ಬೆಂಗಳೂರು: ಬೆಂಗಳೂರಿನ ಎಂಎಸ್ ಬಿಲ್ಡಿಂಡ್ನಲ್ಲಿ ನಡೆದ ಓಲಾ, ಉಬರ್ ಹಾಗೂ ರ‍್ಯಾಪಿಡೋ ಜೊತೆಗಿನ ಸಭೆ ಅಂತ್ಯವಾಗಿದೆ. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ವಿ.ಪ್ರಸಾದ್, ಇಲಾಖೆ ಆಯುಕ್ತ ಟಿಹೆಚ್ಎಂ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನೇಕ ವಿಚಾರಗಳು ಚರ್ಚೆಯಾಗಿದ್ದು ಸಭೆಯಲ್ಲಿ 2 ಕಿ.ಮೀ.ಗೆ ಆಟೋ ದರ 100 ರೂ. ನಿಗದಿ ಮಾಡಲು ಮನವಿ ಮಾಡಲಾಗಿದೆ.
ಪೀಕ್ ಟೈಮ್ ಸೇರಿದಂತೆ ಹಲವು ನೆಪಗಳಲ್ಲಿ ಗ್ರಾಹಕರನ್ನು ಮತ್ತು ಚಾಲಕರನ್ನು ಸುಲಿಯುತ್ತಿದ್ದ ಕಂಪನಿಗಳಿಗೆ ಹೊಸದಾಗಿ ದರ ನಿಗದಿಪಡಿಸಲು ಸರ್ಕಾರವು ಮುಂದಾಗಿದೆ. 15 ದಿನದೊಳಗೆ ಹೊಸ ದರ ನಿಗದಿ ಮಾಡುವಂತೆ ಹೈಕೋರ್ಟ್ ಈ ಹಿಂದೆ ಸೂಚಿಸಿತ್ತು. ಈ ಹಿನ್ನೆಲೆ ಕರ್ನಾಟಕ ಸರ್ಕಾರ ಓಲಾ, ಉಬರ್ ಱಪಿಡೋ, ಆಟೋ ಯೂನಿಯನ್ಗಳ ಜೊತೆ ಸಭೆ ನಡೆಸಿದೆ. ಈಗಾಗಲೇ ಬೆಂಗಳೂರು ನಗರ ಜಿಲ್ಲಾಧಿಕಾರಿ 2021 ರಲ್ಲೇ ಎರಡು ಕಿಮೀಗೆ 30ರೂ ಫಿಕ್ಸ್ ಮಾಡಲಾಗಿತ್ತು. ಆದ್ರೆ ಇದಕ್ಕೆ 30% ರಷ್ಟು ದರ ಹೆಚ್ಚಳ ಮಾಡಬೇಕು ಎಂದು ಕಂಪನಿಗಳು ಪಟ್ಟು ಹಿಡಿದಿವೆ. ಆದರೆ ಇದಕ್ಕೆ ಸಾರಿಗೆ ಅಧಿಕಾರಿಗಳು ನಮಗೆ ಈ ಬಗ್ಗೆ ಯಾವುದೇ ಮನವಿ ಬಂದಿಲ್ಲ ಎಂದಿದ್ದಾರೆ. ದರ ಹೆಚ್ಚಳ ಬಗ್ಗೆ ನಾವು ಈಗಾಗಲೇ ಹೆಚ್ಚುವರಿ ಆಯುಕ್ತ ಹೇಮಂತ್ ಕುಮಾರ್ ಅವರಿಗೆ ಮೇಲ್ ನಲ್ಲಿ ಮನವಿ ಮಾಡಿದ್ದೀವಿ ಎಂದು ಕಂಪನಿಗಳು ಸ್ಪಷ್ಟಪಡಿಸಿದ್ದು ಈ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು RTO ಕಮೀಷನರ್ ಟಿಎಚ್ಎಂ ಕುಮಾರ್ ಜಾರಿಕೊಂಡಿದ್ದಾರೆ. ಸಭೆಯಲ್ಲಿ ಸಾರಿಗೆ ಇಲಾಖೆಯಿಂದ ಕಂಪನಿಗಳ ದರ ಹೆಚ್ಚಳ ಮನವಿಗೆ ಒಪ್ಪಿಗೆ ಸೂಚಿಸಲಿಲ್ಲ. ಈ ಸಭೆಯ ಬಗ್ಗೆ ಹೈ ಕೋರ್ಟ್ ಗೆ ಮಾಹಿತಿ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ನವೆಂಬರ್- 7 ರಂದು ಹೈ ಕೋರ್ಟ್ ನಲ್ಲಿ ದರಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಯಲಿದೆ.
