್ಕೆ ಒತ್ತಾಯಿಸಿದ್ದು ಗಮನಕ್ಕೆ ಬಂದಿದ್ದು,
ಕಂಡಕ್ಟರ್ ಮತ್ತು ಡ್ರೈವರ್ ಗಳಿಗೆ ಕಿರುಕುಳ ನೀಡಲಿರುವ ಬಗ್ಗೆ ಆರೋಪ ಸಾಬೀತಾಗಿದೆ.
ಮೃತನ ಶವವಿಟ್ಟು ಪ್ರತಿಭಟನೆ ಮಾಡಿದ್ದ ಕುಟುಂಬಸ್ಥರು
ಎರಡು ದಿನದ ಹಿಂದೆ ಆರ್ಆರ್ ನಗರ ಬಿಎಂಟಿಸಿ ಡಿಪೋ ಮುಂದೆ ಬಿಎಂಟಿಸಿ ನೌಕರ ಹೊಳೆಬಸಪ್ಪ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು. ಮೃತ ಹೊಳೆಬಸಪ್ಪ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಕೆಆರ್ಎಸ್ ಪಾರ್ಟಿ ಮತ್ತು ಆಮ್ ಆದ್ಮಿ ಪಾರ್ಟಿ ಪ್ರತಿಭಟನೆಗೆ ನಡೆಸಿತ್ತು. ನೂರಾರು ಸಂಖ್ಯೆಯಲ್ಲಿ ನೌಕರರು ಜಮಾಯಿಸಿ ಸ್ಥಳಕ್ಕೆ ಸಾರಿಗೆ ಸಚಿವರು ಬರುವಂತೆ ಪಟ್ಟು ಹಿಡಿದಿದ್ದರು. ಹಾಗೂ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಬಂಧಿಸಬೇಕು ಎಂದು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದರು. ಪ್ರತಿಭಟನೆ ವೇಳೆ ಹೊಳೆಬಸಪ್ಪ ಪತ್ನಿ ತಲೆ ತಿರುಗಿ ಬಿದ್ದಿದ್ದರು.
ಪ್ರತಿಭಟನಾ ಸ್ಥಳಕ್ಕೆ ಆರ್ಆರ್ ನಗರ ಪೊಲೀಸರು ಭೇಟಿ ನೀಡಿ ಪ್ರತಿಭಟನೆ ಕೈ ಬಿಡಬೇಕು ಎಂದು ಮನವಿ ಮಾಡಿದ್ದರು. ಹಾಗೂ ಶವವನ್ನು ಅಂತ್ಯಸಂಸ್ಕಾರ ಮಾಡಲು ತೆಗೆದುಕೊಂಡು ಹೋಗುವಂತೆ ಮನವಿ ಮಾಡಿದ್ದರು. ಆದ್ರೆ ಇತ್ತ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯನನ್ನು ವಶಕ್ಕೆ ಪಡೆಯಬೇಕು. ಆತನನ್ನು ಸಸ್ಪೆಂಡ್ ಮಾಡಬೇಕು, ಆದರೆ ಆತನಿಗೆ ಬೇರೆ ಡಿಪೋದಲ್ಲಿ ಡ್ಯೂಟಿ ಮಾಡಲು ಅವಕಾಶ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಈಗ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಬಿಎಂಟಿಸಿ ಡಿಪೋ-21ರ ಸಹಾಯಕ ಸಂಚಾರ ಅಧೀಕ್ಷಕ ಅಮಾನತು
ಇನ್ನು ಮತ್ತೊಂದು ಕಡೆ ಟಿವಿ9 ವರದಿಯಿಂದ ಎಚ್ಚೆತ್ತ ಬಿಎಂಟಿಸಿ, ಡಿಪೋ-21ರ ಸಹಾಯಕ ಸಂಚಾರ ಅಧೀಕ್ಷಕ ಅಮಾನತುಗೊಳಿಸಲಾಗಿದೆ. ಸಹಾಯಕ ಸಂಚಾರ ಅಧೀಕ್ಷಕ ಮಹಾದೇವ ದಾಬೋಜಿ ಅವರನ್ನು ಅಮಾನತುಗೊಳಿಸಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ. ಬಿಎಂಟಿಸಿ ಡಿಪೋದಲ್ಲಿ ಗಣೇಶ ಉತ್ಸವ, ಬೀಳ್ಕೊಡುಗೆ ಹೆಸರಿನಲ್ಲಿ ಬಿಎಂಟಿಸಿ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್ಗಳಿಂದ ಹಣ ಸುಲಿಗೆ ಮಾಡಲಾಗುತ್ತಿತ್ತು. ಸಹೋದ್ಯೋಗಿಗಳಿಂದ ಹಣ ವಸೂಲಿ ಆರೋಪದಡಿ ಬಿಎಂಟಿಸಿ ATS ಮಹಾದೇವ ದಾಬೋಜಿ ಅಮಾನತುಗೊಳಿಸಿ ಎಂಡಿ ಆದೇಶ ಹೊರಡಿಸಿದ್ದಾರೆ.
Published On - 4:58 pm, Sat, 3 September 22