ಜಗ್ಗೇಶ್ರನ್ನು ತೋರಿಸಿ ‘ಇದು ನಮ್ಮ ರಜನಿಕಾಂತ’ ಎಂದು ಅಪ್ಪುಗೆ ಪರಿಚಯಿಸಿದ್ದ ಅಣ್ಣಾವ್ರು; ಪೋಟೋ ಹಿಂದಿನ ಕಥೆ
Jaggesh | Puneeth Rajkumar: ಅದು ರಾಘವೇಂದ್ರ ರಾಜ್ಕುಮಾರ್ ಅವರ ಮದುವೆಯ ಸಂದರ್ಭ. ಆಗ ಮೊದಲ ಬಾರಿಗೆ ಪುನೀತ್ ಅವರನ್ನು ಭೇಟಿ ಆಗುವ ಅವಕಾಶ ಜಗ್ಗೇಶ್ಗೆ ಸಿಕ್ಕಿತ್ತು.

ಇಂದು (ಅ.29) ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಪುಣ್ಯ ಸ್ಮರಣೆ. ಆ ಪ್ರಯುಕ್ತ ಹಲವು ಬಗೆಯಲ್ಲಿ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ. ಡಾ. ರಾಜ್ಕುಮಾರ್ (Dr Rajkumar) ಕುಟುಂಬದ ಬಗ್ಗೆ ನಟ ಜಗ್ಗೇಶ್ ಅವರಿಗೆ ಎಲ್ಲಿಲ್ಲದ ಗೌರವ. ಈ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದುಂಟು. ನಟ ಪುನೀತ್ ರಾಜ್ಕುಮಾರ್ ಎಂದರೆ ಜಗ್ಗೇಶ್ಗೆ ವಿಶೇಷ ಆಭಿಮಾನ. ಆದರೆ ಇಂದು ಅಪ್ಪು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಅವರ ಜೊತೆ ಒಡನಾಡಿದ ಕ್ಷಣಗಳನ್ನು ಎಲ್ಲರೂ ಮೆಲುಕು ಹಾಕುತ್ತಿದ್ದಾರೆ. ಅಪ್ಪು ಅವರನ್ನು ಮೊದಲ ಬಾರಿ ಭೇಟಿಯಾದ ಸಂದರ್ಭವನ್ನು ಜಗ್ಗೇಶ್ (Jaggesh) ಅವರು ಈಗ ನೆನಪಿಸಿಕೊಂಡಿದ್ದಾರೆ. ಅದರ ಜೊತೆಗೆ ಅವರು ಹಂಚಿಕೊಂಡಿರುವ ಫೋಟೋ ಕೂಡ ಗಮನ ಸೆಳೆಯುತ್ತಿದೆ.
ಅದು ರಾಘವೇಂದ್ರ ರಾಜ್ಕುಮಾರ್ ಅವರ ಮದುವೆಯ ಸಂದರ್ಭ. ಆಗ ಮೊದಲ ಬಾರಿಗೆ ಪುನೀತ್ ಅವರನ್ನು ಭೇಟಿ ಆಗುವ ಅವಕಾಶ ಜಗ್ಗೇಶ್ಗೆ ಸಿಕ್ಕಿತ್ತು. ಆ ಘಟನೆಯನ್ನು ಅವರು ತಮ್ಮದೇ ಸಾಲುಗಳಲ್ಲಿ ವಿವರಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತು ‘ನವರಸ ನಾಯಕ’ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ರಾಘಣನ ಮದುವೆಗೆ ಬರಬೇಕು ಎಂದು ವಜ್ರೇಶ್ವರಿ ಮ್ಯಾನೇಜರ್ ಕಂಠೀರವ ಕುಮಾರ್ ತಿಳಿಸಿದ. ಅಣ್ಣನ ಮನೆಯ ಮದುವೆ ಸಡಗರದಲ್ಲಿ ಭಾಗಿಯಾಗುವ ಸೌಭಾಗ್ಯ. ಪರಿಮಳನಿಗೆ ತಯಾರಾಗಲು ಹೇಳಿದೆ. ಆಗ ನನ್ನ ಬಳಿ ಇದ್ದದ್ದು ಬುಲೆಟ್. ಅದನ್ನ ಏರಿ ಪುನೀತ ಫಾರ್ಮ್ಗೆ ಹೋದೆವು. ಅಣ್ಣನ ಪ್ರೀತಿಗೆ ಏನು ಹೇಳಬೇಕೋ. ‘ಬಾರಯ್ಯ ಬಾ’ ಎಂದು ಕೂಗಿ ಮೈ ಸವರಿ, ಅವರೇ ಕುಡಿಯಲು ಪಾನಿಯ ನೀಡಿದರು. ಬಂದವರಿಗೆಲ್ಲಾ ನನ್ನ ಪರಿಚಯಿಸಿದರು. ಅದರಲ್ಲಿ ನನ್ನ ವಿಶೇಷ ಪುನೀತ್. ‘ಕಂದ ಇದು ಯಾರು ಗೊತ್ತ? ನಮ್ಮ ರಜನಿಕಾಂತ’ ಎಂದರು. ಬಾಲಕ ಪುನೀತ ಆಶ್ಚರ್ಯದಿಂದ ನನ್ನ ನೋಡಿದ. ನನಗೂ ಆತನ ನೋಡಿ ಆನಂದವಾಯಿತು’ ಎಂದು ಜಗ್ಗೇಶ್ ಬರಹ ಆರಂಭಿಸಿದ್ದಾರೆ.
