ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಖ್ಯಾತ ವೈದ್ಯ ಡಾ.ಗುರುರಾಜ್ ಹೆಬ್ಬಾರ್ ನಿಧನ

ಕಾಮಧೇನು ವೃದ್ಧಾಶ್ರಮ ನಡೆಸುತ್ತಿದ್ದ ಡಾ.ಗುರುರಾಜ್ ಹೆಬ್ಬಾರ್, ನೂರಾರು ನಿರ್ಗತಿಕರು ಹಾಗೂ ಅನಾಥ ಮಕ್ಕಳಿಗೆ ಆಸರೆಯಾಗಿದ್ದರು. ಇವರು ರಾಜ್ಯೋತ್ಸವ ಪ್ರಶಸ್ತಿ, ಸೇವಾ ರತ್ನ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಖ್ಯಾತ ವೈದ್ಯ ಡಾ.ಗುರುರಾಜ್ ಹೆಬ್ಬಾರ್ ನಿಧನ
ಡಾ.ಗುರುರಾಜ್ ಹೆಬ್ಬಾರ್
Follow us
TV9 Web
| Updated By: ಆಯೇಷಾ ಬಾನು

Updated on:Sep 03, 2022 | 6:38 PM

ಹಾಸನ: ಹಾಸನ ಜಿಲ್ಲೆಯಲ್ಲಿ ಜನರ ಡಾಕ್ಟರ್ ಎಂದೇ ಹೆಸರಾಗಿದ್ದ, ಸರಳ ಸಜ್ಜನಿಕೆಯ ಡಾಕ್ಟರ್ ಡಾ.ಗುರುರಾಜ್ ಹೆಬ್ಬಾರ್ ಇಂದು ಕೊನೆಯುಸಿರೆಳೆದಿದ್ದಾರೆ, ವೈದ್ಯ ವೃತ್ತಿ ಜೊತೆಗೆ ಸಮಾಜ ಸೇವೆಯನ್ನೂ ಬದುಕಾಗಿಸಿಕೊಂಡಿದ್ದ ಹಿರಿಯ ವೈದ್ಯ ಡಾ. ಗುರುರಾಜ ಹೆಬ್ಬಾರ್(72) ಇಂದು ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆಪ್ತರು, ಅಭಿಮಾನಿಗಳು ಕಳೆದ ಆಗಸ್ಟ್ 19 ರಂದು ನಗರದ ಶ್ರೀ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿತ್ತು. ಜೀವನವಿಡಿ ಜನರಿಗಾಗಿ ದುಡಿದ ಅಪರೂಪದ ವ್ಯಕ್ತಿಗೆ ಗೌರವ ಸಮರ್ಪಣೆ ಮಾಡಿದ್ದರು. ಈಗ ಕೆಲವೇ ದಿನಗಳಲ್ಲಿ ಹೆಬ್ಬಾರರು ಎಲ್ಲರನ್ನು ಅಗಲಿ ಮರೆಯಾಗಿದ್ದಾರೆ. ಮೃತರು ತಮ್ಮ ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧುಗಳು, ಸ್ನೇಹಿತರು, ಆಪ್ತರನ್ಮು ಅಗಲಿದ್ದು, ಹೆಬ್ಬಾರ್ ಡಾಕ್ಟರ್ ನಿಧನಕ್ಕೆ ಅಪಾರ ಮಂದಿ ಕಂಬನಿ ಮಿಡಿದಿದ್ದಾರೆ.

1959 ಜ.1 ರಂದು ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳ ತಾಲೂಕಿನ ಸೋಮೇಶ್ವರದಲ್ಲಿ ಜನಿಸಿದ ಗುರುರಾಜ್ ಹೆಬ್ಬರ್, ಬಳಿಕ ಹಾಸನ ತಾಲ್ಲೂಕಿನ ಕಟ್ಟಾಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿದ್ದರು. ಹಾಸನದ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ವೈದ್ಯ ರಾಗಿ ತಮ್ಮ ಸೇವೆ ಆರಂಬಿಸಿದ್ದರು, ಆಲೂರು ತಾಲೂಕು ಪಾಳ್ಯದಲ್ಲಿ ಖಾಸಗಿ ಕ್ಲಿನಿಕ್ ತೆರೆದರು. ಬಳಿಕ ಬೈಚನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸಲ್ಲಿಸಿದ ಇವರು, ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ಹಾಸನದಲ್ಲಿ ಖಾಸಗಿ ಕ್ಲಿನಿಕ್ ತೆರೆದು, ತರುವಾಯ ಎಂ.ಜಿ.ರಸ್ತೆಯಲ್ಲಿ ಶ್ರೀ ರಾಮಕೃಷ್ಣ ನರ್ಸಿಂಗ್ ಹೋಂ ಸ್ಥಾಪಿಸಿದರು. ಹೆಬ್ಬಾರ್ ಅವರು ಕೇವಲ ವೈದ್ಯರಷ್ಟೇ ಅಲ್ಲ, ಸಮಾಜ ಸೇವಕರಾಗಿ ತಮ್ಮ ತನು ಮನ ಧನ ವ್ಯಯಿಸಿದರು. ಬಡವರ ಬಂಧುವಾಗಿ, ಬಡವರಿಗಾಗಿಯೇ ಹಾಸನದಲ್ಲಿ ಮೊದಲಿಗೆ ಸಹಕಾರಿ ತತ್ವದಡಿ ಜನಕಲ್ಯಾಣ ರೀಸರ್ಚ್ ಅಂಡ್ ಚಾರಿಟಬಲ್ ಟ್ರಸ್ಟ್ ನಿಂದ ಸಿ.ಟಿ ಸ್ಕ್ಯಾನ್ ಸೆಂಟರ್ ತೆರೆದರು. ಸಂಜೀವಿನಿ ಸಹಕಾರಿ ಆಸ್ಪತ್ರೆ, ಕಾಮಧೇನು ಸಹಕಾರಿ ವಿದ್ಯಾಶ್ರಮ( ವೃದ್ಧಾಶ್ರಮ), ರೈತ ಬಂಧು ಸಹಕಾರಿ ಸಂಸ್ಥೆ, ಪರಿಪೂರ್ಣ ಚಾರಿಟಬಲ್ ಟ್ರಸ್ಟ್‌ನಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೂ ಪದಾರ್ಪಣೆ ಮಾಡಿದ್ದರು.

