Puneeth Rajkumar: ಪುನೀತ್ ಜೀವನ ಸಾಧನೆ ಪಠ್ಯ ಪುಸ್ತಕದಲ್ಲಿ ಸೇರಿಸುವ ಬಗ್ಗೆ ಸಚಿವ ಅಶೋಕ್ ಹೇಳಿದ್ದಿಷ್ಟು!
ನಟ ಪವರ್ ಸ್ಟಾರ್ ಪುನೀತ್ ಜೀವನ ಸಾಧನೆ ಶಾಲಾ ಪಠ್ಯ-ಪುಸ್ತಕದಲ್ಲಿ ಸೇರಿಸುವ ವಿಚಾರ ಮೊದಲ ಬಾರಿಗೆ ಬಹಿರಂಗವಾಗಿ ಪ್ರಸ್ತಾಪವಾಗಿದೆ. ಇನ್ನು ಈ ಬಗ್ಗೆ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು ಹೀಗೆ
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಿಧನರಾಗಿ ಇಂದಿಗೆ(ಅಕ್ಟೋಬರ್.29) ಒಂದು ವರ್ಷ ಕಳೆದಿದೆ. ಪುನಿತ್ ಅಗಲಿಕೆಯಿಂದ ಕುಟುಂಬದವರ ಜೊತೆಗೆ ಅವರ ಅಭಿಮಾನಿಗಳಿಗೆ ಆದ ನೋವು ಅಷ್ಟಿಷ್ಟಲ್ಲ. ಎಲ್ಲೆಡೆ ಅಪ್ಪು ಮೊದಲ ಪುಣ್ಯಸ್ಮರಣೆ ಮಾಡಲಾಗುತ್ತಿದೆ. ಇದರ ಮಧ್ಯೆ ನಟ ಪುನೀತ್ ಜೀವನ ಸಾಧನೆ ಶಾಲಾ ಪಠ್ಯ-ಪುಸ್ತಕದಲ್ಲಿ(School syllabus) ಸೇರಿಸುವ ವಿಚಾರ ಮೊದಲ ಬಾರಿಗೆ ಬಹಿರಂಗವಾಗಿ ಪ್ರಸ್ತಾಪವಾಗಿದೆ.
ಹೌದು…ನಟ ಪುನೀತ್ ಜೀವನ ಸಾಧನೆ ಪಠ್ಯದಲ್ಲಿ ಸೇರಿಸುವ ವಿಚಾರದ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ನಟ ಪುನೀತ್ ಜೀವನ ಸಾಧನೆ ಪಠ್ಯದಲ್ಲಿ ಸೇರಿಸುವ ಬಗ್ಗೆ ಎಂ, ಶಿಕ್ಷಣ ಸಚಿವರು ತೀರ್ಮಾನ ತೆಗೆದುಕೊಳ್ತಾರೆ. ಕೆಲವರ ಜೀವನ ಸಾಧನೆ ಸೇರಿಸಬೇಕು ಅಂದಾಗ ವಿಘ್ನ ಬರುತ್ತವೆ, ಆದರೆ, ಪುನೀತ್ ಅಂಥವರಿಗೆ ಆ ರೀತಿ ಯಾವುದೇ ಅಡ್ಡಿ ಬರಲ್ಲ. ಹೀಗಾಗಿ ಪುನೀತ್ ಜೀವನ ಸಾಧನೆ ಪಠ್ಯದಲ್ಲಿ ಸೇರಿಸಬೇಕು. ಮುಂದಿನ ವರ್ಷ ಪರಿಶೀಲನೆ ಮಾಡಿ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
‘ನಿಮ್ಮ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ’; ಅಶ್ವಿನಿ ಪುನೀತ್ ರಾಜ್ಕುಮಾರ್ ಭಾವುಕ ಪತ್ರ
ಈಗಾಗಲೇ ಪಠ್ಯ ಪರಿಷ್ಕರಣೆ ಸಂಬಂಧ ಕರ್ನಾಟಕದಲ್ಲಿ ದೊಡ್ಡ ಹೈಡ್ರಾಮಗಳೇ ನಡೆದಿವೆ. ಅದನ್ನು ಬಿಟ್ರು, ಇದನ್ನು ಸೇರಿಸಿದ್ರು ಅಂತ ಪ್ರತಿಭಟನೆಗಳು, ಆರೋಪ-ಪ್ರತ್ಯಾರೋಪಗಳು ನಡೆದಿವೆ. ಇವೆಲ್ಲದರ ನಡುವೆ ಅಪ್ಪು ಅವರನ್ನು ಪಠ್ಯದಲ್ಲಿ ಕಾಣಬೇಕೆನ್ನುವ ಆಶಯ ಅಭಿಮಾನಿಗಳದ್ದಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಪುನೀತ್ ಅವರ ಜೀವನ ಸಾಧನೆಗಳನ್ನ ಶಾಲಾ ಪಠ್ಯ ಪುಸ್ತಕದಲ್ಲಿ ಸೇರಿಸುವ ಬಗ್ಗೆ ಪ್ರಸ್ತಾಪವಾಗಿದೆ. ಈ ವಿಚಾರದ ಬಗ್ಗೆ ಬಹಿರಂಗವಾಗಿಯೇ ಸಚಿವ ಅಶೋಕ್ ಭರವಸೆ ಮಾತುಳನ್ನಾಡಿದ್ದು, ಮುಂದಿನ ದಿನಗಳ ವರೆಗೆ ಕಾದುನೋಡಬೇಕಿದೆ. ಇನ್ನು ಪುನೀತ್ ಅಭಿಮಾನಿಗಳು ಸಹ ಇನ್ಮುಂದೆ ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವ ಸಾಧ್ಯತೆಗಳಿವೆ.
ಚಿಕ್ಕ ವಯಸ್ಸಿನಲ್ಲೇ ಪುನೀತ್ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಸಾಮಾಜಿಕ ಕ್ಷೇತ್ರದಲ್ಲೂ ಸಹ ಎಲ್ಲೂ ಹೇಳಿಕೊಳ್ಳದೇ ತಮ್ಮದೇಯಾದ ಕೊಡುಗೆಗಳನ್ನು ನೀಡಿದ್ದಾರೆ. ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯಾಗಿ ಉಳಿದುಕೊಂಡಿದ್ದಾರೆ. ಇದರಿಂದ ಅಪ್ಪು ಜೀವನ ಮತ್ತು ಅವರ ಸಾಧನೆಗಳನ್ನು ಶಾಲಾ ಪಠ್ಯದಲ್ಲಿ ಅವಳವಡಿಸಿದರೆ ತಪ್ಪೇನಿಲ್ಲ ಎನ್ನುವುದು ಅಭಿಮಾನಿಗಳ ಮಾತು.