ಅತ್ಯಾಚಾರ ಆರೋಪ: ಬಿಜೆಪಿ, ಜೆಡಿಎಸ್ ಮಾಜಿ ಮುಖಂಡ ಜಿಮ್ ಸೋಮ ವಿರುದ್ಧ ಎಫ್ಐಆರ್
ಆರ್ಥಿಕ ಸಹಾಯ ನೀಡುವುದಾಗಿ ಯುವತಿಯೊಬ್ಬರನ್ನು ಫ್ಲ್ಯಾಟ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಿಜೆಪಿಯ ಮಾಜಿ ನಾಯಕ ಸೋಮಶೇಖರ್ ಜಯರಾಜ್ ಅಲಿಯಾಸ್ ಜಿಮ್ ಸೋಮ ವಿರುದ್ಧ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು, ಜನವರಿ 7: ಅತ್ಯಾಚಾರದ ಆರೋಪದಡಿ ಉದ್ಯಮಿ ಹಾಗೂ ಬಿಜೆಪಿ, ಜೆಡಿಎಸ್ ಮಾಜಿ ಮುಖಂಡ ಸೋಮಶೇಖರ್ ಜಯರಾಜ್ (ಜಿಮ್ ಸೋಮ) ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರ್ಥಿಕ ಸಹಾಯ ಮಾಡುವುದಾಗಿ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ 26 ವರ್ಷದ ಸಂತ್ರಸ್ತ ಯುವತಿ ನೀಡಿದ ದೂರಿನನ್ವಯ ಬೆಂಗಳೂರಿನ ಅಶೋಕನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸಕಲೇಶಪುರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೋಮಶೇಖರ್ ಪರಾಜಿತಗೊಂಡಿದ್ದರು.
ದೂರುದಾರಳಿಗೆ ಆಕೆಯ ಸ್ನೇಹಿತೆಯೊಬ್ಬಳ ಮೂಲಕ ಸೋಮಶೇಖರ್ ಪರಿಚಯವಾಗಿತ್ತು. ಕಳೆದ ವರ್ಷ ಮದುವೆ ನಿಗದಿಯಾಗಿತ್ತು. ಹೀಗಾಗಿ 6 ಲಕ್ಷ ರೂ. ಆರ್ಥಿಕ ಸಹಾಯ ಮಾಡುವಂತೆ ಸೋಮಶೇಖರ್ ಬಳಿ ದೂರುದಾರೆ ಕೇಳಿಕೊಂಡಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ದೂರುದಾರಳ ಪಿಜಿ ಬಳಿ ಹೋಗಿದ್ದ ಸೋಮಶೇಖರ್, ಹಣ ಕೊಡುವುದಾಗಿ ಆಕೆಯನ್ನ ಲ್ಯಾಂಗ್ ಫೋರ್ಡ್ ರಸ್ತೆಯಲ್ಲಿರುವ ತಮ್ಮ ಫ್ಲ್ಯಾಟ್‌ಗೆ ಕರೆದೊಯ್ದಿದ್ದರು. ಅಲ್ಲಿ ದೂರುದಾರಳ ಇಚ್ಛೆಗೆ ವಿರುದ್ಧವಾಗಿ ಮದ್ಯಪಾನ ಮಾಡಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ ನಡೆದ ವಿಚಾರವನ್ನು ಯಾರಿಗಾದರೂ ಹೇಳಿದರೆ ಪ್ರಾಣಹಾನಿ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.
ದೂರಿನನ್ವಯ ಅಶೋಕನಗರ ಠಾಣೆ ಪೊಲೀಸರು ಸೋಮಶೇಖರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಸೋಮಶೇಖರ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯಾರು ಈ ಜಿಮ್ ಸೋಮ?
ಜಿಮ್ ಸೋಮ ಒಂದು ಕಾಲದಲ್ಲಿ ರೌಡಿ ಶೀಟರ್ ಆಗಿದ್ದ ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಬೆಂಗಳೂರಿನಲ್ಲಿ ಸಾಕಷ್ಟು ವ್ಯವಹಾರ ಮಾಡಿ ಕೋಟಿ ಕೋಟಿ ಹಣ ಗಳಿಸಿಕೊಂಡ ಸೋಮ 2018 ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಲುವಾಗಿ ಹಾಸನ ಜಿಲ್ಲೆಯ ಎಸ್ಸಿ ಮೀಸಲು ಕ್ಷೇತ್ರ ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರ ಕ್ಕೆ 2017 ರಲ್ಲಿಯೇ ಎಂಟ್ರಿ ಆಗಿದ್ದರು. ತಮ್ಮದೇ ತಂಡ ಕಟ್ಟಿಕೊಂಡು ಕ್ಷೇತ್ರದಲ್ಲಿ ಓಡಾಡುತ್ತಾ ಬಿಎಸ್ ಯಡಿಯೂರಪ್ಪ ಅವರ ವಿಶ್ವಾಸ ಗಳಿಸಿದ್ದರು. ಟಿಕೇಟ್ ಹಂಚಿಕೆ ಸಂದರ್ಭ ಬಂದಾಗ ಸ್ಥಳೀಯ ವಾಗಿ ಸಾಕಷ್ಟು ವಿರೋಧದ ನಡುವೆ ಕೂಡ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ದೆ ಮಾಡಿದ್ದರು. ಕೇವಲ ಐದು ಸಾವಿರ ಮತಗಳ ಅಂತರದಿಂದ ಪರಾಭವ ಗೊಂಡ ಸೋಮಶೇಖರ್ ಕ್ಷೇತ್ರದಿಂದ ಕಣ್ಮರೆ ಆಗಿದ್ದರು.
ಇದನ್ನೂ ಓದಿ: ಅತ್ತಿಗೆ ಮೇಲೆ ನಾದಿನಿಗೆ ಪ್ರೀತಿ; ಮದುವೆಯಾಗಲು ಮನೆ ಬಿಟ್ಟು ಓಡಿದ ಸಲಿಂಗ ಕಾಮಿಗಳ ಕತೆಯೇನಾಯ್ತು?
ಬಳಿಕ 2019 ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ಟಿಕೇಟ್ ಪಡೆಯುವ ಸಲುವಾಗಿ ಅಲ್ಲಿ ಓಡಾಟ ಶುರು ಮಾಡಿದ್ದರು. ಆದರೆ ಟಿಕೇಟ್ ಸಿಗದಿದ್ದಾಗ ರಾಜಕೀಯ ದಿಂದ ಅಂತರ ಕಾಯ್ದುಕೊಂಡಿದ್ದರು. ಮತ್ತೆ 2023 ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಸಕಲೇಶಪುರದಲ್ಲಿ ಮತ್ತೆ ಕಾಣಿಸಿಕೊಂಡಿದ್ದರು. ಬಿಜೆಪಿಯಿಂದ ಟಿಕೆಟ್ ಪಡೆಯಲು ಸಾಕಷ್ಟು ಯತ್ನ ನಡೆಸಿದ್ದರು. ಆದರೆ ಬಿಜೆಪಿ ಟಿಕೆಟ್ ಸಿಮೆಂಟ್ ಮಂಜುಗೆ ಸಿಕ್ಕಾಗ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು.
ಆ ಬಳಿಕ ಜೆಡಿಎಸ್ ಜೊತೆಯಾಗಲಿ, ಬಿಜೆಪಿಯ ಕಾರ್ಯಕ್ರಮ ಗಳಲ್ಲಿಯಾಗಲಿ ಕಾಣಿಸಿಕೊಂಡಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