‘ನಿಮ್ಮ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ’; ಅಶ್ವಿನಿ ಪುನೀತ್ ರಾಜ್ಕುಮಾರ್ ಭಾವುಕ ಪತ್ರ
ಪುನೀತ್ ನಿಧನದ ನಂತರದಲ್ಲಿ ಸರ್ಕಾರದಿಂದ, ಸೆಲೆಬ್ರಿಟಿಗಳಿಂದ ಹಾಗೂ ಅಭಿಮಾನಿಗಳಿಂದ ರಾಜ್ಕುಮಾರ್ ಕುಟುಂಬಕ್ಕೆ ಸಾಕಷ್ಟು ಬೆಂಬಲ ಸಿಕ್ಕಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಿಧನ ಹೊಂದಿ ಇಂದಿಗೆ (ಅಕ್ಟೋಬರ್ 29) ಒಂದು ವರ್ಷ ಪೂರ್ಣಗೊಂಡಿದೆ. 365 ದಿನಗಳಲ್ಲಿ ಅಭಿಮಾನಿಗಳು ಹಾಗೂ ಕುಟುಂಬದವರು ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ಕಣ್ಣೀರಲ್ಲಿ ಕೈ ತೊಳೆದಿದ್ದಾರೆ. ಪುನೀತ್ ರಾಜ್ಕುಮಾರ್ ಅವರು ಇಲ್ಲ ಎಂಬುದನ್ನು ಈಗಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ನಿಧನದ ನಂತರದಲ್ಲಿ ಅಶ್ವಿನಿ ಅವರು ಮಾತನಾಡಿದ್ದು ತುಂಬಾನೇ ಕಡಿಮೆ. ಅವರು ಕೇಲವೇ ಕೆಲವು ಸಂದರ್ಭಗಳಲ್ಲಿ ಮೌನ ಮುರಿದಿದ್ದಾರೆ. ಈಗ ಮೊದಲ ವರ್ಷದ ಪುಣ್ಯತಿಥಿಯಂದು ಭಾವುಕರಾಗಿ ಅಶ್ವಿನಿ ಪತ್ರ ಬರೆದಿದ್ದಾರೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
‘ನೆನಪಿನ ಸಾಗರದಲ್ಲಿ’ ಎಂಬ ಸಾಲುಗಳೊಂದಿಗೆ ಪತ್ರ ಆರಂಭಿಸಿದ್ದಾರೆ ಅಶ್ವಿನಿ. ‘ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ, ನಮ್ಮ ಆಲೋಚನೆಗಳಲ್ಲಿ, ನಾವು ಮಾಡುವ ಸತ್ಕಾರ್ಯಗಳಲ್ಲಿ, ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬ ಸದಸ್ಯರು, ಅವರ ಸಾವಿರಾರು ಸ್ನೇಹಿತರು ಹಾಗು ಕೋಟ್ಯಾಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ’ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ.
‘ಅಪ್ಪು ಅವರ ಮೇಲೆ ನಿಮ್ಮೆಲ್ಲರಿಗೆ ಇರುವ ಪ್ರೀತಿ ಮತ್ತು ಗೌರವದಿಂದ, ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ನಮನಗಳು’ ಎಂದು ಅಶ್ವಿನಿ ಪತ್ರವನ್ನು ಕೊನೆಗೊಳಿಸಿದ್ದಾರೆ. ಪುನೀತ್ ನಿಧನದ ನಂತರದಲ್ಲಿ ಸರ್ಕಾರದಿಂದ, ಸೆಲೆಬ್ರಿಟಿಗಳಿಂದ ಹಾಗೂ ಅಭಿಮಾನಿಗಳಿಂದ ರಾಜ್ಕುಮಾರ್ ಕುಟುಂಬಕ್ಕೆ ಸಾಕಷ್ಟು ಬೆಂಬಲ ಸಿಕ್ಕಿದೆ.
ನೆನಪಿನ ಸಾಗರದಲ್ಲಿ ಒಂದು ವರ್ಷ… In the ocean of memories…#DrPuneethRajkumar pic.twitter.com/7J702hv6zG
— Ashwini Puneeth Rajkumar (@Ashwini_PRK) October 29, 2022
ಇದನ್ನೂ ಓದಿ: Puneeth Rajkumar: ಪುನೀತ್ ರಾಜ್ಕುಮಾರ್ ಅವರ ಕೊನೇ ಫೋಟೋ ತೋರಿಸಿ ಶೋಕಗೀತೆ ಹಾಡಿದ ಗುರುಕಿರಣ್
ಪುನೀತ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ರಾಜ್ ಕುಟುಂಬದ ಸದಸ್ಯರು ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಹೋಗಿ ಪೂಜೆ ಮಾಡಿದ್ದಾರೆ. ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಅವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಅನೇಕರು ಅಪ್ಪುನ ನೆನೆದು ಕಣ್ಣೀರು ಹಾಕಿದ್ದಾರೆ.
Published On - 2:38 pm, Sat, 29 October 22