‘Rain’bow layout: ರಣಚಂಡಿ ಮಳೆಗೆ ರೈನ್‌ಬೊ ಲೇಔಟ್ ಜನ ತತ್ತರ -ಇದೇನು ಡ್ರೈನೇಜ್ ಬಡಾವಣೆಯಾ ಎಂದು ಪ್ರಶ್ನಿಸಿದರೂ ಬಿಬಿಎಂಪಿ ಡೋಂಟ್ ಕೇರ್
ಕಳೆದ ಒಂದು ವಾರದಿಂದ ಸುರಿದ ಮಳೆ ಬೆಂಗಳೂರಿಗರನ್ನು ಹೈರಾಣಗಿಸಿದೆ. ಅದರಲ್ಲೂ ರೈನ್ ಬೋ ಡ್ರೈವ್ ಬಡಾವಣೆ (Rainbow layout) ನಿವಾಸಿಗಳದ್ದು ಹೇಳತೀರದ ಪರಿಸ್ಥಿತಿ ಉಂಟಾಗಿದೆ.
ಬೆಂಗಳೂರು: ಹೈಟೆಕ್ ಸಿಟಿ, ಸಿಲಿಕಾನ್ ಸಿಟಿ ಅಂತೆಲ್ಲಾ ಕರೆಸಿಕೊಳ್ಳುವ ಬೆಂಗಳೂರು ಮಂದಿ ಮಳೆ ಬಂತು ಅಂದ್ರೆ ಸಾಕು ಇಲ್ಲಿನ ಜನರ ಸ್ಥಿತಿ ಅಯೋಮಯ. ಕಳೆದ ಒಂದು ವಾರದಿಂದ ಸುರಿದ ಮಳೆ ಬೆಂಗಳೂರಿಗರನ್ನು ಹೈರಾಣಗಿಸಿದೆ. ಅದರಲ್ಲೂ ರೈನ್ ಬೋ ಡ್ರೈವ್ ಬಡಾವಣೆ (‘Rain’bow layout) ನಿವಾಸಿಗಳದ್ದು ಹೇಳತೀರದ ಪರಿಸ್ಥಿತಿ ಉಂಟಾಗಿದೆ. ಮಳೆ ಅಂದ್ರೆ ಬೆಂಗಳೂರಿಗರು ಭಯ ಬೀಳುವಂತಾಗಿದೆ.
ಜಲಾವೃತವಾದ ರೈನ್ ಬೋ ಬಡಾವಣೆ, ನಿಲ್ಲದ ಜನರ ಸಂಕಷ್ಟ
ಸರ್ಜಾಪುರ ರಸ್ತೆಯಲ್ಲಿರುವ ರೈನ್ ಬೋ ಡ್ರೈವ್ ಬಡಾವಣೆ ನಿವಾಸಿಗಳ ಟೈಮ್ ಸರಿ ಇಲ್ಲ ಅನ್ಸುತ್ತೆ.. ಮಳೆ ಬಂತು ಅಂದ್ರೆ ಸಾಕು ಬಡಾವಣೆಗೆ ಕೆರೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ, ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಮಹದೇವಪುರ ಕ್ಷೇತ್ರದ ದೊಡ್ಡಕನ್ನಹಳ್ಳಿಯ ರೈನ್ ಬೋ ಡ್ರೈವ್ ಬಡಾವಣೆ ನೀರು ನುಗ್ಗಿ ಇಡೀ ಬಡಾವಣೆ ಜಲಾವೃತಗೊಂಡು ನಿವಾಸಿಗಳು ಮನೆಯಿಂದ ಹೊರಬರಲು ಹಾಗೂ ಒಳ ಹೋಗಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು, ಮೂರು ದಿನ ಕಳೆದ್ರೂ ಸಹ ಬಡಾವಣೆಯಲ್ಲಿ ತುಂಬಿದ್ದ ನೀರು ಕಂಪ್ಲೀಟ್ ತಗ್ಗದ ಹಿನ್ನೆಲೆ ಲೇಔಟ್ ನಿವಾಸಿಗಳು ಪರದಾಡುವ ಸ್ಥಿತಿ ಇದೆ.
