ಬೆಂಗಳೂರು: ಕಾಣೆಯಾದ ಬೀದಿ ನಾಯಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ
ಬೆಂಗಳೂರಿನ ಕಲ್ಯಾಣ ನಗರದ ನಿವಾಸಿ ಡಾ. ಪುನೀತಾ ರಂಗಸ್ವಾಮಿ ಎಂಬುವರು ಬೀದಿ ನಾಯಿ ಕಾಣೆಯಾಗಿದೆ ಎಂದು ಎಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನಿಲ್ ಎಂಬುವರು ನಾಯಿಗೆ ಹಿಂಸೆ ನೀಡಿ, ಎಲ್ಲೋ ಬಿಟ್ಟು ಬಂದಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು, ಜನವರಿ 07: ಕಾಣೆಯಾದ ಬೀದಿ ನಾಯಿಗಾಗಿ (Dog) ಮಹಿಳೆಯೊಬ್ಬರು ಪೊಲೀಸ್ (Police) ಠಾಣೆ ಮೆಟ್ಟಿಲೇರಿದ್ದಾರೆ. ಕಲ್ಯಾಣ ನಗರದ (Kalyan Nagar) ಹೆಚ್ಆರ್ಬಿಆರ್ ಲೇಔಟ್ ನಿವಾಸಿ ಡಾ. ಪುನೀತಾ ರಂಗಸ್ವಾಮಿಯವರು ಬೀದಿ ನಾಯಿ ಕಾಣೆಯಾಗಿದೆ ಎಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಬೀದಿ ನಾಯಿಗೆ ಹಿಂಸೆ ನೀಡಿ, ಬೇರೆ ಕಡೆ ಬಿಟ್ಟು ಬಂದಿದ್ದಾರೆಂದು ಪುನೀತಾ ತಮ್ಮದೇ ಲೇಔಟ್ನ ಅನಿಲ್ ಎಂಬುವರು ವಿರುದ್ಧ ಆರೋಪ ಮಾಡಿದ್ದಾರೆ.
ಹೆಚ್.ಆರ್.ಬಿ.ಆರ್ ಲೇಔಟ್ನ ಎರಡನೇ ಬ್ಲಾಕ್ನಲ್ಲಿದ್ದ 7 ತಿಂಗಳ ನಾಯಿಗೆ ದೂರುದಾರೆ ಪುನೀತಾ ರಂಗಸ್ವಾಮಿ ಅವರು ನಿತ್ಯ ಊಟ ಹಾಕುತ್ತಿದ್ದರು. ಹೀಗಾಗಿ, ನಿಯತ್ತಿನ ನಾಯಿ ಪುನೀತಾ ಅವರ ಮನೆ ಮುಂದೆ ಕಾವುಲಾಗಿ ಇರುತ್ತಿತ್ತು. 2025ರ ಡಿಸೆಂಬರ್ 14ರಂದು ನಾಯಿ ಬಿಸ್ಕೆಟ್ ಹಾಗೂ ನೀರು ಕುಡಿದು ಮನೆಯ ಮುಂದೆ ಮಲಗಿತ್ತು. ಆದರೆ, ಡಿಸೆಂಬರ್ 15ರ ಬೆಳಿಗ್ಗೆಯಿಂದ ನಾಯಿ ಕಾಣೆಯಾಗಿದೆ.
ಇದನ್ನೂ ಓದಿ: ಬಿಬಿಎಂಪಿ ಎಡವಟ್ಟು: ಅವೈಜ್ಞಾನಿಕ ಕಾಮಗಾರಿಯಿಂದ ಬಿಳೇಕಹಳ್ಳಿ ಏರಿಯಾ ಜನ ಹೈರಾಣು
ನಾಯಿ ಎಲ್ಲಿ ಹೋಯ್ತು ಅಂತ ತಿಳಿಯಲು ಅನಿಲ್ ಅವರ ಬಳಿ ಪುನೀತಾ ಅವರು ಡಿಸೆಂಬರ್ 14ರ ರಾತ್ರಿ 11 ಗಂಟೆಯಿಂದ 15ರ ಮಧ್ಯಾಹ್ನ 12 ಗಂಟೆವರೆಗಿನ ಸಿಸಿಟಿವಿ ದೃಶ್ಯಾವಳಿ ಕೇಳಿದ್ದಾರೆ. ಆದರೆ, ಅನಿಲ್ ಸಿಸಿಟಿವಿ ದೃಶ್ಯ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ, ಅನಿಲ್ ಮೇಲೆ ಅನುಮಾನವಿದೆ. ಅವರೇ ನಾಯಿಗೆ ಹಿಂಸಿಸಿ ಬೇರೆ ಕಡೆ ಬಿಟ್ಟು ಬಂದಿದ್ದಾರೆಂದು ದೂರಿನಲ್ಲಿ ದಾಖಲಿಸಿದ್ದಾರೆ.
ಅಲ್ಲದೇ, ಕಾಣೆಯಾದ ನಾಯಿಯ ತಾಯಿ ಕೂಡ ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಇದ್ದಕ್ಕಿದಂತೆ ನಾಪತ್ತೆಯಾಗಿತ್ತು. ಈಗ ಮರಿ ಕೂಡ ಕಾಣೆಯಾಗಿದೆ. ಇನ್ನೂ ಮೂರು ಬೀದಿ ನಾಯಿಗಳಿದ್ದು ಏನಾದರೂ ಆಗುತ್ತೆ ಎಂಬ ಭಯವಿದೆ. ಹೀಗಾಗಿ, ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಪುನೀತಾ ಒತ್ತಾಯಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:20 am, Tue, 7 January 25