ಪುನೀತ್ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ; ನಟ ಜೂ. ಎನ್ಟಿಆರ್-ರಜನಿಕಾಂತ್ ಭಾಗಿ
Karnataka Ratna Puneeth Rajkumar: ಪುನೀತ್ ರಾಜ್ಕುಮಾರ್ ಪರವಾಗಿ ಪತ್ನಿ ಅಶ್ವಿನಿ ಅವರು ‘ಕರ್ನಾಟಕ ರತ್ನ’ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ ಸಾಕ್ಷಿ ಆಗಲಿದ್ದಾರೆ.
ನವೆಂಬರ್ 1ರಂದು ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ವಿಧಾನಸೌಧದಲ್ಲಿ ಈ ಸಮಾರಂಭ ನಡೆಯಲಿದೆ. ಕನ್ನಡ ರಾಜ್ಯೋತ್ಸವದ ದಿನವೇ ಅಪ್ಪುಗೆ ಈ ಗೌರವ ಸಲ್ಲಿಕೆ ಆಗುತ್ತಿದೆ. ಈ ಸಮಾರಂಭಕ್ಕೆ ಸಾಕ್ಷಿಯಾಗಲು ತೆಲುಗು ಚಿತ್ರರಂಗದ ಸ್ಟಾರ್ ನಟ ಜೂನಿಯರ್ ಎನ್ಟಿಆರ್ (Jr NTR) ಹಾಗೂ ರಜನಿಕಾಂತ್ ಅವರು ಆಗಮಿಸುವುದು ಖಚಿತ ಆಗಿದೆ. ಕರ್ನಾಟಕ ಸರ್ಕಾರದಿಂದ ಅವರಿಗೆ ಆಹ್ವಾನ ನೀಡಲಾಗಿದೆ. ಆಹ್ವಾನ ಸ್ವೀಕರಿಸಿರುವ ಅವರು ಕರ್ನಾಟಕ ರತ್ನ ಪ್ರಶಸ್ತಿ (Karnataka Ratna) ಪ್ರದಾನ ಸಮಾರಂಭಕ್ಕೆ ಬರಲು ಒಪ್ಪಿದ್ದಾರೆ.
ಪುನೀತ್ ರಾಜ್ಕುಮಾರ್ ಅವರಿಗೆ ಎಲ್ಲ ಭಾಷೆಯ ಚಿತ್ರರಂಗದ ನಟರ ಜೊತೆಗೆ ಒಳ್ಳೆಯ ಒಡನಾಟ ಇತ್ತು. ಎಲ್ಲರನ್ನೂ ಅವರು ಸಮಾನವಾಗಿ ಪ್ರೀತಿಸುತ್ತಿದ್ದರು. ಜೂನಿಯರ್ ಎನ್ಟಿಆರ್ ಜೊತೆಗೂ ಅವರು ಬಾಂಧವ್ಯ ಹೊಂದಿದ್ದರು. ಅಪ್ಪು ನಟಿಸಿದ್ದ ‘ಚಕ್ರವ್ಯೂಹ’ ಸಿನಿಮಾದ ‘ಗೆಳೆಯಾ.. ಗೆಳೆಯಾ..’ ಹಾಡಿಗೆ ಜೂನಿಯರ್ ಎನ್ಟಿಆರ್ ಧ್ವನಿ ನೀಡಿದ್ದರು. ನೋವಿನ ಸಂಗತಿ ಎಂದರೆ ಇಂದು ಅವರ ಗೆಳೆಯ ಪುನೀತ್ ರಾಜ್ಕುಮಾರ್ ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಮರಣೋತ್ತರವಾಗಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗುತ್ತಿದೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಜೂನಿಯರ್ ಎನ್ಟಿಆರ್, ರಜನಿಕಾಂತ್ ಆಗಮಿಸುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಪರವಾಗಿ ಅವರ ಪತ್ನಿ ಅಶ್ವಿನಿ ಅವರು ‘ಕರ್ನಾಟಕ ರತ್ನ’ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಡಾ. ರಾಜ್ಕುಮಾರ್ ಕುಟುಂಬದ ಸದಸ್ಯರು ಸಾಕ್ಷಿ ಆಗಲಿದ್ದಾರೆ. ಈ ಕ್ಷಣವನ್ನು ಸಂಭ್ರಮಿಸಲು ಅಪ್ಪು ಅಭಿಮಾನಿಗಳು ಕಾದಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಕೇವಲ ನಟನಾಗಿ ಮಾತ್ರ ಜನಮನ ಗೆದ್ದವರಲ್ಲ. ಅನೇಕ ಸಾಮಾಜಿಕ ಕೆಲಸಗಳು ಕೂಡ ಅವರಿಂದ ಆಗಿತ್ತು. ಆ ಕಾರಣದಿಂದಲೂ ಅವರು ದೇಶದ ಯುವ ಜನತೆಗೆ ಮಾದರಿ ಆಗಿದ್ದಾರೆ. ಕಲಾ ಕ್ಷೇತ್ರ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪುನೀತ್ ನಿಧನರಾಗಿ ಇಂದಿಗೆ (ಅ.29) ಒಂದು ವರ್ಷ ಕಳೆದಿದೆ. ಕುಟುಂಬದವರು ಅವರ ಪುಣ್ಯ ಸ್ಮರಣೆ ಸಲುವಾಗಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:24 am, Sat, 29 October 22