ಇಡೀ ಬಡಾವಣೆಯು ದ್ವೀಪದಂತಾಗಿ ಮಾರ್ಪಟ್ಟಿದ್ದರು ಸಹ ಸ್ಥಳೀಯ ಶಾಸಕರಾದ ಅರವಿಂದ್ ಲಿಂಬಾವಳಿ ಮಾತ್ರ ಇತ್ತ ತಲೆಯನ್ನು ಹಾಕಿ ನೋಡಿಲ್ಲ. ಬಿಬಿಎಂಪಿ ಅಧಿಕಾರಿಗಳಂತೂ ಬಡಾವಣೆಯ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಜನರು ಲೇಔಟ್ ರಸ್ತೆಯಲ್ಲಿ ನಿಂತಿರುವ ನೀರು ದಾಟಲು ಹರಸಾಹಸ ಪಡುವಂತಾಗಿತ್ತು . ಇನ್ನು ತುರ್ತು ಸೇವೆ ನೀಡಲು ಆಟೋ ಚಾಲಕರು ಪ್ರಾಣವನ್ನು ಕೈಯಲ್ಲಿ ಹಿಡಿದು ಆಟೋ ಚಾಲನೆ ಮಾಡುವ ಸ್ಥಿತಿ ಆ ಭಾಗದಲ್ಲಿ ಕಂಡು ಬಂದಿದೆ. ಸಿಟಿಯಲ್ಲಿ ಕೊಂಚ ಮಳೆ ಕಡಿಮೆಯಾದ್ರೂ ನಿವಾಸಿಗಳು ಮಾತ್ರ ಪರದಾಡುತ್ತಿದ್ದು ರೈನ್ಬೋ ಡ್ರೈವ್ ಬಡಾವಣೆ ಮಳೆಯಿಂದಾಗಿ ಡ್ರೈನೇಜ್ ಬಡಾವಣೆ ಆಗಿ ಮಾರ್ಪಟ್ಟಿದ್ದು ಸ್ಥಳೀಯ ನಿವಾಸಿಗಳು ಮಾತ್ರ ಪರದಾಟ ಪಡುವಂತಿತ್ತು.
ರೈನ್ ಬೋ ಡ್ರೈವ್ ಸೇರಿದಂತೆ ಸಿಟಿಯ ಕೆಲವು ಏರಿಯಾಗಳಿಗೆ ಯಾಕೀ ಜಲದಿಗ್ಭಂದನ?
ನಗರದಲ್ಲಿ ಅರ್ಧ ಗಂಟೆ ಮಳೆ ಬಂದರೆ ಸಾಕು ಹಲವೆಡೆ ರಸ್ತೆಗಳು ನದಿಗಳಾಗಿ ಬಿಡುತ್ತವೆ. ಬಡಾವಣೆಗಳು ಕೆರೆಗಳಾಗುತ್ತವೆ.ಮನೆಗೆ ನುಗ್ಗುವ ಚರಂಡಿ, ರಾಜಕಾಲುವೆ ನೀರು ಹೊರಹಾಕಲು ಜನರು ಹರಸಾಹಸ ಪಡುತ್ತಾರೆ. ಪ್ರವಾಹ ಭೀತಿ ಹುಟ್ಟಿಸುವ ಸೂಕ್ಷ್ಮ ಪ್ರದೇಶಗಳನ್ನ ಬಿಬಿಎಂಪಿ ಪಟ್ಟಿ ಮಾಡುತ್ತಲೇ ಬಂದಿದ್ದರೂ, ಈ ಯಾವುದೇ ಸ್ಥಳಗಳಲ್ಲಿ ನೀರು ನಿಲ್ಲದಂತ ಮಾಡಬೇಕಾದ ಕಾರ್ಯಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕಾಲ ಕಾಲಕ್ಕೆ ರಾಜಕಾಲುವೆ ನಿರ್ವಹಣೆ, ಒತ್ತುವರಿ ತರವು, ಕೆರೆಗಳ ಹೂಳು ಎತ್ತುವುದು ಹಾಗೂ ಒಳಚಂರಡಿ ಸರಿಯಾದ ನಿವರ್ಹಣೆ ಮಾಡದೆ ಇರುವುದೆ ಇಷ್ಟಕ್ಕೆಲ್ಲ ಕಾರಣವಾಗಿದ್ದು ಕೊಂಚ ಮಳೆ ಬಂದ್ರು ರಾಜಧಾನಿ ಜಲಾವೃತವಾಗುವ ಸ್ಥಿತಿ ಎದುರಾಗಿದೆ.
– ವಿನಯಕುಮಾರ್ ಕಾಶಪ್ಪನರ್, ಟಿವಿ 9, ಬೆಂಗಳೂರು