ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಕೆಎಸ್ಆರ್ಟಿಸಿ (KSRTC) ಸಿಬ್ಬಂದಿಯ ಎರಡು ಕುಟುಂಬಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramlinga Reddy) ಅವರು ನಿನ್ನೆ (ಜು.15) ರಂದು ತಲಾ 1 ಕೋಟಿ ರೂ. ಅಪಘಾತ ಪರಿಹಾರ ವಿಮೆ ಚೆಕ್ ವಿತರಿಸಿದರು. ಕೆ.ಎಸ್.ಆರ್.ಟಿ.ಸಿ ಯು ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆ ಅಡಿಯಲ್ಲಿ ತನ್ನ ಸಿಬ್ಬಂದಿಗಳಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮೆಯನ್ನು (On duty & Off Duty) ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾವತಿಯಿಂದ ಪ್ರೀಮಿಯಂ ರಹಿತ 50 ಲಕ್ಷ ರೂ. ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ರವರಿಂದ ವಾರ್ಷಿಕ 885 ರೂ. ಪ್ರೀಮಿಯಂ (ನೌಕರರಿಂದ) ಪಾವತಿಯ ಮೇರೆಗೆ 50 ಲಕ್ಷ ರೂಗಳ ವಿಮೆಯು ಒಳಗೊಂಡಿರುತ್ತದೆ.
ಈ ಯೋಜನೆಯಡಿಯಲ್ಲಿ ಸಿಬ್ಬಂದಿಗಳು ಕರ್ತವ್ಯದ ಮೇಲಿದ್ದಾಗ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಂದರ್ಭಗಳಲ್ಲಿಯೂ ಉಂಟಾಗುವ ಅಪಘಾತಗಳಿಗೂ ಸಹ ಈ ವಿಮಾ ಸೌಲಭ್ಯ ಅನ್ವಯಿಸುತ್ತದೆ.
ಸಾರಿಗೆ ಹಾಗೂ ಮುಜರಾಯಿ ಸಚಿವರು ಮತ್ತು ಅಧ್ಯಕ್ಷರು, ಕರಾರಸಾ ನಿಗಮರವರು ಈ ಎರಡು ಚಾಲನಾ ಸಿಬ್ಬಂದಿಗಳ ಕುಟುಂಬ ವರ್ಗದವರಿಗೆ ಅಪಘಾತ ಪರಿಹಾರ ವಿಮಾದ ತಲಾ 1 ರೂ. ಕೋಟಿಗಳ ಚೆಕ್ ವಿತರಿಸಿ ಸಾಂತ್ವನ ಹೇಳಿದರು.
ಈ ವೇಳೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ ಮೃತಪಟ್ಟ ಚಾಲನಾ ಸಿಬ್ಬಂದಿಗಳನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬಗಳ ಸುಭದ್ರತೆಗಾಗಿ ನಿಗಮವು ಜಾರಿಗೊಳಿಸಿರುವ ಈ ಅಪಘಾತ ಪರಿಹಾರ ವಿಮಾ ಯೋಜನೆಯು ಬಹಳ ಉತ್ತಮವಾಗಿದ್ದು, ಈ ಯೋಜನೆಯನ್ನು ಸಧ್ಯದಲ್ಲಿಯೇ ಇತರೆ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜಾರಿಗೊಳಿಸಲು ಕೂಡಲೇ ಕ್ರಮ ಜರುಗಿಸಲು ಸೂಚಿಸುವುದಾಗಿ ತಿಳಿಸಿದರು.
ಕುಟುಂಬದವರು ಹಣವನ್ನು ಬ್ಯಾಂಕಿನಲ್ಲಿ ಸ್ಥಿರ ಠೇವಣಿಯನ್ನು ಇಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ತಮ್ಮ ಮುಂದಿನ ಜೀವನಕ್ಕಾಗಿ ಕಾಪಾಡಿಕೊಳ್ಳಬೇಕು. ಅನುಕಂಪ ಆಧಾರದ ಮೇಲಿನ ಕೆಲಸಕ್ಕೆ ಅರ್ಜಿ ಸಲ್ಲಿಸಿ. ನಿಗಮದ ಸಿಬ್ಬಂದಿಗಳ ಹಾಗೂ ಕುಟುಂಬದವರ ಹಿತಾಸಕ್ತಿ ಕಾಪಾಡಲು ನಾವು ನಿಮ್ಮೊಡನೆ ಸದಾ ಇರುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿ. ಅನ್ಬುಕುಮಾರ್ ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ಸಾರಿಗೆ ಸಚಿವರು ಆದೇಶಿಸಿರುವಂತೆ ಕೂಡಲೇ ಅನುಕಂಪ ಆಧಾರದ ಮೇಲೆ ಕೆಲಸಕ್ಕೆ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್ ಬಿ.ಐ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರುಗಳಾದ ಹೆಚ್.ವಿ. ಅನಂತ ಸುಬ್ಬರಾವ್, ಬಿ. ಜಯದೇವರಾಜೇ ಅರಸು, ಜಿ.ಎಸ್. ಮಹದೇವಯ್ಯ, ಹೆಚ್.ಡಿ. ರೇವಪ್ಪ, ಎಸ್. ನಾಗರಾಜ, ವೆಂಕಟರಮಣಪ್ಪ ಮತ್ತು ಇತರರು ಹಾಗೂ ನಿಗಮದ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