ಅಷ್ಟೇ ಅಲ್ಲದೆ ನಂದಗೋಕುಲ ಶಿಶುಕೇಂದ್ರ, ಗೋ ಸಂರಕ್ಷಣೆ, ಪ್ರಾಣಿಹಿಂಸಾ ನಿವಾರಣಾ ಸಂಘ, ಹಾಸನಾಂಬ ಧರ್ಮಛತ್ರ ಹೀಗೆ ನಾನಾ ಸಂಸ್ಥೆಗಳನ್ನು ಕಟ್ಟಿ ಬಡವರು,ನಿರ್ಗತಿಕರು, ಅಲಕ್ಷಿತರ ಆಶಾಕಿರಣವಾಗಿದ್ದರು‌. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಶ್ರೀಯುತರು, ಬಡವರು, ದೀನ ದಲಿತರು, ಅಸಹಾಯಕರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಇದೇ ಕಾರಣಕ್ಕೆ ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದರು. ಅಸಹಾಯಕರಿಗೆ ಆರ್ಥಿಕ ನೆರವನ್ನೂ ಒದಗಿಸಿದ್ದರು. ಕೊಡುಗೈ ದಾನಿಯಾಗಿ ಕೈ ನೀಡಿ ನೀಡಿದರೇ ಹೊರತು, ಎಂದಿಗೂ, ಯಾರೊಂದಿಗೂ ಕೈ ಚಾಚಿದವರಲ್ಲ. ಸದಾ ಹಸನ್ಮುಖಿಯಾಗಿ ಎಲ್ಲರನ್ನೂ ಪ್ರೀತಿಸುವ, ಎಲ್ಲರನ್ನೂ ಸಮಾನವಾಗಿ ಕಾಣುವ ಜಾತ್ಯಾತೀತ ವ್ಯಕ್ತಿತ್ವ ಇವರದಾಗಿತ್ತು. ಅಜಾತ ಶತ್ರು ಎಂದೇ ಖ್ಯಾತನಾಮರಾಗಿದ್ದ ಹೆಬ್ಬಾರರು, ಶಿಸ್ತುಬದ್ಧ ಜೀವನ, ಭ್ರಷ್ಟಾಚಾರದ ಕಡುವೈರಿಯಾಗಿದ್ದರು. ಇಂಥ ಅಪರೂಪದ ವ್ಯಕ್ತಿತ್ವದ ವೈದ್ಯರು ಇನ್ನಿಲ್ಲವಾಗಿರುವುದು ಅಪಾರ ಮಂದಿಗೆ ಅತೀವ ನೋವು ತರಿಸಿದೆ.

ಹೆಬ್ಬಾರ್ ನಿಧನಕ್ಕೆ ದೇವೇಗೌಡರ ಸಂತಾಪ

ಜಿಲ್ಲೆಯ ಹಿರಿಯ ವೈದ್ಯರು, ಸಮಾಜ ಸೇವಕರಾದ ಡಾ. ಗುರುರಾಜ್ ಹೆಬ್ಬಾರ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನನ್ನ ಆತ್ಮೀಯ ಒಡನಾಡಿಯೂ ಆಗಿದ್ದ ಹೆಬ್ಬಾರರ ನಿಧನ ನನಗೆ ವೈಯಕ್ತಿಕವಾಗಿ ಅತೀವ ನೋವು ತಂದಿದೆ. ಶ್ರೀಯುತರು ವೈದ್ಯರಾಗಿ ಅಲ್ಲದೆ, ಸಮಾಜ ಸೇವಕರಾಗಿಯೂ ಅಪಾರ ಜನ ಮನ್ನಣೆ ಗಳಿಸಿದ್ದರು ಎಂದು ಸ್ಮರಿಸಿದ್ದಾರೆ. ಡಾ.ಮುನಿವೆಂಕಟೇಗೌಡರು, ಡಾ. ಗುರುರಾಜ್ ಹೆಬ್ಬಾರ್ ಅವರು ನನ್ನ ತವರು ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಬಡವರಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಸಾಕಷ್ಟು ಶ್ರಮಿಸಿದ್ದರು. ಅವರ ಸೇವೆ ಸದಾ ಸ್ಮರಣೀಯ ಎಂದು ಗುಣಗಾನ ಮಾಡಿದ್ದಾರೆ.

ಬೇರೆ ಜಿಲ್ಲೆಯಲ್ಲಿ ಹುಟ್ಟಿ ನಮ್ಮೂರಿಗೆ ಬಂದು ಬಡವರಿಗೆ ಶ್ರೀಯುತರು ಸ್ಪಂದಿಸಿದ ರೀತಿಯನ್ನು ಎಂದೂ ಮರೆಯಲಾಗದು. ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ, ಖಾಸಗಿಯಾಗಿಯೂ ಜನಸೇವೆ ಮಾಡಬಹುದು ಎಂಬುದನ್ನು ಹೆಬ್ಬಾರರು ತೋರಿಸಿಕೊಟ್ಟಿದ್ದರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವೇಗೌಡರು ಪ್ರಾರ್ಥಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:15 pm, Sat, 3 September 22