‘ಕೆಲ ವರ್ಷ ನಂತರ ಅಣ್ಣನ ಜೊತೆ ಕಲಾವಿದ ಸಂಘದ ಕಾರ್ಯಕ್ರಮದಲ್ಲಿ ಪುನೀತ ನರ್ತಿಸಿದ. ಆಗ ಅವನು ಪ್ರೀತಿಸುವ ಹುಡುಗಿ ಬಂದಿದ್ದಾಳೆ ಅಂತ ಅಮ್ಮ ಎಂದರು. ಜನರ ಮದ್ಯೆ ನನ್ನ ಕಣ್ಣಿಗೆ ಅಶ್ವಿನಿ ಕಾಣಲಿಲ್ಲ. ನಂತರ ಮದುವೆ, ಸೂಪರ್ ಸ್ಟಾರ್ ಎಲ್ಲಾ ಆದರೂ ಅದೇನು ವಿಪರೀತ ಇಷ್ಟಪಡುತ್ತಿದ್ದ. ನಮ್ಮ ಸ್ನೇಹ ವರ್ಣಿಸಲಾಗದ ಸಂಕೋಲೆ. ಕಡೆಯ ದಿನಗಳು ಎಂದು ಭಾವಿಸಲಿಲ್ಲ. ನಿರ್ದೇಶಕ ಸಂತೋಷ ಪುನೀತನ ಜೊತೆ ಮಂತ್ರಾಲಯಕ್ಕೆ ಕರೆದುಕೊಂಡು ಹೋದ. ಆ ದಿನ ಮನಬಿಚ್ಚಿ ಮಾತಾಡಿ ನಕ್ಕು ಸಮಯ ಕಳೆದೆವು. ಕಡೆಯ 3 ದಿನದ ಹಿಂದೆ ಪುನೀತ ಮಲ್ಲೇಶ್ವರಕ್ಕೆ ಬಂದ ವಿಷಯವನ್ನು ಯೋಗಿ ತಿಳಿಸಿದ. ಕರೆ ಮಾಡಿದೆ. ಅಣ್ಣ ಮಲ್ಲೇಶ್ವರದಲ್ಲಿ ಇರುವೆ ಎಂದ. ಹಾಗೆ ಎದ್ದು ಕಾರ್ ಡ್ರೈವ್ ಮಾಡಿ ಹೋದೆ. ಪೂಜೆಗೆ ಕುಳಿತು ತೊಡೆ ನೋವಾಗಿದೆ ಹಾಗಾಗಿ ಚಿಕಿತ್ಸೆಗೆ ಬಂದೆ ಎಂದ. ಚಿಕಿತ್ಸೆ ಮುಗಿದ ಮೇಲೆ ಸತೀಶ್, ನಾನು, ಪುನೀತ ಕೆಲ ಸಮಯ ಮಾತಾಡಿ ನಿರ್ಗಮಿಸಿದೆವು’ ಎಂದು ಆ ಘಟನೆಯನ್ನು ಜಗ್ಗೇಶ್ ನೆನಪಿಸಿಕೊಂಡಿದ್ದಾರೆ.
‘ಇದಾದ 3 ದಿನಕ್ಕೆ ಪುನೀತ ಹೋಗಿಬಿಟ್ಟ ಅಂದರು. ಹೃದಯ ಒಡೆದು ಚೂರಾಯಿತು. ಜೀವನದ ಆಸಕ್ತಿ, ಬದುಕಿನ ಮೇಲೆ ನಂಬಿಕೆ, ನಾವು ಯಾರು? ಈ ಭೂಮಿಗೆ ಏಕೆ ಬಂದೆವು? ಎಲ್ಲಾ ಇದೆ, ಮುಂದೆ ಇರದು. ಯಾವುದು ಸತ್ಯ? ಯಾವುದು ಮಿತ್ಯ? ನಾನು ಹೇಗೆ ಇರಬೇಕು? ಏನು ಮಾಡಬೇಕು? ಬದುಕು ನಶ್ವರ ಎಂಬ ಅನೇಕ ಪ್ರಶ್ನೆ ನನ್ನ ಕಾಡುತ್ತಿದೆ. ನನ್ನೊಳಗೆ ನಾನು ಬಚ್ಚಿಕೊಂಡು ಸುಮ್ಮನೆ ಇರುವಂತೆ ನಟಿಸಿ ಬದುಕುತ್ತಿರುವೆ. ನನ್ನವರು ಎಂದು ಸಿಕ್ಕಾಗ ಮನಬಿಚ್ಚಿ ಮಾತಾಡುವೆ. ಕೆಲಸ ಇದ್ದಾಗ ಮಾಡುವೆ. ಮಿಕ್ಕಂತೆ ಯಾರಿಗೂ ಸಿಗದೇ ಏಕಾಂತಕ್ಕೆ ಜಾರುವೆ. ಇದು ಪುನೀತ ಸಿಕ್ಕಾಗ, ಇದ್ದಾಗ, ಹೋದಮೇಲೆ ನನ್ನ ಹೃದಯದ ಅನಿಸಿಕೆ’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
View this post on Instagram
‘ಕಡೆಯ ಮಾತು: ಪುನೀತ, ಅವರ ತಂದೆಯ ಮೀರಿ ಬೆಳೆದು ಉಳಿದ ದೇವಮಾನವ’ ಎಂದು ಜಗ್ಗೇಶ್ ಅವರು ಬರಹ ಪೂರ್ಣಗೊಳಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