ಸಾರಿಗೆ ಇಲಾಖೆ ಅಧಿಕಾರಿಗಳು ಕಣ್ಣೋರೆಸುವ ತಂತ್ರ ಮಾಡ್ತಿದ್ದಾರೆ
ಸಭೆ ನಂತರ ಆಟೋ ರಿಕ್ಷಾ ಚಾಲಕರ ಪರ ವಕೀಲ ಅಮೃತೇಶ್ ಮಾತನಾಡಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳು ಕಣ್ಣೋರೆಸುವ ತಂತ್ರ ಮಾಡ್ತಿದ್ದಾರೆ. ಇದುವರೆಗೆ ಯಾವುದೇ ದರ ನಿಗದಿ ಮಾಡದೇ ಸಭೆ ಮುಗಿಸಿದ್ರು. ನವೆಂಬರ್ 7 ಕ್ಕೆ ಕೋರ್ಟಿನ ಮುಂದೆ ವರದಿ ನೀಡಬೇಕಿರುವ ಹಿನ್ನೆಲೆ ಸಭೆ ಕರೆದಿದ್ದೇವೆ ಅಂತ ಕೋರ್ಟ್ ಮುಂದೆ ಕಣ್ಣೋರೆಸೊ ತಂತ್ರ ಮಾಡ್ತಿದ್ದಾರೆ. ಕಳೆದ ಐದಾರು ವರ್ಷಗಳಿಂದ ಉಬರ್ ಆಪ್ ಗಳು ಹಗಲು ದರೋಡೆ ಮಾಡ್ತಿವೆ. ಸಭೆಯಲ್ಲಿ ನಾವು ವಿವರವಾಗಿ ತಿಳಿಸಿದ್ವಿ ಅದ್ರೂ ಕಾಟಾಚಾರಕ್ಕೆ ಸಭೆ ಮುಗಿಸಿದ್ದಾರೆ. ಯಾವುದೇ ಅಂತಿಮ ನಿರ್ಧಾರಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಬಂದಿಲ್ಲ. ಸಾರಿಗೆ ಇಲಾಖೆಯೇ ಅವರನ್ನ ಲೈಸೆನ್ಸ್ ಇಲ್ಲದೇ ಫ್ರಿ ಬಿಟ್ಟಿದ್ದಾರೆ. ಸಾರಿಗೆ ಇಲಾಖೆ ಉಬರ್ ಆಟೋ ನಿಲ್ಲಿಸಲು ಕೋರ್ಟ್ ನೆಪ ಕೊಡ್ತಿದೆ. ಯಾವುದೇ ಆಟೋ ಯೂನಿಯನ್ ಅವ್ರನ್ನ ಸಭೆಗೆ ಕರೆದಿಲ್ಲ. ಕೇವಲ ಆಪ್ ಆಧಾರಿತ ಕಂಪನಿಯವರನ್ನ ಮಾತ್ರ ಮೀಟಿಂಗ್ ಗೆ ಕರೆದಿದ್ದಾರೆ ಎಂದರು.
Published On - 1:15 pm, Sat, 29 October 22